ಇತ್ತೀಚಿನ ಸುದ್ದಿ
ಅಸಾಧ್ಯವಾದ್ದನ್ನು ಸಾಧಿಸಲು ದಿನಚರಿಯೇ ಸಾಧನ: ಸ್ವಭಾಷಾ ಚಾತುರ್ಮಾಸ್ಯ ವ್ರತದಲ್ಲಿ ರಾಘವೇಶ್ವರ ಸ್ವಾಮೀಜಿ
17/07/2025, 21:40

ಗೋಕರ್ಣ(reporterkarnataka.com): ಬದುಕಿನಲ್ಲಿ ಒಂದು ದಿನವನ್ನು ಆದರ್ಶವಾಗಿಸಲು ಸಾಧ್ಯವಾದರೆ ಇಡೀ ಜೀವನ ಆದರ್ಶವಾಗಲು ಸಾಧ್ಯ. ಹೀಗೆ ಅಸಾಧ್ಯ ಎನಿಸಿದ್ದನ್ನು ಸಾಧಿಸಲು ದಿನಚರಿಯೇ ಸಾಧನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಗುರುವಾರ ‘ದಿನಚರ್ಯ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ನಾನು ಇಂದು ತಪ್ಪು ಮಾಡುವುದಿಲ್ಲ ಎಂಬ ವ್ರತವನ್ನು ಪಾಲಿಸಿದರೆ ಇಡೀ ಜೀವನವನ್ನು ತಪ್ಪಿಲ್ಲದೇ ಸಾಗಿಸಲು ಸಾಧ್ಯ ಎಂದರು.
ದೊಡ್ಡ ಉದ್ದೇಶ ಸಾಧನೆಗೆ ಏಕಾಏಕಿ ಪ್ರಯತ್ನ ಮಾಡುವ ಬದಲು ಒಂದೊಂದೇ ಅಂಶವನ್ನು ಅಳವಡಿಸಿಕೊಂಡರೆ ಸಹಜವಾಗಿಯೇ ಉದ್ದೇಶ ಸಾಧನೆಯಾಗಿರುತ್ತದೆ. ದಿನಚರಿಯ ಮೊರೆ ಹೋದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಸಾಧ್ಯ; ಅಂತೆಯೇ ದಿನವೂ ಒಂದು ತಪ್ಪು ಮಾಡಿದರೆ ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಗುರಿ ದೊಡ್ಡದಾಗಿದ್ದರೆ ನುರಿತವರು ಅದನ್ನು ಸಣ್ಣ ಘಟಕಗಳಾಗಿ ವಿಂಗಡಿಸುವ ಕ್ರಮ ಇದೆ. ಇಡೀ ಬದುಕನ್ನೇ ಹಸನುಗೊಳಿಸುವುದು ಕಷ್ಟಸಾಧ್ಯ ಎನಿಸಬಹುದು. ಆದ್ದರಿಂದ ಒಂದೊಂದೇ ದಿನವನ್ನು ತಿದ್ದುವುದು ಸುಲಭ ಎಂದು ವಿಶ್ಲೇಷಿಸಿದರು.
ದೂರಯಾತ್ರೆಯ ಬದುಕಿನಲ್ಲಿ ದಿನಗಳೇ ಹೆಜ್ಜೆಗಳು. ಒಂದು ಹೆಜ್ಜೆ ತಪ್ಪಿದರೂ ಬದುಕಿನಲ್ಲಿ ನಮ್ಮನ್ನು ಬೇರೆಡೆಗೆ ಒಯ್ಯಬಹುದು. ಪಥ ತಪ್ಪಿದರೆ ಗುರಿ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಹೆಜ್ಜೆಯನ್ನೂ ಸರಿಯಾಗಿ ಇಡುವುದು ಅಗತ್ಯ; ಅಂತೆಯೇ ಗೋಡೆ ಸರಿಯಾಗಬೇಕಾದರೆ ಇಟ್ಟಿಗೆ ಜೋಡಿಸುವುದು ಸರಿಯಾಗಬೇಕು. ಒಂದು ಇಟ್ಟಿಗೆಯ ಮೇಲೆ ಮತ್ತೊಂದು ಓರೆಯಾದರೆ ಇಡೀ ಗೋಡೆಯೇ ಓರೆಯಾಗುತ್ತದೆ. ಜೀವನದಲ್ಲೂ ಮಾಡುವ ಒಂದೊಂದು ತಪ್ಪೂ ಜೀವನ ಓರೆಕೋರೆಯಾಗಲು ಕಾರಣವಾಗುತ್ತದೆ ಎಂದು ಹೇಳಿದರು.
ನಮ್ಮ ಪುರಾಣ- ಇತಿಹಾಸಗಳಲ್ಲಿ ವಿಷಕನ್ಯೆಯರ ಉಲ್ಲೇಖವಿದೆ. ಪ್ರತಿ ದಿನ ಹನಿ ಹನಿ ವಿಷಸೇವಿಸಿದ ವಿಷಕನ್ಯೆಯರನ್ನು ರಾಜತಾಂತ್ರಿಕ ನೀತಿಯ ಅಂಗವಾಗಿ ವಿರೋಧಿಗಳನ್ನು ಕೊಲ್ಲಲು ಇವರನ್ನು ಬಳಸಿಕೊಳ್ಳಲಾಗಿತ್ತು ಎಂದು ವಿವರಿಸಿದರು.
ಸನ್ಯಾಸಿಯಾದವನು ಎಂಟು ತುತ್ತು, ವಾನಪ್ರಸ್ಥರು ಹದಿನಾರು, ಗೃಹಸ್ಥರು ಮೂವತ್ತೆರಡು ತುತ್ತು ಆಹಾರ ಸೇವಿಸಬೇಕು ಎಂಬ ಉಲ್ಲೇಖ ಪುರಾಣಗಳಲ್ಲಿದೆ. ಬ್ರಹ್ಮಚಾರಿಗಳು ಯಥೇಚ್ಛ ಆಹಾರ ಸೇವಿಸಬಹುದು. ಆಹಾರ ಹಿತ ಮಿತವಾಗಬೇಕಾದರೆ ದಿನಚರಿಯಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಡಿದರು.
ಬೆಳಿಗ್ಗೆ ಎದ್ದತಕ್ಷಣ ಮೊಸರು, ತುಪ್ಪ, ಕನ್ನಡಿ, ಬಿಳಿ ಸಾಸಿವೆ, ಬಿಲ್ವಪತ್ರೆ, ಗೋರೂಚನ, ಮಾಲೆಗಳ ದರ್ಶನ- ಭಾವಸ್ಪರ್ಶನ ಶುಭಕರ. ಧೀರ್ಘಾಯುಷ್ಯದ ಇಚ್ಛೆ ಇದ್ದಲ್ಲಿ ತುಪ್ಪದಲ್ಲಿ ತನ್ನ ಮುಖ ನೋಡಿಕೊಳ್ಳಬೇಕು. ಅದು ಶುಭದಿನದ ಹಾದಿಗೆ ಹೂವು ಚೆಲ್ಲಿದಂತೆ ಎಂಬ ಯೋಗ ರತ್ನಾಕರದ ಸಾಲುಗಳನ್ನು ಉಲ್ಲೇಖಿಸಿದರು.
ಗುರು ಪರಂಪರೆಯ ಪ್ರೀತ್ಯರ್ಥವಾಗಿ ಪರಮೇಶ್ವರ ಮಾರ್ಕಂಡೆ ನೇತೃತ್ವದಲ್ಲಿ ಮಹಾವಿಷ್ಣುವಿಗೆ ಲಕ್ಷ ತುಳಸಿ ಅರ್ಚನೆ ನೆರವೇರಿಸಲಾಯಿತು. ಜತೆಗೆ ಶತಚಂಡಿ ಯಾಗ ನಡೆಯಿತು. ರಾಮಚಂದ್ರಾಪುರ ಮಂಡಲದ ಭೀಮನಕೋಣೆ, ಕಾನುಗೋಡು, ಪುರಪ್ಪೇಮನೆ, ಶಿವಮೊಗ್ಗ ಮತ್ತು ತೀರ್ಥರಾಜಪುರ ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ನೆರವೇರಿತು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿದ್ವಾನ್ ಸತ್ಯನಾರಾಯಣ ಶರ್ಮಾ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ, ಪರಂಪರಾ ಗುರುಕುಲ ಪ್ರಾಚಾರ್ಯ ನರಸಿಂಹ ಭಟ್, ಶ್ರೀಕಾರ್ಯದರ್ಶಿ ಮಧು ಜಿ.ಕೆ ಮತ್ತಿತರರು ಉಪಸ್ಥಿತರಿದ್ದರು.