ಇತ್ತೀಚಿನ ಸುದ್ದಿ
ಅಧಿವೇಶನ ಇದ್ದಾಗಲೆಲ್ಲ ರಾಹುಲ್ ವಿದೇಶದಲ್ಲೇ ಹೆಚ್ಚಿರ್ತಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ
10/12/2025, 20:50
* ಪ್ರಧಾನಿ ವಿದೇಶ ಪ್ರವಾಸ ಬಗ್ಗೆ ತಗಾದೆ ತೆಗೆಯುವ ವಿಪಕ್ಷ ನಾಯಕರಿಗೆ ಜೋಶಿ ಖಡಕ್ ಚಾಟಿ
ನವದೆಹಲಿ(reporterkarnataka.com): “ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಅಧಿವೇಶನ ಇದ್ದಾಗಲೆಲ್ಲ ಹೆಚ್ಚು ಕಾಲ ವಿದೇಶದಲ್ಲೇ ಇರುತ್ತಾರೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ವಿದೇಶ ಪ್ರವಾಸ ಬಗ್ಗೆ ತಗಾದೆ ತೆಗೆಯುತ್ತಿರುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ತುಸು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ ಜೋಶಿ, ರಾಹುಲ್ ಗಾಂಧಿ ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಏಕೆ ಹೆಚ್ಚು ಸಮಯ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.
ಸಂಸತ್ ಅಧಿವೇಶನ ನಡೆಯುತ್ತಿರುವಾಗ ರಾಹುಲ್ ಗಾಂಧಿ ಹೆಚ್ಚಾಗಿ ವಿದೇಶದಲ್ಲಿಯೇ ಇರುತ್ತಾರೆ. ಬಳಿಕ ” ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ” ಎಂಬ ವೃಥಾ ಆರೋಪ ಮಾಡುತ್ತಾರೆ ಎಂದು ಟೀಕಿಸಿದರು.
ವಾಸ್ತವದಲ್ಲಿ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೆ ಆಗಾಗ್ಗೆ ಗೈರಾಗುತ್ತಲೇ ಇರುತ್ತಾರೆ. ಅವರೊಬ್ಬ “ಅರೆಕಾಲಿಕ ಮತ್ತು ಬೇಜವಾಬ್ದಾರಿ ರಾಜಕೀಯ ನಾಯಕರು. ವಿಪಕ್ಷ ನಾಯಕನ ಸ್ಥಾನದಲ್ಲಿದ್ದು ಸ್ವಲ್ಪವೂ ಗಂಭೀರತೆಯೇ ಇಲ್ಲದ ರಾಜಕಾರಣಿ ಎಂದು ಜೋಶಿ ಪ್ರತ್ಯಾರೋಪ ಮಾಡಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಮಧ್ಯೆ ರಾಹುಲ್ ಗಾಂಧಿ ಜರ್ಮನಿ ಭೇಟಿ ಕೈಗೊಳ್ಳುತ್ತಾರೆ. ಬಿಹಾರ ಚುನಾವಣೆ ವೇಳೆಯೂ ವಿದೇಶದಲ್ಲಿದ್ದರು. ಇದೀಗ ಬಿಜೆಪಿ – ಚುನಾವಣಾ ಆಯೋಗ ಒಪ್ಪಂದ ಮಾಡಿಕೊಂಡಿದೆ ಎಂಬ ವೃಥಾ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್, ಸೋತಾಗಲೆಲ್ಲ ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದೆ ಎಂದು ಸಚಿವ ಜೋಶಿ ದೂರಿದರು.
*ಕರ್ನಾಟಕದಲ್ಲಿ ಗೆದ್ದಾಗ ಏನಂದಿದ್ರಿ?:* “ಜಾರ್ಖಂಡ್‌ನಲ್ಲಿ INDI ಮೈತ್ರಿಕೂಟ ಗೆದ್ದಾಗ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಏನು ಹೇಳಿದ್ದೀರಿ? ಬಿಹಾರದಲ್ಲಿ ಸೋತಾಗ, ಕರ್ನಾಟಕದ ಕೆಲ ಕ್ಷೇತ್ರಗಳಲ್ಲಿ ಸೋತಾಗ ಏನು ಹೇಳುತ್ತಿದ್ದೀರಿ? ಸ್ವಲ್ಪ ಪರಿಜ್ಞಾನ ಉಳ್ಳವರಾಗಿ ಮಾತನಾಡಿ” ಎಂದು ಕಾಂಗ್ರೆಸ್ ನಾಯಕರಿಗೆ ಜೋಶಿ ಚಾಟಿ ಬೀಸಿದರು.
ಕಾಂಗ್ರೆಸ್ ಸೋತಾಗ EVM ಮತ್ತು ಚುನಾವಣಾ ಆಯೋಗವನ್ನು ದೂಷಿಸುತ್ತದೆ. ಗೆಲುವಾದಾಗ ಬೇರೆಯದ್ದೇ ಪ್ರತಿಕ್ರಿಯೆ ನೀಡುತ್ತದೆ. ಹೀಗೆ ಸೋತಾಗೊಂದು, ಗೆದ್ದಾಗೊಂದು ಭಿನ್ನ ವಿಭಿನ್ನ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.












