ಇತ್ತೀಚಿನ ಸುದ್ದಿ
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಭಕ್ತರು ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ: ತಳ್ಳಾಟ, ನೂಕಾಟ
29/12/2023, 02:06
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತರು ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ತಳ್ಳಾಟ ನೂಕಾಟದ ನಡುವೆಯೂ ಪಟ್ಟು ಬಿಡದೆ ಭಕ್ತರು ಪ್ರತಿಭಟನೆ ನಡೆಸಿದರು.
ಮಂಗಳವಾರ ರಾತ್ರಿ ದೇವಾಲಯದ ವತಿಯಿಂದ ಆಯೋಜಿಸಲಾಗಿದ್ದ ಅಂದಕಾಸುರನ ವಧೆ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳ ಮೇಲೆ ಕೆಲ ಕಿಡಿಗೇಡಿಗಳು ಎಂಜಲು ನೀರು ಎರಚಿ ಅಪವಿತ್ರ ಹಾಗೂ ಅಪಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ದೇವಾಲಯದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಡಿವೈಎಸ್ ಪಿ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಘಟನೆಗೆ ಇವರೇ ಕಾರಣ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಎಸ್ ಪಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು
ಪ್ರತಿಭಟನೆಯಲ್ಲಿ ಪಕ್ಷಾತೀತ, ಜಾತ್ಯತೀತ ಹಾಗೂ ಧರ್ಮಾತೀತವಾಗಿ ಎಲ್ಲಾ ವರ್ಗದ ಭಕ್ತರು ಅಲ್ಲದೆ ದೇವಾಲಯದ ಆಗಮಿಕರು, ನೌಕರರು,ಯುವ ಬ್ರಿಗೇಡ್, ಮುಡಿಕಟ್ಟೆ, ನಯನಜಕ್ಷತ್ರಿಯ ಸಂಘ, ವರ್ತಕರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ಪ್ರತಿಭಟನೆಯ ವಿಷಯ ತಿಳಿದು ಎ ಎಸ್ ಪಿ ನಂದಿನಿ ಹಾಗೂ ಡಿ ವೈ ಎಸ್ ಪಿ ಗೋವಿಂದರಾಜ್ ಸ್ಥಳಕ್ಕಾಗಮಿಸಿದರು.
ಈ ಸಂದರ್ಭ ಭಕ್ತರು ಹಾಗೂ ಡಿ ವೈ ಎಸ್ ಪಿ ಗೋವಿಂದರಾಜ್ ನಡುವೆ ತೀವ್ರ ಮಾತಿನ ಚಕಮಕಿ ವಾಗ್ವಾದ ನಡೆದು ಕೆಲ ಕಾಲ ಗೊಂದಲ ಉಂಟಾಯಿತು.
ನಂತರ ಎಸ್ಪಿ ನಂದಿನಿ ಹಾಗೂ ಉಪ ವಿಭಾಗಾಧಿಕಾರಿ ರಕ್ಷಿತ್ ಮಧ್ಯಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಎಸ್ ಪಿ ಅವರೊಟ್ಟಿಗೆ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಮೂಲಕ ಪ್ರತಿಭಟನೆ ಹಿಂಪಡೆಯುವಂತೆ ಮಾಡಲು ಯಶಸ್ವಿಯಾದರು.
ಬಳಿಕ ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ಸೇರಿದಂತೆ ನಗರಸಭಾ ಸದಸ್ಯ ಕಪಿಲೇಶ್, ಯುವ ಬ್ರಿಗೇಡ್ ಮುಖಂಡ ಗಿರೀಶ್, ಭಕ್ತರಾದ ಕೃಷ್ಣ ಜೋಯಿಸ್ ಮಾತನಾಡಿ ಕಿಡಿಗೇಡಿಗಳು ಶ್ರೀಕಂಠೇಶ್ವರ ಸ್ವಾಮಿ ಅವರಿಗೆ ಎಂಜಲು ನೀರು ಎರಚಿ ಅಪಮಾನ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆಯ ಬಗ್ಗೆ ವಿವರಿಸಿದರು.