ಇತ್ತೀಚಿನ ಸುದ್ದಿ
ಮೂಡಬಿದಿರೆ ಮಹಾವೀರ ಕಾಲೇಜಿನಲ್ಲಿ ಜನರಲ್ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ: ಪುಷ್ಪ ನಮನ
11/12/2021, 20:57
ಮೂಡಬಿದಿರೆ(reporterkarnataka.com): ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ
ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಅಧಿಕಾರಿಗಳಿಗೆ ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಹ ಸಂಸ್ಥೆಗಳ ವತಿಯಿಂದ ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮಾತನಾಡಿ, ರಾವತ್ ರಂತಹ ಅಸಾಮಾನ್ಯ ಯೋಧನನ್ನು ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಹಾಗೂ ದುರಂತದ ವಿಷಯವಾಗಿದೆ. ಅವರು ಸೇನೆಯ ವಿವಿಧ ಹುದ್ದೆಗಳಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದರು. ಭಾರತೀಯ ಸೇನೆಯಲ್ಲಿ ಧೀಮಂತ ಹಾದಿಯನ್ನು ಅವರು ಸವೆಸಿದ್ದರು. ಅವರ ಸಾವಿನೊಂದಿಗೆ ದೇಶ ಒಬ್ಬ ನಿಜವಾದ ದೇಶಭಕ್ತನನ್ನು ಕಳೆದುಕೊಂಡಿದೆ. ದೇಶ ಕಾಯುವ ಕೆಲಸವನ್ನು ಮಾಡುತ್ತಿರುವ ನಮ್ಮ ಬಲಿಷ್ಠ ಸೇನಾಪಡೆ ಹಾಗೂ ಸೈನಿಕರು ದುರ್ಮರಣಕ್ಕೀಡಾದವರ ದುರಂತ ಅಂತ್ಯದಿಂದ ಕುಗ್ಗದೆ ಇನ್ನು ಮುಂದೆಯೂ ದೇಶಕ್ಕಾಗಿ ಸೇವೆಯನ್ನು ಸಲ್ಲಿಸುವಂತಾಗಲಿ. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ, ಇನ್ನುಳಿದ ಎಲ್ಲಾ ಅಧಿಕಾರಿಗಳ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದರು. ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಅವರು ಮೃತರ ಆತ್ಮಗಳಿಗೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಜ|ರಾವತ್ ರವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಮೃತರ ಆತ್ಮಗಳಿಗೆ ಸದ್ಗತಿ ದೊರೆಯಲಿ ಎಂದು ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸಹ ಸಂಸ್ಥೆಗಳಾದ ಎಸ್ ಎನ್ ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜೆ. ಜೆ.ಪಿಂಟೋ, ಎ. ಜಿ. ಸೋನ್ಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ಜಯರಾಮ್ ಶೆಟ್ಟಿಗಾರ್, ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಧನಂಜಯ ಶೆಟ್ಟಿ, ಎಲ್ಲಾ ಸಂಸ್ಥೆಗಳ ಉಪನ್ಯಾಸಕರು, ಎನ್ ಸಿ ಸಿ ಕೆಡೆಟ್ ಗಳು, ಎನ್ಎಸ್ಎಸ್ ಸ್ವಯಂಸೇವಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ನಿರೂಪಿಸಿದರು.