ಇತ್ತೀಚಿನ ಸುದ್ದಿ
ತುಳುನಾಡಿನಲ್ಲಿ ನಿರುದ್ಯೋಗಿಗಳ ದಂಡು ಸೃಷ್ಟಿಸಿದ್ದೇ ಸಂಸದ ನಳಿನ್ ಅವರ ಸಾಧನೆ : ಮುನೀರ್ ಕಾಟಿಪಳ್ಳ
28/10/2021, 10:26
ಮಂಗಳೂರು(reporterkarnataka.com): ಮಂಗಳೂರು ಸೆಝ್ ಗೆ ಭೂಮಿ ಕಳೆದು ಕೊಂಡಿರುವ ಸಂತ್ರಸ್ತ ಕುಟುಂಬದ ಅಭ್ಯರ್ಥಿಗಳನ್ನು ಒಪ್ಪಂದದಂತೆ ತಕ್ಷಣ ನೇಮಕಾತಿಗೊಳಿಸಬೇಕು, ಜೆಬಿಎಫ್ ಕಂಪೆನಿ ಉತ್ಪಾದನೆ ಆರಂಭಿಸಬೇಕು, ಸೆಝ್ ನಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ಮೀಸಲಿಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಡಿವೈಎಫ್ಐ ಮಂಗಳೂರು ನಗರ ಸಮಿತಿ ಜೋಕಟ್ಟೆಯಲ್ಲಿರುವ ಸೆಝ್ ಪ್ರಧಾನ ದ್ವಾರದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿತು.
ಧರಣಿಯನ್ನು ಉದ್ಘಾಟಿಸಿ ಮಾತಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸೆಝ್ ಮುಂತಾದ ಕಂಪೆನಿಗಳಿಗೆ ಫಲವತ್ತಾದ ಜಮೀನು ವಶಪಡಿಸಿಕೊಳ್ಳುವಾಗ ಉದ್ಯೋಗ ಸೃಷ್ಟಿ, ಅಭಿವೃದ್ದಿಯ ಮಂತ್ರ ಜಪಿಸುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಶಾಸಕರು, ಮುಖಂಡರು ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗ ನೀಡದೆ ಹೊರಗಟ್ಟಿದಾಗ ಮೌನಕ್ಕೆ ಶರಣಾಗುತ್ತಾರೆ ಹಾಗೂ ಧರ್ಮ, ದೇವರ ವಿಷಯ ಮುಂದಿಟ್ಟು ಜನರ ದಿಕ್ಕುತಪ್ಪಿಸುತ್ತಾರೆ. ತುಳುನಾಡಿನಲ್ಲಿ ನಿರುದ್ಯೋಗ ಭೀಕರ ಸ್ವರೂಪ ತಾಳಲು ಬಿಜೆಪಿ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯೇ ನೇರ ಕಾರಣ. ದಂಡು ದಂಡು ನಿರುದ್ಯೋಗಿಗಳನ್ನು ಸೃಷ್ಟಿಸಿದ್ದೇ ಸಂಸದ ನಳಿನ್ ಕುಮಾರ್ ಕಟೀಲ್ ರ ಸಾಧನೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ನಾಗರಿಕ ಹೋರಾಟ ಸಮಿತಿಯ ಅಬೂಬಕ್ಕರ್ ಭಾವ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ಮುಖಂಡರಾದ ಆಶಾ ಬೋಳೂರು, ಸಿಲ್ವಿಯಾ ಜೋಕಟ್ಟೆ, ಮಕ್ಸೂದ್ ಕಾನ, ಮುಸ್ತಫಾ ಬೈಕಂಪಾಡಿ, ನಿತಿನ್ ಬಂಗೇರ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬಿ ಎಸ್ ಬಶೀರ್, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ನವಾಜ್, ಬಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆದಂ ಕಳವಾರು, ತೋಕೂರು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸಂಸು ಇದ್ದಿನಬ್ಬ, ಶೇಖರ್ ನಿರ್ಮುಂಜೆ, ವಿಶ್ವನಾಥ ಜೋಕಟ್ಟೆ, ಆಮಿನಮ್ಮ, ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು. ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯ ಶ್ರೀನಾಥ್ ಕುಲಾಲ್ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.
ಧರಣಿಗೆ ಮಂಚಿತವಾಗಿ ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗದಿಂದ ಸೆಝ್ ದ್ವಾರದ ವರಗೆ ಮೆರವಣಿಗೆ ನಡೆಯಿತು. ಸೆಝ್ ನ ಹಿರಿಯ ಅಧಿಕಾರಿಗಳಾದ ಹಿಟಾ ಶ್ರೀನಿವಾಸ ರಾಜು, ಯೋಗೀಶ್, ಹನೀಫ್ ಪ್ರತಿಭಟನಾಕಾರ ಬಳಿ ಬಂದು ಮನವಿ ಸ್ವೀಕರಿಸಿದರು.