ಇತ್ತೀಚಿನ ಸುದ್ದಿ
ಸದನಕ್ಕೆ ತಡವಾಗಿ ಬಂದ ಶಾಸಕರ ಗದರಿಸಿದ ಸ್ಪೀಕರ್: ವೈಕುಂಠ ಬಾಳಿಗರ ಘನತೆಯನ್ನು ಮರಳಿ ತರ್ತಾರಾ ಯು.ಟಿ. ಖಾದರ್ ?
16/12/2023, 15:49
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಒಂದು ರೀತಿಯಲ್ಲಿ ರಾಜ್ಯದ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಚುನಾಯಿತ ಜನಪ್ರತಿನಿಧಿಗಳಿಗೆ ಸಮಯ ಪ್ರಜ್ಞೆ, ಬದ್ಧತೆಯ ಪಾಠ ಮಾಡಲಾಗಿದೆ. ತಡವಾಗಿ ಬಂದ ನೂತನ ಶಾಸಕರಿಗೆ ಸ್ಫೀಕರ್ ಯು.ಟಿ. ಖಾದರ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರೈಮರಿ ಸ್ಕೂಲಿನ ಮಕ್ಕಳಿಗೆ ಮೇಷ್ಟ್ರು ಗದರಿಸುವ ರೀತಿಯಲ್ಲಿ ಸಮಯದ ಕುರಿತು ಬದ್ಧತೆ ಬಗ್ಗೆ ಸ್ಪೀಕರ್ ಅವರು ನಯವಾಗಿ ಮನವರಿಕೆ ಮಾಡಿದ್ದಾರೆ.
ಅದೊಂದು ಕಾಲವಿತ್ತು, ಬಂಟ್ವಾಳ ವೈಕುಂಠ ಬಾಳಿಗ ಅವರು ಸ್ಪೀಕರ್ ಆಗಿದ್ದ ಕಾಲ. ಡಾ. ನಾಗಪ್ಪ ಆಳ್ವರಂಥ ಘಟಾನುಘಟಿಗಳು ಸದನದಲ್ಲಿದ್ದ ಕಾಲ. ಆಗ ಶಾಸಕರಿಗೆ ಸಂಬಳ, ಭತ್ತೆ, ಸೌಲಭ್ಯ ಏನೂ ಇರಲಿಲ್ಲ. ವರ್ಷದಲ್ಲಿ ಮೂರು ಬಾರಿ ನಡೆಯುವ ಒಟ್ಟು 100 ದಿನಗಳ ಅಧಿವೇಶನಕ್ಕೆ ಸಿಟ್ಟಿಂಗ್ ಫೀಸ್ ಮಾತ್ರ ಕೊಡಲಾಗುತ್ತಿತ್ತು. ದೂರದ ಊರಿನ ಶಾಸಕರು ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು. ಅಧಿವೇಶನ ಆರಂಭವಾಗುವ ಅರ್ಧ ತಾಸು ಮುನ್ನವೇ ಸದನದಲ್ಲಿ ಬಂದು ಹಾಜರಾಗುತ್ತಿದ್ದರು. ಅಧಿವೇಶನದಲ್ಲಿ ಮಾತನಾಡಲು, ಚರ್ಚೆ ನಡೆಸಲು ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡೇ ಸದನಕ್ಕೆ ಹಾಜರಾಗುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಶಾಸಕರಿಗೆ ಉದ್ಯೋಗಿಗಳ ತರಹ ಸಂಬಳ ಸಿಗುತ್ತದೆ. ಭತ್ತೆ, ಪೆಟ್ರೋಲ್ ಚಾರ್ಜ್, ಟೆಲಿಫೋನ್ ಚಾರ್ಜ್, ಆಪ್ತ ಸಹಾಯಕರನ್ನು ಇಟ್ಟುಕೊಳ್ಳುವ ಸೌಲಭ್ಯ ಎಲ್ಲ ನೀಡಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಬದಲು ಶಾಸಕರು ವಿಮಾನದಲ್ಲಿ ತೆರಳುತ್ತಾರೆ. ಅಧಿವೇಶಕ್ಕೆ ಗೈರು ಆಗುವವರ ಸಂಖ್ಯೆ ಕೂಡ ಇತ್ತೀಚಿಗೆ ದಶಕಗಳಲ್ಲಿ ಹೆಚ್ಚಾಗುತ್ತಿದೆ. ಸದನದಿಂದ ಅರ್ಧದಲ್ಲಿ ಎದ್ದು ಹೋಗುವುದು, ನಡುವೆ ಎಂಟ್ರಿ ಕೊಡುವುದು ಎಲ್ಲ ನಡೆಯುತ್ತಿದೆ. ಅದೇ ರೀತಿ ಸದನದ ಒಳಗೆ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ದುರ್ನಡತೆ ತೋರಿಸಿದ ಹಲವು ಪ್ರಸಂಗಗಳು ಕೂಡ ನಡೆದಿವೆ.
ಇದನ್ನೆಲ್ಲ ಗಮನದಲ್ಲಿಟ್ಟು ಈಗಿನ ಸ್ಪೀಕರ್ ಅವರು ಸಾಕಷ್ಟು ಸುಧಾರಣಾ ಅಂಶಗಳನ್ನು ಕೈಗೆತ್ತಿಕೊಂಡಿದ್ದಾರೆ. ಹೊಸ ವಿಧಾನಸಭೆಯ ಆರಂಭದಲ್ಲೇ ಹೊಸತಾಗಿ ಚುನಾಯಿತರಾದ ಶಾಸಕರುಗಳಿಗೆ ತರಬೇತಿ ಶಿಬಿರ ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿಯಾದಿಯಾಗಿ ಇದರಲ್ಲಿ ಪ್ರಮುಖರು ಪಾಲ್ಗೊಂಡಿದ್ದರು. ಇದೀಗ ಚಳಿಗಾಲದ ಬೆಳಗಾವಿ ಅಧಿವೇಶನ ಆರಂಭಗೊಂಡು ಮುಕ್ತಾಯವಾಗಿದೆ. ಸದನಕ್ಕೆ ತಡವಾಗಿ ಬಂದ ನೂತನ ಶಾಸಕರನ್ನು ಸ್ಫೀಕರ್ ಖಾದರ್ ಅವರು ಗದರಿಸಿದ ವೀಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಖಾದರ್ ಅವರ ಸದನದ ಫೋಟೋವನ್ನು ಮಂಗಳೂರಿಗರು ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ. ಹಾಗೆ ಪ್ರಜ್ಞಾವಂತ ಮತದಾರರು ಸ್ಪೀಕರ್ ನಡೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶಾಸಕರು ತಡವಾಗಿ ಸದನಕ್ಕೆ ಬಂದಿರುವ ಕುರಿತು ಸ್ಫೀಕರ್ ಅವರು ಕಾರಣ ಕೇಳಿದ್ದಾರೆ. ಪ್ರೈಮರಿ ಶಾಲೆಯ ಮೇಷ್ಟ್ರು ತರಹ ಗದರಿಸಿದ್ದಾರೆ.
ಮುಖ್ಯಮಂತ್ರಿಯವರನ್ನೂ ಪ್ರಶ್ನಿಸುವ ಅಧಿಕಾರ ಸ್ಪೀಕರ್ ಅವರಿಗಿದೆ. ಸಾಂವಿಧಾನಿಕವಾಗಿ ಮುಖ್ಯಮಂತ್ರಿಗಿಂತ ದೊಡ್ಡ ಹುದ್ದೆ ಸ್ಪೀಕರ್ ಆಗಿದೆ. ಎಲ್ಲರೂ ಪಕ್ಷಾತೀತವಾಗಿ ಸ್ಪೀಕರ್ ಅವರಿಗೆ ತಲೆಬಾಗುವುದು ಸಂವಿಧಾನದ ಆಶಯ ಕೂಡ ಆಗಿದೆ.
ಹಾಗೆ ಸದನದ ಅಂತ್ಯದಲ್ಲಿ ಸ್ಪೀಕರ್ ಖಾದರ್ ಅವರು ಮಾರ್ಷಲ್ ಗಳಿಗೆ ವಂದನೆ ಸಲ್ಲಿಸಿ, ಪ್ರತಿ ವಂದನೆ ಸ್ವೀಕರಿಸಿ ಮಾದರಿ ಎನಿಸಿಕೊಂಡಿದ್ದಾರೆ.