ಇತ್ತೀಚಿನ ಸುದ್ದಿ
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ವಕ್ತಾರರು ಮಾಡುತ್ತಿದ್ದಾರೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ದೇವಾಡಿಗ
27/11/2024, 17:40
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ನಮ್ಮ ಸರ್ಕಾರ ಅಭಿವೃದ್ಧಿ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳುತ್ತಾರೆ, ಪ್ರಾಥಮಿಕ ಕೇಂದ್ರಗಳಲ್ಲಿ ಬಿಪಿ ಶುಗರ್ ಮಾತ್ರೆ ಇಲ್ಲದೆ ಏಳರಿಂದ ಎಂಟು ತಿಂಗಳು ಆಯಿತು, ಜೆಸಿ ಆಸ್ಪತ್ರೆಯಲ್ಲೂ ಸರಿಯಾಗಿ ಮಾತ್ರೆಗಳು ಲಭ್ಯವಿಲ್ಲ, ಅತಿಥಿ ಶಿಕ್ಷಕರಿಗೆ ಸಂಬಳ ಆಗಿಲ್ಲ, ಆಸ್ಪತ್ರೆ ಡಿ ಗ್ರೂಪ್ ನೌಕರರಿಗೆ ಸಂಬಳ ಆಗಿಲ್ಲ, ದಿನ ಬೆಳಗ್ಗೆ ಶಾಸಕರ ವಿರುದ್ಧ, ಬಿಜೆಪಿ ವಿರುದ್ಧ ನಂಜು ಕಾರುವುದು ಬಿಟ್ಟು ಸರ್ಕಾರ ಸಾಮಾನ್ಯ ಜನರಿಗೆ ನೀಡುವ ಔಷಧಿ ತರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ್ ದೇವಾಡಿಗ ವಾಗ್ದಾಳಿ ನಡೆಸಿದರು.
ಬುಧವಾರ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಸರಾ ಸಭೆಯಲ್ಲಿ ಬಿಜೆಪಿ ಅಧ್ಯಕ್ಷರನ್ನು ಕೂರಿಸಿದ್ದಾರೆ ಎಂದು ಮಾತನಾಡಿದ್ದಾರೆ, ಬಿಜೆಪಿ ಅಧ್ಯಕ್ಷರಾಗಿ ಸಭೆಯಲ್ಲಿ ಕೂತಿದ್ದಲ್ಲ, ಅವರು ದಸರಾ ಉಪಾಧ್ಯಕ್ಷರು ಹಾಗಾಗಿ ಸಭೆಯಲ್ಲಿ ಕುಳಿತಿದ್ದರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಮಾಡುವುದನ್ನು ಯುವ ಕಾಂಗ್ರೆಸ್ ಬಿಡಬೇಕು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ವಕ್ತಾರರು ಮಾಡುತ್ತಿದ್ದಾರೆ ಎಂದು ಆದರ್ಶ ಹುಂಚದಕಟ್ಟೆ ವಿರುದ್ಧ ಹರಿಹಾಯ್ದರು.
ಸಂದೇಶ ಅಲ್ಲ ನಂಜೇಶ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಸಂದೇಶ್ ಜವಳಿ 20 ವರ್ಷಗಳಿಂದ ಪಟ್ಟಣ ಪಂಚಾಯತ್ ಗೆ ನಿರಂತರ ವಾಗಿ ಆಯ್ಕೆ ಆಗುತ್ತಿದ್ದಾರೆ. ಅವರು ಯಾವುದೇ ಚುನಾವಣೆ ಸ್ಪರ್ಧೆ ಮಾಡಿದರೂ ಗೆಲುತ್ತಾರೆ. ಅವರನ್ನು ಗೆಲುವನ್ನು ತಡೆದುಕೊಳ್ಳಲು ಈ ಯುವ ಕಾಂಗ್ರೆಸ್ ಗೆ ಆಗುತ್ತಿಲ್ಲ. ನಂಜು ಇರುವುದು ಕಾಂಗ್ರೆಸ್ ನವರ ಹತ್ತಿರ, ಇನ್ನೊಬ್ಬರ ಮೇಲೆ ಉಗುಳುತ್ತಿದ್ದಾರೆ, ಮೊನ್ನೆ ಅವರು ಹೇಳಿದಾಗ ಅಕ್ಕಪಕ್ಕದಲ್ಲಿದ್ದವರಿಗೆ ಒಂದು ರೀತಿ ವಿಕೃತ ಮನಸಿನ ಆನಂದ, ಇದೇನಾ ಕಾಂಗ್ರೆಸ್ ಸಂಸ್ಕೃತಿ ಎಂದು ಪ್ರೆಶ್ನೆ ಮಾಡಿದರು.
ಶಾಸಕರರಿಗೆ ಮದುವೆ, ಉಪನಯನ, ಸಭೆ ಸಮಾರಂಭಕ್ಕೆ ಹೋಗುತ್ತಾರೆ ಎಂದು ಹೇಳುತ್ತಾರೆ, ಯಾಕೆ ಕಾರ್ಯಕ್ರಮಕ್ಕೆ ಹೋಗಬಾರದಾ? ಜನ ಕರೆದಾಗ ಹೋಗಲೇಬೇಕು, ಕಾರ್ಯಕರ್ತರು ಅಂತ ಅಲ್ಲ ಮತ ಹಾಕಿದ ಯಾರೇ ಆಗಲಿ ಕರೆದಾಗ ಹೋಗುತ್ತಾರೆ. ಅದು ಒಬ್ಬ ಜನ ನಾಯಕನ ಕರ್ತವ್ಯ, ನಿಮ್ಮ ನಾಯಕರು ಯಾರು ಕಾರ್ಯಕ್ರಮಗಳಿಗೆ ಹೋಗುವುದಿಲ್ಲವೇ? ಕಾಂಗ್ರೆಸ್ ವಕ್ತಾರನ್ನು ಯಾರು ಕರೆಯುವುದಿಲ್ಲ ಎನಿಸುತ್ತದೆ ಅದಕ್ಕೆ ಅವರು ಆ ರೀತಿ ನಂಜು ಕಾರುವುದು ಎಂದರು.
ಮಹಾಂತ ಗೌಡ ಮಾತನಾಡಿ ತೀರ್ಥಹಳ್ಳಿಗೆ ಶಾಸಕರು ಕಳೆದ ಬಾರಿ 3250 ಕೋಟಿ ಹಣ ಅಭಿವೃದ್ಧಿಗಾಗಿ ತಂದಿದ್ದಾರೆ, ಅದನ್ನು ಸಹಿಸಲು ಕಾಂಗ್ರೆಸ್ ಯುವ ಮಿತ್ರರಿಗೆ ಆಗುತ್ತಿಲ್ಲ, ಕಾಮಗಾರಿಯಲ್ಲಿ ಕೆಲವೊಂದು ತೊಡಕುಗಳು ಆಗಿರಬಹುದು, ಕಳಪೆ ಕಾಮಗಾರಿಯಾದರೆ ಅದನ್ನು ಮತ್ತೊಮ್ಮೆ ಸರಿಪಡಿಸುತ್ತಾರೆ, ಆದರೆ ಅನುದಾನ ತಂದಿಲ್ಲ ಎನ್ನುವುದು ಸರಿಯಲ್ಲ ಇವರು ಫೇಸ್ಬುಕ್ ನಲ್ಲಿ ಲೈವ್ ಬರುವುದು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿದ್ದರೆ ಜ್ಞಾನೇಂದ್ರ ಅವರ ಸಾಧನೆ ಏನು ಎಂದು ಗೊತ್ತಾಗುತ್ತಿತ್ತು ಎಂದು ಟೀಕಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆದರೆ ರಾಜಕಾರಣಿ ಆಗ್ತೀನಿ ಎಂದುಕೊಂಡರೆ ಅದು ತಪ್ಪು ಊಹೆ, ನಾವು ಜನರಿಂದ ಜನರಿಗಾಗಿ ಆಯ್ಕೆಯಾಗುವ ವ್ಯವಸ್ಥೆಯಲ್ಲಿ ಇದ್ದೇವೆ, ಜ್ಞಾನೇಂದ್ರ ಅವರನ್ನು ಟಿಕೀಸುವ ನೈತಿಕತೆ ಯುವ ಕಾಂಗ್ರೆಸ್ ನವರಿಗೆ ಇಲ್ಲ. ಇವರು ಯಾವುದಾದರು ಹೋರಾಟದಲ್ಲಿ ಭಾಗಿಯಾಗಿದ್ದಾರಾ? ಪ್ರತಿಭಟನೆ ಮಾಡಿದ್ದು ಯಾವುದು ಇಲ್ಲ, ಫೇಸ್ಬುಕ್, ವಾಟ್ಸಪ್ ಅನ್ನುವುದು ಬಿಟ್ಟರೆ ಆದರ್ಶ ಹುಂಚದಕಟ್ಟೆ ಯಾರು ಎಂದು ಯಾರಿಗೂ ಗೊತ್ತಿಲ್ಲ, ಯುವ ಕಾಂಗ್ರೆಸ್ ನವರಿಗೆ ಹಳ್ಳಿಯವರ ಯಾರ ಸಂಪರ್ಕವೂ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರದಿಂದ ಗೃಹ ಜ್ಯೋತಿ, ಗೃಹ ಲಕ್ಷೀಯಲ್ಲಿ ಹಣ ಬಂದಿದೆ ಎಂದು ಅಂಕಿ ಅಂಶ ಕೊಡುತ್ತಾರೆ, ವಯಕ್ತಿಕ ಬಂದಿದ್ದಕ್ಕೂ ಅಭಿವೃದ್ಧಿಗೆ ಹಣ ಬರುವುದಕ್ಕೂ ವ್ಯತ್ಯಾಸ ಇದೆ. ಶಾಸಕರಿಗೆ ಹಣ ತರಲು ಆಗಿಲ್ಲ ಎಂದರೆ ಮಾಜಿ ಶಾಸಕರು ಹಣ ತರಲಿ, ಹಣ ಕ್ಷೇತ್ರಕ್ಕೆ ಯಾರೇ ತಂದರೂ ನಮಗೆ ಸಂತೋಷ, ಅಭಿವೃದ್ಧಿಯಾದರೆ ಯಾರೇ ಮಾಡಿದರೂ ನಾವು ಪ್ರೋತ್ಸಾಹ ಮಾಡುತ್ತೇವೆ, ಇವರು ಹಣ ತರಲ್ಲ, ಹಣ ತಂದರೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
20-30 ವರ್ಷದಿಂದ ಆರಗ ಶಾಸಕರಾಗಿದ್ದಾರೆ. ಏನು ಮಾಡಿದ್ದಾರೆ ಎಂದು ಪ್ರೆಶ್ನೆ ಮಾಡುತ್ತಾರೆ, ಕಾಂಗ್ರೆಸ್ ನವರ ಸಾಧನೆ ಏನು? ಹತ್ತು ವರ್ಷ ಇವರು ಅಧಿಕಾರದಲ್ಲಿದ್ದರಲ್ಲ, ಏನು ಮಾಡಿದ್ದಾರೆ? ಡಿಗ್ರಿ ಕಾಲೇಜು ತಂದಿದ್ದು ಶಾಸಕರು, ಪ್ರವಾಸೋದ್ಯಮ, ನಿರುದ್ಯೋಗ, ಏನೇ ಇವರೇ ಮಾಡಿದರು. ನಾವು ಕೈ ಜೋಡಿಸುತ್ತೇವೆ, ಅದನ್ನು ಬಿಟ್ಟು ಎಲ್ಲದರಲ್ಲೂ ತಪ್ಪು ಹುಡುಕುವ ಕೀಳು ಮನಸ್ಥಿತಿ ಸರಿಯಲ್ಲ ಎಂದು ಅವರು ನುಡಿದರು.
ಯುವ ಕಾಂಗ್ರೆಸ್ ಹಿನ್ನಲೆ ಏನು? ಅಕ್ಕಪಕ್ಕ ಕೂತ ಕಾರ್ಯಕರ್ತರ ಹಿನ್ನಲೆ ಏನು? ಹಗಲು ರಾತ್ರಿ ಏನು ರಾಜ ದಂಧೆ ಮಾಡ್ತಾರೆ? ಸಮಾಜದಲ್ಲಿ ಎಷ್ಟು ನೈತಿಕತೆಯಿಂದ ಬದುಕುತ್ತಿದ್ದಾರೆ? ಇವರ ಹಿನ್ನಲೆ ಕೆದಕಿದರೆ ಬಹಳ ಇದೆ, ಯಾರೆಲ್ಲ ಜೈಲಿಗೆ ಹೋಗಿ ಬಂದವರು? ಯಾರೆಲ್ಲ ಯಾವ ದಂಧೆಯಲ್ಲಿ ಭಾಗವಹಿಸಿದ್ದಾರೆ? ಎಂಬುದು ಗೊತ್ತಿದೆ. ಕಟ್ಟಡ ಸೋರುತ್ತೆ ಅಂತ ಹೇಳ್ತಾರೆ, ಕಟ್ಟಡದ ಬಗ್ಗೆ ತನಿಖೆಯಾಗಲಿ, ಸೇತುವೆ ಕುಸಿದ ಬಗ್ಗೆಯೂ ತನಿಖೆ ಆಗಲಿ,ಯಾಕೆ ಅದರ ಬಗ್ಗೆ ಮಾತನಾಡಲ್ಲ ಅವರ ಜೊತೆಗೆ ಕಮಿಟ್ ಆಗಿದ್ದಾರಾ? ಗುಬ್ಬಚ್ಚಿ ಹೊಡೆದು ನಾಯಕರಾಗೋದಲ್ಲ, ತಾಕತ್ತಿದ್ದರೆ ದೊಡ್ಡವರನ್ನು ಹೊಡಿಯಬೇಕು ಎಂದರು.
ಪ್ರದೀಪ್ ಗಬಡಿ ಮಾತನಾಡಿ ಹುಲಿವೇಷ ಸಣ್ಣ ಪುಟ್ಟ ಸಮುದಾಯದವರು ಹಾಕುತ್ತಾರೆ, ಅದಕ್ಕೆ ತೊಂದರೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಹೇಳುತ್ತಾರೆ, ಹುಲಿವೇಷದ ವಿಚಾರ ರಾಜಕೀಯ ಮಾಡುವುದು ಬೇಡ, ಸಣ್ಣಪುಟ್ಟ ಸಮುದಾಯಕ್ಕೆ ಏನಾದರು ತೊಂದರೆಯಾದರೆ ಮೊದಲು ಬರುತ್ತಿದ್ದ ವ್ಯಕ್ತಿಯೇ ಶಾಸಕ ಆರಗ ಜ್ಞಾನೇಂದ್ರರವರು, ನಮಗೆ ಪಕ್ಷದಲ್ಲಿ ಸಂಸ್ಕೃತಿ ಕಲಿಸಿದ್ದಾರೆ, ನಾವು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿಲ್ಲ, ಆದರೆ ಜ್ಞಾನೇಂದ್ರರವರ ಬಗ್ಗೆ ಆ ವ್ಯಕ್ತಿ ರಾಜ್ಯದ ನಾಯಕರ ರೀತಿ ಮಾತನಾಡುತ್ತಾರೆ, ರಾಜಕೀಯಕ್ಕೆ ಬಂದ ಮೇಲೆ ಎಲ್ಲರಿಗೂ ಗೌರವ ಕೊಡುವುದನ್ನು ಕಲಿಯಬೇಕು ಎಂದರು.
*ಎಲ್ಲದಕ್ಕೂ ಆರಗ ಜ್ಞಾನೇಂದ್ರ ಬರಬೇಕಾ? – ಪತ್ರಕರ್ತರ ಪ್ರೆಶ್ನೆಗಳಿಗೆ ಯುವ ಮೋರ್ಚಾ ಕಕ್ಕಾಬಿಕ್ಕಿ*
ಯುವ ಕಾಂಗ್ರೆಸ್ ನವರು ಮಾತನಾಡಿದ್ದಕ್ಕೆ ಇಷ್ಟೆಲ್ಲಾ ಮಾತನಾಡಿದ್ರಲ್ಲ, ವಖ್ಫ್ ಪ್ರಕರಣ, ಮ್ಯಾಮ್ಕೋಸ್ ಪ್ರಕರಣ, ರೈತರ ಸಮಸ್ಯೆ,ಭೂ ಒತ್ತುವರಿ ಹೀಗೆ ಹಲವು ವಿಷಯಗಳು ಇವೆ. ಯಾವತ್ತಾದ್ರೂ ಬಿಜೆಪಿ ಯುವ ಮೋರ್ಚಾ ಇದರ ಬಗ್ಗೆ ಧ್ವನಿ ಎತ್ತಿದೆಯೇ ಎಂಬ ಪ್ರೆಶ್ನೆಗೆ ಶಾಸಕರು ಇಲ್ಲ ಬಂದ ನಂತರ ಮಾತನಾಡುತ್ತೇವೆ ಎಂದು ಹೇಳುತ್ತಿದ್ದಂತೆ ಅವರ ರಾಜಕೀಯ ಮುಗಿಯುತ್ತ ಬಂತು, ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ, ಅಥವಾ ಯಾವುದೇ ವಿಷಯದಲ್ಲಿ ಮುಂದೆ ಬರುವುದಿಲ್ಲ, ಎಲ್ಲದಕ್ಕೂ ಆರಗ ಜ್ಞಾನೇಂದ್ರ ಬರಬೇಕಾ? ಅವರಿಲ್ಲದಿದ್ದರೆ ಏನು ಆಗುವುದಿಲ್ಲವೇ? ಎಂಬ ಪತ್ರಕರ್ತರ ಪ್ರೆಶ್ನೆಗಳಿಗೆ ಯುವ ಮೋರ್ಚಾ ಕಕ್ಕಾಬಿಕ್ಕಿಯಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸತೀಶ್, ಚೇತನ್, ಅಭಿಲಾಷ್ ಕೈಮರ, ಕವಿರಾಜ್, ಸಚಿನ್ ಬೊಮ್ಮನಹಳ್ಳಿ ಸೇರಿ ಹಲವರು ಉಪಸ್ಥಿತರಿದ್ದರು.