ಇತ್ತೀಚಿನ ಸುದ್ದಿ
ಒಂದೆಡೆ ಅತಿವೃಷ್ಠಿ, ಇನ್ನೊಂದೆಡೆ ಅನಾವೃಷ್ಠಿ: ಉತ್ತರ ಕರ್ನಾಟಕದಲ್ಲಿ ಕೈಕೊಟ್ಟ ಮಳೆ; ಶತಕ ದಾಟಿದ ಟೊಮೆಟೊ, ಮೆಣಸಿನ ಕಾಯಿ ಬೆಲೆ!
05/07/2023, 21:39
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕರಾವಳಿ ಕರ್ನಾಟಕದಲ್ಲಿ ಅತಿವೃಷ್ಠಿಯಾಗುತ್ತಿದ್ದರೆ, ಉತ್ತರ ಕರ್ನಾಟಕದಲ್ಲಿ ಅನಾವೃಷ್ಠಿ ತಲೆದೋರಿದೆ.
ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಇಲ್ಲಿನ ರೈತರು, ಕೃಷಿಕರು ಮಳೆರಾಯನ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಮತ್ತೊಂದೆಡೆ ಟೊಮೆಟೋ, ಮೆಣಸಿನಕಾಯಿ ಬೆಲೆ ಶತಕದ ಗಡಿ ದಾಟಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.
ಹೌದು ಜುಲೈ ತಿಂಗಳ ಮೊದಲ ವಾರ ಕಳೆಯುತ್ತಾ ಬಂದರೂ ಅಥಣಿ ಹಾಗೂ ಕಾಗವಾಡ ಸಾಧಾರಣ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿ ಉಪಯೋಗವಾಗುತ್ತಿಲ್ಲ. ಮಳೆ ಕೊರತೆ ಹಿನ್ನೆಲೆ ಬಹುತೇಕ ರೈತರು ಬಿತ್ತನೆ ಮಾಡದೇ ಕೈ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ. ಇನ್ನು ಇದಕ್ಕೂ ಮೊದಲು ಬೆಳೆದಿದ್ದ ಟೊಮೆಟೋ, ಮೆಣಸಿನಕಾಯಿ ಸೇರಿ ಇತರೆ ತರಕಾರಿ ಬೆಳೆಗಳು ಸಮರ್ಪಕ ಮಳೆಯಾಗದೇ ಇರುವುದರಿಂದ ಇಳುವರಿ ಕಡಿಮೆಯಾಗಿದೆ. ಪರಿಣಾಮ ಬೆಳಗಾವಿಯಲ್ಲಿ ಟೊಮೆಟೋ ಮತ್ತು ಹಸಿ ಮೆಣಸಿನಕಾಯಿ ಬೆಲೆ ನೂರು ರೂಪಾಯಿಗೆ ಮಾರಾಟವಾಗುತ್ತಿವೆ.
ಟೊಮೆಟೋ ಮತ್ತು ಮೆಣಸಿನಕಾಯಿ ದಿನನಿತ್ಯ ಎಲ್ಲರ ಮನೆಯಲ್ಲೂ ಬಳಸುವ ಉತ್ಪನ್ನಗಳು. ಆದರೆ ಅಗತ್ಯಕ್ಕಿಂತ ಕಡಿಮೆ ಉತ್ಪನ್ನ ಮಾರುಕಟ್ಟೆಗೆ ಬಂದಿರುವುದರಿಂದ ಇವುಗಳ ಬೆಲೆ ಗಗನಕ್ಕೇರಿವೆ.