2:24 AM Friday15 - August 2025
ಬ್ರೇಕಿಂಗ್ ನ್ಯೂಸ್
‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಇತ್ತೀಚಿನ ಸುದ್ದಿ

ಮರೆತು ಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

24/06/2025, 23:29

ಗೋಕರ್ಣ(reporterkarnataka.com): ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ನಾವು ನಮ್ಮ ಭಾಷೆಯನ್ನು ಮಾತನಾಡುವುದು ದೇಶ, ಸಂಸ್ಕøತಿ, ಭಾಷೆ, ಪರಂಪರೆಗೆ ನಾವು ಸಲ್ಲಿಸುವ ಅತಿದೊಡ್ಡ ಸೇವೆ. ಇದು ಜೀವನಕ್ಕೆ ಸ್ವಾರಸ್ಯವನ್ನೂ ತರುತ್ತದೆ ಎಂದರು.
ಶುದ್ಧವಾದ ಮಾತೃಭಾಷೆಯನ್ನು ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ. ಪರಕೀಯತೆ ನಮ್ಮ ನಾಲಿಗೆಯಲ್ಲೇ ಇದೆ. ನಮ್ಮ ನಾಲಿಗೆ ಕೆಡಿಸಿಕೊಳ್ಳದಿರೋಣ. ಸಂಸ್ಕಾರದಿಂದ ಶಬ್ದ. ಶಬ್ದದಿಂದ ವಾಕ್ಯ; ಅದು ಭಾಷೆಯ ಮೂಲ. ಆದ್ದರಿಂದ ಪ್ರತಿ ಪದವೂ ತನ್ನೊಂದಿಗೆ ಆ ಭಾಷೆಯ ಸಂಸ್ಕಾರವನ್ನು ತರುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದು ಪ್ರತಿಪಾದಿಸಿದರು.
ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆಯನ್ನು ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.
“ಮನೆಮಾತು ಮರೆತು ಹೋಗಿದೆ. ಉಪಭಾಷೆಗಳು ಬಹುತೇಕ ನಶಿಸಿವೆ. ಕನ್ನಡ ಮಾತನಾಡುವ ಸಂದರ್ಭದಲ್ಲೂ ಕನ್ನಡವನ್ನು ಕಡೆಗಣಿಸುತ್ತೇವೆ. ನಮ್ಮ ಭಾಷೆಯಲ್ಲಿ ಬೇರೆ ಭಾಷೆ ತೂರಿಕೊಂಡಿದೆ. ಈ ಬಾರಿಯ ಚಾತುರ್ಮಾಸ್ಯ ಭಾಷೆ ಶುದ್ಧಗೊಳಿಸುವ ಪ್ರಯತ್ನಕ್ಕೆ ಶ್ರೀಕಾರ ಹಾಕಲಿದೆ ಎಂದು ಬಣ್ಣಿಸಿದರು.

ಹಲವು ವರ್ಷಗಳ ಹಿಂದೆ ಬಿಎಂಶ್ರೀಯವರ ಕಾಲದಲ್ಲಿ ಒಂದು ಇಂಗ್ಲಿಷ್ ಪದ ಬಳಸಿದರೆ ಒಂದು ರೂಪಾಯಿ ತಪ್ಪುಕಾಣಿಕೆ ತೆಗೆದಿಡಬೇಕು ಎಂಬ ಕಾಸಿನ ಸಂಘ ಹಿಂದೆ ಅಸ್ತಿತ್ವದಲ್ಲಿತ್ತು. ಕನ್ನಡದ ಸಾರ ಉಳಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯೋಣ. ಭಾಷೆಯಲ್ಲಿ ಒಂದು ಪದ ಮರೆಯಾದರೆ ಅದಕ್ಕೆ ಸಂಬಂಧಿಸಿದ ಸಂಸ್ಕøತಿ- ಸಂಸ್ಕಾರ ಎಲ್ಲವೂ ನಾಶವಾಗುತ್ತದೆ. ಒಂದು ಪರಕೀಯ ಪದ ಆಯಾ ಭಾಷೆಯ ಸಂಸ್ಕಾರವನ್ನು ತರುತ್ತದೆ. ನಮಗೆ ಗೊತ್ತಾಗದಂತೆ ನಾವೇ ಪರಕೀಯರಾಗುತ್ತಿದ್ದೇವೆ. ಉದಾಹರಣೆಗೆ ಇಂಗ್ಲಿಷ್ ನಾವು ಆವಾಹಿಸಿಕೊಂಡಿರುವ ಆಕ್ರಮಣ. ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಗುಲಾಮಗಿರಿ, ದಾಸ್ಯದ ಸಂಕೇತ ಏಕೆ ಎಂದು ಈಗ ಪ್ರಶ್ನಿಸದಿದ್ದರೆ ಮುಂದಿನ ದಿನ ಈ ಪ್ರಶ್ನೆ ಎತ್ತುವವರೂ ಇರಲಾರರು. ರಾಮಚಂದ್ರಾಪುರ ಮಠ ಶುದ್ಧ ದೇಸಿ ತಳಿಯ ಗೋವು ಉಳಿಸಲು ಬಹುದೊಡ್ಡ ಆಂದೋಲನ ನಡೆಸಿದೆ. ಭಾರತೀಯ ತಳಿಗಳ ಪರಿಶುದ್ಧತೆ ಉಳಿಯಬೇಕು ಎಂಬ ಕಾರಣಕ್ಕೆ ತಳಿಸಂಕರ ವಿರೋಧಿಸುತ್ತಾ ಬಂದಿದೆ. ಗೋವಿನಲ್ಲಿ ತಳಿಸಂಕರ ಹೇಗೆ ಪ್ರಮಾದವೋ ಭಾಷೆಯಲ್ಲಿ ಕೂಡಾ ಸಂಕರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.
ನಮ್ಮ ಮಾತೃಭಾಷೆಯ ಹಲವು ಪದಗಳು ಮರೆತು ಹೋಗಿವೆ. ಕನ್ನಡ ಮಾತನಾಡುವ ಪ್ರಯತ್ನ ಇಂದಿನಿಂದಲೇ ಆರಂಭವಾಗಲಿ; ಕನ್ನಡ ಮಾತನಾಡಬೇಕಾದಲ್ಲಿ ಕನ್ನಡವನ್ನೇ ಮಾತನಾಡೋಣ. ಪರಿಸ್ಥಿತಿಗೆ ಅನುಗುಣವಾಗಿ ಆಂಗ್ಲಭಾಷೆ ಮಾನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಅದನ್ನು ಬೆರೆಸುವುದು ಬೇಡ. ಹಾಗೆ ಮಾಡಿದರೆ ಇಡೀ ಸಮಾಜವೇ ಭಾಷೆ ಇಲ್ಲದ ಸಮಾಜವಾಗಿ ಮಾರ್ಪಾಡಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಮಾಜವನ್ನು ಬದಲಾಯಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಲಿ. ಮನೆಗಳಲ್ಲಿ ಕನ್ನಡ ಅಭ್ಯಸಿಸೋಣ. ಮರೆತು ಹೋದ ಹಳೆ ಪದಗಳ ಮರು ಅನ್ವೇಷಣೆ ನಡೆಯಲಿದೆ; ಮತ್ತೆ ಕೆಲ ಪದಗಳನ್ನು ಸೃಷ್ಟಿ ಮಾಡುವ ಪ್ರಮೇಯವೂ ಬರುತ್ತದೆ. ಅದನ್ನೂ ಮಾಡೋಣ ಎಂದು ಸಲಹೆ ಮಾಡಿದರು.
ಮೊದಲ ಹಂತದಲ್ಲಿ ಪರಕೀಯ ಶಬ್ದಗಳನ್ನು ಕಡಿಮೆ ಮಾಡೋಣ; ಅಂತಿಮವಾಗಿ ಶುದ್ಧವಾದ ಭಾಷೆಯನ್ನು ಉಳಿಸಿ ಬೆಳೆಸೋಣ. ಚಾತುರ್ಮಾಸ್ಯದಲ್ಲಿ ನಾಲಿಗೆ ಶುದ್ಧೀಕರಣದ ಕಾರ್ಯ ಮಾಡೋಣ. ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಆಶಿಸಿದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಜಿ.ಎಲ್.ಗಣೇಶ್, ಚಾತುರ್ಮಾಸ್ಯ ಸಮಿತಿ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಮಹಾಮಂಡಲ ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲೆಕೇರಿ, ಯುಎಸ್‍ಜಿ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು