ಇತ್ತೀಚಿನ ಸುದ್ದಿ
ಮಡಿಕೇರಿ ಸಾರಿಗೆ ಬಸ್ ಡಿಪೋ ಎದುರು ನಿರ್ಮಿಸಲಾದ ಅನಧಿಕೃತ ಶೆಡ್ ತೆರವಿಗೆ ನಗರಸಭೆ ನೋಟಿಸ್
28/09/2025, 19:44

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@ggnail.com
ಮಡಿಕೇರಿ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-275ರ ಸರಪಳಿ ಕಿ.ಮೀ 1.00 ರಲ್ಲಿ ಬಲಭಾಗದಲ್ಲಿ ಬರುವ ಸರ್ವೆ ನಂ 53/6 ರ ಸ್ವತ್ತಿನಲ್ಲಿ 3 ಶೆಡ್ ಗಳ ನಿರ್ಮಾಣಕ್ಕೆ ತಾತ್ಕಾಲಿಕ ಅನುಮತಿ ಪಡೆದು ಅನಧಿಕೃತವಾಗಿ ಹೆಚ್ಚುವರಿಯಾಗಿ ನಿರ್ಮಿಸಲಾದ ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಮಡಿಕೇರಿ ನಗರಸಭೆಯ ಪೌರಾಯುಕ್ತರು ನೋಟಿಸ್ ನೀಡಿದ್ದಾರೆ. ಅನಧಿಕೃತ ವಾಣಿಜ್ಯ ಶೆಡ್ ಗಳನ್ನು ನಿರ್ಮಿಸಿಕೊಂಡು ರಸ್ತೆ ಜಾಗವನ್ನು ಬಳಸಿಕೊಂಡು ನಗರಸಭೆ ಪರವಾನಿಗೆ ಇಲ್ಲದೇ ವ್ಯವಹಾರ ಮಾಡುತ್ತಿರುವುದನ್ನು ಪ್ರಶ್ನಿಸಿ ಕಾನೂನು ಕ್ರಮ ವಹಿಸಲು ಕೊಡಗು ಅಭಿವೃದ್ಧಿ ಸಮಿತಿ ಮಡಿಕೇರಿ ಸೆ.11-2025ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು.
ತಾತ್ಕಾಲಿಕ ಶೆಡ್ ಗಳ ನಿರ್ಮಾಣದ ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಹೆಚ್ಚುವರಿ ಶೆಡ್ ಗಳನ್ನು ತೆರವುಗೊಳಿಸಲು ತಿಳುವಳಿಕೆ ಪತ್ರ ನೀಡಲಾಗಿತ್ತು. ಆದರೆ ಅನಧಿಕೃತವಾಗಿ ಹೆಚ್ಚುವರಿಯಾಗಿ ನಿರ್ಮಿಸಿಕೊಂಡಿರುವ ಶೆಡ್‌ಗಳನ್ನು ತೆರವುಗೊಳಿಸದೆ, ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಇದೂ ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್ 187 ಮತ್ತು 256 ರ ಪ್ರಕಾರ ಕಾನೂನು ವಿರುದ್ಧವಾಗಿರುತ್ತದೆ.
ಈ ಕಛೇರಿಯಿಂದ ನೀಡಿದ ಅನುಮತಿ ಅಳತೆಯಂತೆ 3 ಶೆಡ್ ಗಳ ನಿರ್ಮಾಣಕ್ಕೆ ಅನುಮತಿ ಪಡೆದು ಹೆಚ್ಚುವರಿಯಾಗಿ ನಿರ್ಮಿಸಿದ ಶೆಡ್ ಗಳನ್ನು 7 ದಿವಸಗೊಳಗಾಗಿ ತೆರವುಗೊಳಿಸಿ ಛಾಯ ಚಿತ್ರದೊಂದಿಗೆ ಈ ಕಛೇರಿಗೆ ಲಿಖಿತ ಮಾಹಿತಿ ನೀಡುವುದು ತಪ್ಪಿದಲ್ಲಿ, ನಗರಸಭೆ ವತಿಯಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಸೆಕ್ಷನ್ 137 ಮತ್ತು 256ರ ಉಲ್ಲಂಘನೆ ಮಾಡಿರುವುದಕ್ಕೆ ಕಾನೂನು ಕ್ರಮ ಕೈಗೊಂಡು ಅನಧಿಕೃತವಾಗಿ ನಿರ್ಮಿಸಿರುವ ಹೆಚ್ಚುವರಿ ಶೆಡ್ ಗಳನ್ನು ತೆರವುಗೊಳಿಸಿ ಸದ್ರಿ ವೆಚ್ಚವನ್ನು ನಿಮ್ಮಿಂದ ಬಾಕಿ ಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಸಮಬಂಧಿಸಿದ ಶ್ರೀಮತಿ ಪೊನ್ನಚ್ಚೇಟಿರ ದೇಚಮ್ಮ ಕಾರ್ಯಪ್ಪ, ಪೊನ್ನಚ್ಚೇಟಿರ ಕಾರ್ಯಪ್ಪ ವಿನಯ್, ಸೊನ್ನಭೇಟಿರ ಕಾರ್ಯಪ್ಪ ತಮ್ಮಯ್ಯ ನಗರಸಭೆ ಪೌರಾಯುಕ್ತರು ನೋಟಿಸ್ ಜಾರಿಗೊಳಿಸಿದ್ದಾರೆ.