ಇತ್ತೀಚಿನ ಸುದ್ದಿ
ಪಚ್ಚನಾಡಿಯಲ್ಲಿ ಅಕ್ರಮ ಮನೆ ತೆರವಿಗೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲು: ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್
11/06/2022, 15:25
ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಬಳಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆ ತೆರವುಗೊಳಿಸಲು ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಹೇಳಿದರು.
ರಿಪೋರ್ಟರ್ ಕರ್ನಾಟಕ ಜತೆ ಶನಿವಾರ ಮಾತನಾಡಿದ ಅವರು, ಪಾಲಿಕೆ ಅಧಿಕಾರಿಗಳ ಕರ್ತವ್ಯಕ್ಕೆ ಯಾರೆಲ್ಲ ಅಡ್ಡಿಪಡಿಸಿದ್ದಾರೆಯೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ನಮ್ಮ ಅಧಿಕಾರಿಗಳು ಈಗಾಗಲೇ ಪೊಲೀಸ್ ಠಾಣೆಗೆ ತೆರಳಿದ್ದಾರೆ ಎಂದರು.
ತೆರವಿಗೆ ಅಡ್ಡಿಪಡಿಸಿದವರಲ್ಲಿ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ನಾಯಕ್ ಅವರು ಸೇರಿರುವ ಕುರಿತು ಕಮಿಷನರ್ ಅವರ ಗಮನಕ್ಕೆ ತಂದಾಗ, ಕಾರ್ಪೊರೇಟರ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಪೊಲೀಸ್ ಕಮಿಷನರ್ ಜತೆ ಮಾತನಾಡಿ ಒಂದು ವಾರದೊಳಗೆ ಮತ್ತೆ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ನುಡಿದರು.
ಪಾಲಿಕೆಯ ಪೌರ ಕಾರ್ಮಿಕರಿಗೆ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮ ಮನೆ ನಿರ್ಮಿಸಿರುವುದು ಸರಿಯಲ್ಲ ಎಂದು ಪಾಲಿಕೆ ಕಮಿಷನರ್ ಹೇಳಿದರು.
ಮನೆ ನಿರ್ಮಿಸಿರುವುದನ್ನು ತೆರವುಗೊಳಿಸಲು ಶನಿವಾರ ಜೇಸಿಬಿ ಜತೆ ತೆರಳಿದ ಪಾಲಿಕೆ ಅಧಿಕಾರಿಗಳಿಗೆ ತಡೆಯೊಡ್ಡಲಾಗಿತ್ತು.
ಅಕ್ರಮ ಮನೆಗಳ ತೆರವಿಗೆ ಪಾಲಿಕೆ ಕಮಿಷನರ್ ಆದೇಶ ಪತ್ರದೊಂದಿಗೆ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ತೆರಳಿದರೂ ತೆರವು ಕಾರ್ಯಾಚರಣೆ ನಡೆದಿಲ್ಲ. ಇದು ಪಾಲಿಕೆಗೆ ದೊಡ್ಡ ಹಿನ್ನಡೆಯಾಗಿದೆ.