ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಜನರ ರಕ್ತ ಹೀರುವ ದರ ಬೀಜಾಸುರ ಸರಕಾರ: ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ
01/04/2025, 15:32

*ಕಸದ ಮೇಲೆಯೂ ಸೆಸ್; ಕೇಂದ್ರ ಸಚಿವರ ಆಕ್ರೋಶ*
ನವದೆಹಲಿ/ಬೆಂಗಳೂರು(reporterkarnataka.com: ರಾಜ್ಯದಲ್ಲಿ ‘ದರ ಬೀಜಾಸುರ’ ಸರಕಾರ ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ! ಜನರ ರಕ್ತ ಹೀರುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರಕಾರ ದಿನಕ್ಕೊಂದು ಸುಳ್ಳು ಹೇಳುತ್ತಿದೆ. ತಿಂಗಳಿಗೊಂದು ದರ ಏರಿಕೆ ಮಾಡುತ್ತಿದೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು! ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ ಏರಿಕೆಗೆ ಪಂಚ ಗ್ಯಾರೆಂಟಿಯನ್ನು ನೆಪ ಮಾಡಿಕೊಂಡಿದೆ. ಆದರೆ ಸರ್ಕಾರದ ದುರುದ್ದೇಶ: ಜನರ ಲೂಟಿ ಮಾಡುವುದಷ್ಟೇ. ಭಾರತದ ಮೇಲೆ ಆಕ್ರಮಣ ನಡೆಸಿ ನಿರಂತರ ಲೂಟಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಅವರಿಬ್ಬರೂ ನಾಚುವಂತೆ ಕನ್ನಡಿಗರ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ದುರಾಡಳಿತದಿಂದ ಸಮೃದ್ಧ ಕರ್ನಾಟಕವನ್ನಹೀರುವ್ಬಾದ್ ಮಾಡಿರುವ ಕಾಂಗ್ರೆಸ್ ಕಂಪನಿ ಸರಕಾರ ದರಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ ಎಂದು ಗುರುತರ ಆರೋಪ ಮಾಡಿರುವ ಅವರು; ನೀರು, ಮೆಟ್ರೋ ರೈಲು, KSRTC ಬಸ್ ಟಿಕೆಟ್, ಹಾಲು (3 ಸಲ ದರ ಏರಿಕೆ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್ ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ. ಇದು ದರ ಬೀಜಾಸುರ ಕಾಂಗ್ರೆಸ್ ಸರಕಾರ ಎಂದು ದೂರಿದ್ದಾರೆ.
ಇಷ್ಟು ಸಾಲದೆಂಬಂತೆ ಜನರ ಮೇಲೆ ಏಪ್ರಿಲ್ 1ರಿಂದ ಕಸದ ಸೆಸ್ (Garbage Cess) ಹೇರುತ್ತಿದೆ ದರಬೀಜಾಸುರ ಸರಕಾರ!! ಕಸ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಗುರಿ ಹಾಕಿಕೊಂಡಿದೆ ಎಂದಿರುವ ಸಚಿವರು; ಸರಕಾರವನ್ನು ದರ ಬೀಜಾಸುರ ಸರಕಾರ ಎಂದು ಕರೆದಿದ್ದಾರೆ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿ ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್, ಕಾಂಗ್ರೆಸ್ ಕಂಪನಿ ಸರಕಾರ ಎಂದು ಮೂಡಿಸಿದ್ದಾರೆ.