ಇತ್ತೀಚಿನ ಸುದ್ದಿ
ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಠಾಣೆ ಇನ್ಸ್ ಪೆಕ್ಟರ್ ಅಮಾನತು
17/03/2026, 20:08
ಮಂಗಳೂರು(reporterkarnataka.com): ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಮೂಡಬಿದ್ರೆ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ.

ಸಂದೇಶ್ ವಿರುದ್ಧ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿತ್ತು. ಮಹಿಳೆಯನ್ನು ಬ್ಲಾಕ್ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ ಇನ್ಸ್ ಪೆಕ್ಟರ್ ಸಂದೇಶ್ ಮತ್ತೊಬ್ಬ ಸಂತ್ರಸ್ತ ಮಹಿಳೆಯ ಪತಿಯನ್ನು ಪ್ರಕರಣ ವೊಂದರಲ್ಲಿ ಸಿಲುಕಿಸಿ ಆತನನ್ನು ಬಿಡುಗಡೆ ಮಾಡಲು ನನ್ನ ಜೊತೆ ಲೈಂಗಿಕವಾಗಿ ಸಹಕರಿಸಬೇಕು ಅಥವಾ 25 ಲಕ್ಷ ಕೊಡಬೇಕು ಎಂದು ಬೆದರಿಕೆ ಹಾಕಿದ್ದರು. ಲೈಂಗಿಕವಾಗಿ ಬಳಸಿಕೊಂಡಿದ್ದ ಮಹಿಳೆಯ ಅಪ್ರಾಪ್ತ ಪುತ್ರಿಯ ಮೇಲೆಯೂ ಸಂದೇಶ್ ಕಣ್ಣು ಹಾಕಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಲೇ ಮಂಗಳೂರು ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅಮಾನತುಗೊಳಿಸಿ ಅದೇಶಿಸಿದ್ದಾರೆ.
ಸಂದೇಶ್ ವಿರುದ್ಧ ತನಿಖೆಗೆ ಪೊಲೀಸ್ ಇಲಾಖೆ ಆದೇಶಿಸಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಉತ್ತರ ಎಸಿಪಿ ಶ್ರೀಕಾಂತ್ ಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚನೆ ನೀಡಿದ್ದಾರೆ.
ಲೈಂಗಿಕ ಕಿರುಕುಳದ ಬಗ್ಗೆ ಇದುವರೆಗೂ ಯಾವೊಬ್ಬ ಮಹಿಳೆ ಕೂಡ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರು ಇದ್ದರೆ ಈ ಬಗ್ಗೆ ದೂರು ನೀಡುವಂತೆ ಮನವಿ ಮಾಡಲಾಗಿದೆ.












