ಇತ್ತೀಚಿನ ಸುದ್ದಿ
ಒಂದೇ ಒಂದು ಶಾಲೆ ಆರಂಭಿಸದ ಬಿಜೆಪಿ ಗನ್ ತರಬೇತಿ ನೀಡುತ್ತಿದೆ: ಪ್ರತಿಪಕ್ಷದ ಉಪ ನಾಯಕ ಖಾದರ್ ಗರಂ
17/05/2022, 21:50

ಮಂಗಳೂರು(reporterkarnataka.com): ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಹೈಸ್ಕೂಲ್ ಪ್ರಾರಂಭಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಬಿಡಿ, ಹೊಸತಾಗಿ ಅಂಗನವಾಡಿ ಕೂಡ ಆರಂಭಿಸಿಲ್ಲ. ವಿದ್ಯಾಸಂಸ್ಥೆಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಟ್ಟಿರೋದು ಸರ್ಕಾರದ ನಿರ್ಲಕ್ಷ್ಯವಾಗಿದೆ. ಈ ಬಗ್ಗೆ ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಜನರಿಗೆ ಉತ್ತರಿಸಲಿ. ಈ ವಿಚಾರದಲ್ಲಿ ಮುಖ್ಯಮಂತ್ರಿ ಕೂಡ ಮೌನವಾಗಿರೋದು ಸರಿಯಲ್ಲ ಎಂದು ವಿಪಕ್ಷ ಉಪನಾಯಕ ಯುಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡಗಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪೆನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್ ಮಾಡಲಾಗಿದೆ. ಶಾಸಕರೇ ಮುಂದೆ ನಿಂತು ಮಾಡಿರೋದು ಸರ್ಕಾರದ ತಾಲಿಬಾನ್ ಸಂಸ್ಕೃತಿ ತೋರಿಸುತ್ತಿದೆ ಎಂದು ಖಾದರ್ ಆರೋಪಿಸಿದರು.
ಸರ್ಕಾರ ಗೂಂಡಾಗಿರಿ ಮಾಡಲು ಹೊರಗುತ್ತಿಗೆ ಕೊಟ್ಟಂತಿದೆ. ಎನ್ ಸಿಸಿಯಂತಹ ಸಂಸ್ಥೆಗಳು ಅಧಿಕೃತ. ಅವರು ದೇಶ ಸೇವೆಗಾಗಿ ತರಬೇತಿ ಕೊಡುತ್ತಾರೆ. ಆದರೆ ಕೂಡಗಿನಲ್ಲಿ ಮಾಡಿದವರು ಯಾರು ಅನ್ನೋದು ಗೊತ್ತಿದೆ. ಇವರ ಉದ್ದೇಶ ಏನು? ಅನುಮತಿ ಯಾರು ಕೊಟ್ಟಿದ್ದು ಎಂಬುದರ ತನಿಖೆ ಆಗಲಿ ಎಂದು ಆಗ್ರಹಿಸಿದರು.
ಮಕ್ಕಳ ಕೈಗೆ ಪುಸ್ತಕ, ಪೆನ್ ಕೊಡುವ ಬದಲು ಆಯುಧ ಕೊಡ್ತಾರಾ? ಗನ್ ಹಿಡಿದುಕೊಂಡು ಸುತ್ತಾಡಲಿಕ್ಕೆ ಇದೇನು ಉತ್ತರ ಪ್ರದೇಶವಾ? ಕಾಂಗ್ರೆಸ್ ಸೇವಾದಳ ಅಥವಾ ಯೂತ್ ಕಾಂಗ್ರೆಸ್ ಮಾಡಿದ್ರೆ ಏನಾಗ್ತಿತ್ತು?ದೇಶದ ಭವಿಷ್ಯ ಮಕ್ಕಳು, ಮಕ್ಕಳಲ್ಲಿ ದ್ವೇಷದ ವಾತಾವರಣ ಬೇಡ. ಹೀಗಾಗಿ ದ್ವೇಷ ಹುಟ್ಟುವ ವಿಚಾರಗಳು ಮಕ್ಕಳಲ್ಲಿ ಬೇಡ ಎಂದರು.
ಮುಸ್ಲಿಮರ ಓಟು ಬೇಡ, ಹಿಂದೂಗಳ ಓಟು ಸಾಕು ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬೆಳ್ತಂಗಡಿ ಶಾಸಕರ ಅಪ್ರಬುದ್ಧ ಮಾತು, ಅದೊಂದು ಕೀಳು ರಾಜಕೀಯ. ಅದಕ್ಕೆ ನಾನು ಉತ್ತರ ಕೊಡಲ್ಲ, ಅದಕ್ಕೆ ಬೆಳ್ತಂಗಡಿ ಜನ ಉತ್ತರ ಕೊಡ್ತಾರೆ. ಓಟು ಕೊಟ್ಟ ಜನರಿಗಾದ್ರೂ ಮೊದಲು ಇವರು ಕೆಲಸ ಮಾಡಲಿ, ಅಲ್ಲಿನ ಎಂಡೋಸಲ್ಫಾನ್ ಪೀಡಿತರಿಗೆ ಅವರು ಏನು ಮಾಡಿದ್ರು? ಮೊದಲು ಇವರು ಅದನ್ನ ಮಾಡಲಿ, ಅದು ಬಿಟ್ಟು ಇದೆಲ್ಲಾ ಮಾಡುವುದಲ್ಲ ಎಂದು ಕಿಡಿಕಾರಿದ್ದಾರೆ.
ಮಂಗಳೂರಿನ ಮಳಲಿ ಮಸೀದಿ ವಿಚಾರದಲ್ಲಿ ವಿಎಚ್ ಪಿ ಅಷ್ಟಮಂಗಳ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ಕೆಲವು ಸಂಶಯ ಬರುತ್ತದೆ, ಆದರೆ ಇದೊಂದು ಜಾಗದ ವಿವಾದ, ದಾಖಲೆ ಜಿಲ್ಲಾಧಿಕಾರಿ ಬಳಿ ಇದೆ. ಕಡೆಯವರು ಡಿಸಿಗೆ ಕೊಟ್ಟಿದ್ದಾರೆ. 400-500 ವರ್ಷದಿಂದ ಇಲ್ಲಿ ಮಸೀದಿ ಇರೋದು ಊರಿನವರಿಗೆ ಗೊತ್ತಿದೆ. ಅದು ಮಸೀದಿ ಅನ್ನೋದು ಊರಿನವರಿಗೆ ಗೊತ್ತಿದೆ. ಆದರೆ ಹೊರಗಿನವರಿಗೆ ಅದರಲ್ಲಿ ಸಂಶಯ. ಸಂಶಯ ಬಂದಾಗ ಅವರು ಡಿಸಿಗೆ ಈ ಬಗ್ಗೆ ಅರ್ಜಿ ಕೊಟ್ಟಿದ್ದಾರೆ. ಈಗ ಡಿಸಿ ಅದರ ದಾಖಲೆ ನೋಡಿ ನಿರ್ಧಾರ ಮಾಡಬೇಕು. ಜಿಲ್ಲಾಧಿಕಾರಿ ಕಾರ್ಯಪ್ರವೃತ್ತರಾಗಿ ದಾಖಲೆ ನೋಡಿ ತೀರ್ಪು ಕೊಡಲಿ.
ಅಸಮಾಧಾನ ಇದ್ದವರು ಬೇಕಾದ್ರೆ ಕೋರ್ಟ್ ಗೆ ಹೋಗಲಿ. ನಾಳೆ ನಿಮ್ಮ ಮನೆಯಲ್ಲಿ ನೋಡಿದ್ರೂ ಅಡಿಯಲ್ಲಿ ಹೆಣ ಸಿಗಬಹುದು. ಹಾಗಂತ ಅದು ತೀರಿ ಹೋದವನ ಜಾಗ ಅನ್ನೋದಕ್ಕೆ ಆಗುತ್ತಾ..? ಹೀಗಾಗಿ ಡಿಸಿ ತಕ್ಷಣ ಈ ವಿಚಾರದಲ್ಲಿ ನ್ಯಾಯ ಕೊಡಬೇಕು. ಆದರೆ ಡಿಸಿ ಯಾಕೆ ತಡ ಮಾಡ್ತಿದಾರೆ ಗೊತ್ತಾಗ್ತಿಲ್ಲ? ಜಿಲ್ಲಾಧಿಕಾರಿ ತಕ್ಷಣ ಗೊಂದಲ ಮಾಡದೇ ಬಗೆಹರಿಸಲಿ. ದಾಖಲೆಯಲ್ಲಿ ಏನಿದೆ ಅದರ ಕುರಿತು ಅವರು ಆದೇಶ ಕೊಡಲಿ, ಇಡೀ ಪ್ರಕರಣದಲ್ಲಿ ಜಿಲ್ಲಾಧಿಕಾರಿ ನಿರ್ಧಾರ ಕೇಂದ್ರ ಬಿಂದು ಎಂದರು.