ಇತ್ತೀಚಿನ ಸುದ್ದಿ
SIT | ಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಅಸ್ತಿಪಂಜರ ಹೊರತೆಗೆಯಲು ಉತ್ಖನನ ಪ್ರಕ್ರಿಯೆ ಆರಂಭ
29/07/2025, 13:40

ಧರ್ಮಸ್ಥಳ (reporterkarnataka.com): ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ವಿಶೇಷ ತನಿಖಾ ತಂಡ(ಎಸ್ಐಟಿ)ಮೂಲಕ ನಿನ್ನೆ ಗುರುತಿಸಿದ 13 ಸ್ಥಳಗಳಲ್ಲಿ ಹೂತಿಟ್ಟ ಶವಗಳ ಅಸ್ತಿಪಂಜರ ಹೊರ ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ.
ಸುಮಾರು 12 ಮಂದಿ ಕಾರ್ಮಿಕರನ್ನು ಅಸ್ತಿಪಂಜರ ಮೇಲೆತ್ತಲು ಅಗೆಯುವ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಕಾರ್ಮಿಕರು ಹಾರೆ, ಪಿಕ್ಕಾಸಿನೊಂದಿಗೆ ಉತ್ಖನನ ಕಾರ್ಯಕ್ಕೆ ಆಗಮಿಸಿದ್ದಾರೆ. ತಲಾ 6 ಮಂದಿಯ ಎರಡು ತಂಡ ಮಾಡಲಾಗಿದೆ. ದೂರುದಾರ ಮಾರ್ಕ್ ಮಾಡಿದ ಪಾಯಿಂಟ್ 1ರಲ್ಲಿ ಅಗೆಯುವ ಕಾರ್ಯ ಆರಂಭವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಇಬ್ಬರು ನುರಿತ ವೈದ್ಯರ ವೈದ್ಯಕೀಯ ತಂಡ ಸಾಥ್ ನೀಡಲಿದೆ.
ಹೂತಿಟ್ಟ 13 ಸ್ಥಳಗಳನ್ನು ದೂರುದಾರ ಈಗಾಗಲೇ
ತೋರಿಸಿದ್ದು, ಎಸ್ಐಟಿ ತಂಡ ಅದನ್ನು ನಿನ್ನೆ ಮಾರ್ಕ್ ಮಾಡಿದೆ. ಈ ಜಾಗಕ್ಕೆ ಒಟ್ಟು 30 ಮಂದಿ ಶಸ್ತ್ರ ಸಜ್ಕಿತ ಕಮಾಂಡೋಗಳನ್ನು ನಿಯೋಜಿಸಲಾಗಿದೆ.
ದೂರುದಾರನ ಎರಡು ದಿನ ಸಮಗ್ರ ವಿಚಾರಣೆಗೊಳಪಡಿಸಿದ ಎಸ್ಐಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಕರೆ ತಂದಿತ್ತು. ಧರ್ಮಸ್ಥಳ ಸ್ನಾನಘಟ್ಟ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ತಂಡದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿತ್ತು. ಸಂಜೆಯ ವೇಳೆಗೆ ಒಟ್ಟು 15 ಸ್ಥಳಗಳನ್ನು ದೂರುದಾರ ಎಸ್ಐಟಿ ಸಮ್ಮಖದಲ್ಲಿ ತೋರಿಸಿದ್ದು, ಅದನ್ನು ಸೀಲ್ ಮಾಡಿ ನಂಬರ್ ನೀಡಲಾಗಿದೆ.
ಮಾರ್ಕ್ ಮಾಡಲಾದ ಪ್ರತಿ ಸ್ಥಳಕ್ಕೆ ಇಬ್ಬರು ಗನ್ ಮ್ಯಾನ್ ಗಳನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ. ಮಾರ್ಕ್ ಮಾಡಲಾದ ಒಟ್ಟು 15 ಸ್ಥಳಗಳಿಗೆ ಒಟ್ಟು 30 ಮಂದಿ ಎಎನ್ ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ದಟ್ಟ ಕಾಡಿನಲ್ಲಿ ಹಗಲು- ರಾತ್ರಿ ಗನ್ ಮ್ಯಾನ್ ಗಳು ಶವ ಹೂತ್ತಿಟ್ಟ ಸ್ಥಳವನ್ನು ಕಾಯಲಿದ್ದಾರೆ.
ಇಂದು ಬೆಳಗ್ಗೆ ದೂರುದಾರನ ಜತೆ ಧರ್ಮಸ್ಥಳ ನೇತ್ರಾವತಿ ಸೇತುವೆಯ ಬಳಿಯ ಕಾಡಿನೊಳಗೆ ಎಸ್ಐಟಿ ತಂಡ ಆಗಮಿಸಿತ್ತು. ದೂರದಾರನಿಗೆ ಸಂಪೂರ್ಣ ಕಪ್ಪು ಬಣ್ಣದ ವಸ್ತ್ರ ಹಾಕಿಸಿ, ಮುಖಕ್ಕೆ ಕಪ್ಪು ಬಣ್ಣದಿಂದಲೇ ಕವರ್ ಮಾಡಿಸಿ ಕರೆದು ತಂದಿದ್ದರು. ಎಸ್ ಐಟಿ ತಂಡದ ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು ಸಾಥ್ ನೀಡಿದ್ದರು. ಶವಗಳನ್ನು ಹೂತ ಜಾಗವನ್ನು ಗುರುತಿಸುವ ಪ್ರಕ್ರಿಯೆ ಭರದಿಂದ ನಡೆಯಿತು. ಸಂಜೆ ವೇಳೆಗೆ 15 ಸ್ಥಳಗಳನ್ನು ಮಾರ್ಕ್ ಮಾಡಲಾಯಿತು.
ಕಳೆದ ಎರಡು ದಿನಗಳಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದಿಂದ ದೂರುದಾರನ ವಿಚಾರಣೆ ನಡೆಸಿತ್ತು. ಮೊದಲ ದಿನ ಐಪಿಎಸ್ ಅಧಿಕಾರಿ ಅನುಚೇತ್ ಅವರು ವಿಚಾರಣೆ ನಡೆಸಿದ್ದರು. ಎರಡನೇ ದಿನ ಎಸ್ ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಮಂಗಳೂರಿಗೆ ಆಗಮಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಮೊದಲ ದಿನವೇ ದೂರುದಾರ ಸ್ಫೋಟಕ ಮಾಹಿತಿಯನ್ನು ನೀಡಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ನಿನ್ನೆ ಸ್ವತಃ ಟೀಮ್ ಮುಖ್ಯಸ್ಥ ಮೊಹಂತಿ ಆಗಮಿಸಿದ್ದರು ಎನ್ನಲಾಗಿದೆ. ಇದಕ್ಕೆಲ್ಲ ಪುಷ್ಠಿ ನೀಡುವಂತೆ ಮಾರ್ಕಿಂಗ್ ಕೆಲಸ ಇಂದು ಆರಂಭವಾಯಿತು.