ಇತ್ತೀಚಿನ ಸುದ್ದಿ
SIT | ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ದೂರುದಾರನಿಂದ ಶವ ಹೂತಿಟ್ಟ ಸ್ಥಳ ಗುರುತು?
28/07/2025, 16:31

ಧರ್ಮಸ್ಥಳ (reporterkarnataka.com): ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರು ನಡೆಸಲು ಬಂದ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ದೂರದಾರ ಶವಗಳನ್ನು ಹೂತಿಟ್ಟ ಸ್ಥಳ ತೋರಿಸಿದ್ದಾನೆ ಎಂದು ತಿಳಿದು ಬಂದಿದೆ.
ದೂರುದಾರ ಎರಡು ದಿನ ಸಮಗ್ರ ವಿಚಾರಣೆಗೊಳಪಡಿಸಿದ ಎಸ್ಐಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಕರೆ ತಂದಿತ್ತು. ಧರ್ಮಸ್ಥಳ ಸ್ನಾನಘಟ್ಟ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ತಂಡದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಆರಂಭಗೊಂಡಿತ್ತು.
ನೇತ್ರಾವತಿ ಸೇತುವೆಯ ಬಳಿಯ ಕಾಡಿನೊಳಗೆ ಎಸ್ಐಟಿ ತಂಡ ದೂರದಾರನನ್ನು ಸಂಪೂರ್ಣ ಕಪ್ಪು ಮುಸುಕಿನ ವಸ್ತ್ರ ಧರಿಸಿ ಕರೆದು ತಂದಿದೆ. ಎಸ್ ಐಟಿ ತಂಡದ ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು ಸಾಥ್ ನೀಡಿದ್ದಾರೆ. ಶವಗಳನ್ನು ಹೂತ ಜಾಗವನ್ನು ಗುರುತಿಸುವ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದಿಂದ ದೂರುದಾರನ ವಿಚಾರಣೆ ನಡೆದಿದೆ. ಮೊದಲ ದಿನ ಐಪಿಎಸ್ ಅಧಿಕಾರಿ ಅನುಚೇತ್ ಅವರು ವಿಚಾರಣೆ ನಡೆಸಿದ್ದರು. ಎರಡನೇ ದಿನ ಎಸ್ ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಮಂಗಳೂರಿಗೆ ಆಗಮಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಮೊದಲ ದಿನವೇ ದೂರುದಾರ ಸ್ಫೋಟಕ ಮಾಹಿತಿಯನ್ನು ನೀಡಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ನಿನ್ನೆ ಸ್ವತಃ ಟೀಮ್ ಮುಖ್ಯಸ್ಥ ಮೊಹಂತಿ ಆಗಮಿಸಿದ್ದರು ಎನ್ನಲಾಗಿದೆ. ಇದಕ್ಕೆಲ್ಲ ಪುಷ್ಠಿ ನೀಡುವಂತೆ ಇಂದು ಸ್ಥಳ ಮಹಜರು ಆರಂಭವಾಗಿದೆ.