ಇತ್ತೀಚಿನ ಸುದ್ದಿ
ಮೂಡಬಿದ್ರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಯಕ್ಷಗಾನ ಕಲಾರಂಗದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ
21/11/2021, 09:01
ಸಾಂದರ್ಭಿಕ ಚಿತ್ರ
ಉಡುಪಿ(reporterkarnataka.com) : ಶಿಕ್ಷಣದೊಂದಿಗೆ ಯಕ್ಷಗಾನ ಕಲಿಕೆ ಹಾಗೂ ಪ್ರದರ್ಶನಗಳಿಗೆ ಕಳೆದ 12 ವರ್ಷಗಳಿಂದ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದ ಮೂಡಬಿದ್ರೆಯ ಡಾ. ಎಂ. ಮೋಹನ್ ಆಳ್ವರ ನೇತೃತ್ವದ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಆಯ್ಕೆಯಾಗಿದೆ.
ಉಭಯ ತಿಟ್ಟುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಹಿಮ್ಮೇಳ ಹಾಗೂ ಮುಮ್ಮೇಳದ ಶಿಕ್ಷಣವನ್ನು ಮಾಸಿಕ ಶಿಷ್ಯವೇತನದೊಂದಿಗೆ ಕಲಿಸುತ್ತಾ, 2 ವರ್ಷಗಳ ಯಕ್ಷಗಾನ ಡಿಪ್ಲೊಮಾ ಕೋರ್ಸ್ ಅಳವಡಿಸಿದ ಏಕೈಕ ಶಿಕ್ಷಣ ಸಂಸ್ಥೆಯಾಗಿದೆ. ಪ್ರಶಸ್ತಿಯು 50,000/- ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 28, 2021 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಶ್ರೀಗಳ ಹಾಗೂ ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಜರಗಲಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.