ಇತ್ತೀಚಿನ ಸುದ್ದಿ
ರಾಜ್ಯ ವಿಧಾನಸಭೆ ಚುನಾವಣೆ; ಜನಾಭಿಪ್ರಾಯ ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್
24/04/2022, 19:44

ಬೆಂಗಳೂರು(reporterkarnataka.com): ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಎಲ್ಲ ಸಿದ್ಧತೆ ನಡೆಸಿದೆ. ಸರ್ವೆ ಕಾರ್ಯ ಆರಂಭವಾಗುತ್ತಿದೆ. ಜನಾಭಿಪ್ರಾಯ, ಸರಕಾರದ ಅಭಿಪ್ರಾಯ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾನುವಾರ ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸದ್ಯಕ್ಕೆ ಚುನಾವಣೆ ನಡೆಯಲಿರುವುದರಿಂದ ಸಂಪುಟ ವಿಸ್ತರಣೆ ಪ್ರಸ್ತಾಪ ಇಲ್ಲ. ಪಕ್ಷ ಮತ್ತು ಸರಕಾರ ಜತೆಯಾಗಿ ಮುಂಬರುವ ಚುನಾವಣೆ ಎದುರಿಸಲಿದೆ ಎಂದರು.
ರಾಜ್ಯದಲ್ಲಿ ಬೇರೆ ಪಕ್ಷಗಳಿಂದ ಹಲವು ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರು ಬಿಜೆಪಿ ಸೇರುವ ತವಕದಲ್ಲಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರ ಅಭಿಪ್ರಾಯ ಪಡೆದು ನಾನು ಮತ್ತು ಮುಖ್ಯಮಂತ್ರಿಗಳು ಸೇರಿ ಒಂದು ತೀರ್ಮಾನಕ್ಕೆ ಬರಲಿದ್ದೇವೆ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಮಾಡಲಿದ್ದೇವೆ ಎಂದು ನಳಿನ್ ನುಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಿಧಾನಸಭೆ ಚುನಾವಣೆ ವರೆಗೆ ಕಾದು ನೋಡಿ, ಯಾರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವುದು ನಿಮಗೆ ಗೊತ್ತಾಗಲಿದೆ. ಬಿಜೆಪಿಯಲ್ಲಿ ಸಾಕಷ್ಟು ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಅನ್ಯ ಪಕ್ಷದಿಂದ ನಮಗೆ ಶಾಸಕರ ಹೆಚ್ಚಿನ ಅಗತ್ಯವಿಲ್ಲ ಎಂದು ಅವರು ಹೇಳಿದರು.