ಇತ್ತೀಚಿನ ಸುದ್ದಿ
ನಂಜನಗೂಡು ಶ್ರೀ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ 26ನೇ ಬ್ರಹ್ಮೋತ್ಸವ: 18 ಮೆಟ್ಟಿಲುಗಳ ಪಡಿ ಪೂಜೆ
18/12/2023, 22:19

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ಕಪಿಲಾ ನದಿ ತೀರದಲ್ಲಿರುವ ಚಿಕ್ಕ ಶಬರಿಮಲೆ ಎಂದೇ ಕರೆಯಲ್ಪಡುವ ಶ್ರೀ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ 26ನೇ ಬ್ರಹ್ಮೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಪವಿತ್ರ 18 ಮೆಟ್ಟಿಲುಗಳ ಪಡಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಕ್ಷೇತ್ರ ಶಬರಿಮಲೆಯ ಮಾದರಿಯಲ್ಲೇ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದ ಗುರುಸ್ವಾಮಿಗಳಾದ ದೇವರಾಜ ಸ್ವಾಮಿಗಳ ನೇತೃತ್ವದಲ್ಲಿ ಪಡಿ ಪೂಜೆ ನಡೆಯಿತು. ಪಡಿ ಪೂಜೆ ಅಂಗವಾಗಿ ಪವಿತ್ರ 18 ಮೆಟ್ಟಿಲುಗಳೂ ಸೇರಿದಂತೆ ದೇವಾಲಯವನ್ನು ವಿವಿಧ ಬಗೆಯ ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬಳಿಕ ಚೆಂಡೆ ಮೇಳದೊಂದಿಗೆ ಶ್ರೀ ಕ್ಷೇತ್ರ ಶಬರಿಮಲೆಯ ಅರ್ಚಕರಿಂದ ಪವಿತ್ರ 18 ಮೆಟ್ಟಿಲುಗಳಿಗೆ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪವಿತ್ರ ಮೆಟ್ಟಿಲುಗಳನ್ನು ಶುದ್ದಿ ಗೊಳಿಸಲಾಯಿತು. ನಂತರ ಮೆಟ್ಟಿಲುಗಳಿಗೆ ಇಡುಗಾಯಿ ಒಡೆದು ಕರ್ಪೂರ ಹಚ್ಚಿ ಪುಷ್ಪಾರ್ಚನೆ ಮಾಡುವ ಮೂಲಕ ಅಯ್ಯಪ್ಪನ ನಾಮಸ್ಮರಣೆಯೊಂದಿಗೆ ಗುರುಸ್ವಾಮಿಗಳು ಸೇರಿದಂತೆ ಅಯ್ಯಪ್ಪನ ಭಕ್ತರು 18 ಮೆಟ್ಟಿಲುಗಳನ್ನು ಹತ್ತಿ ಬಂದು ಶ್ರೀ ಸ್ವಾಮಿ ಅಯ್ಯಪ್ಪನ ದರ್ಶನ ಪಡೆದು ಪುಳಕಿತರಾದರು.

ಶ್ರೀ ಸ್ವಾಮಿಗೆ ಮಹಾ ಮಂಗಳಾರತಿ ಸಲ್ಲಿಸಿ ಬಂದ ಎಲ್ಲಾ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಪಟ್ಟಣವು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಸಾವಿರಾರು ಭಕ್ತರು ಪಡಿ ಪೂಜಿಯಲ್ಲಿ ಭಾಗವಹಿಸಿ ತಮ್ಮ ಭಕ್ತಿ ಭಾವ ಮೆರೆದರು. ಇದೇ ಸಂದರ್ಭ ದೇವಾಲಯದ ಶಾಸ್ತ ಕಲಾ ಮಂಟಪದಲ್ಲಿ ನಂಜನಗೂಡಿನ ಸುರಭಿ ಗಾನ ಸಂಘದ ವತಿಯಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಗುರುಸ್ವಾಮಿಗಳಾದ ಪಿ. ದೇವರಾಜಸ್ವಾಮಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.