ಇತ್ತೀಚಿನ ಸುದ್ದಿ
ಮೊಂತಿ ಹಬ್ಬ: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ನವದಿನಗಳ ನೊವೆನಾಗಳಿಗೆ ಚಾಲನೆ
31/08/2025, 14:54

ಮಂಗಳೂರು(reporterkarnataka.com): ಮೊಂತಿಹಬ್ಬ(ಕನ್ಯಾ ಮರಿಯಮ್ಮ ಹಬ್ಬ)ದ ಅಂಗವಾಗಿ ನವದಿನಗಳ ಪ್ರಾರ್ಥನಾ ವಿಧಿಗಳಿಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು.
ನವ ದಿನಗಳ ಪ್ರಾರ್ಥನಾವಿಧಿ ಮುಗಿದ ಬಳಿಕ ಸೆ.8ರಂದು ಮೊಂತಿ ಹಬ್ಬ( ಕುರಲ್ ಪರ್ಬ)ವನ್ನು ಕ್ರೈಸ್ತ ಸಮುದಾಯದವರು ಆಚರಣೆ ಮಾಡಲಿದ್ದಾರೆ. ಈ ನವ ದಿನಗಳ ನೊವೆನಾ ಸಮಯದಲ್ಲಿ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮ ರಿಗೆ ಪುಷ್ಪ ಅರ್ಪಣೆ ಮಾಡುವ ಮೂಲಕ ಪ್ರಕೃತಿಯ ಆರಾಧನೆಗೆ ಸಾಕ್ಷಿಯಾದರು.
ನಗರದ ಉರ್ವ ಚರ್ಚಿನಲ್ಲಿ ಜಪಮಾಲೆಯ ಬಳಿಕ ನಡೆದ ಕೃತಜ್ಞತಾ ಪೂಜೆಯಲ್ಲಿ ಚರ್ಚಿನ ಧರ್ಮಗುರು ಫಾ. ಮೈಕಲ್ ಲೋಬೋ ಪ್ರವಚನ ನೀಡಿ, ದೇವರು ಭಕ್ತರಲ್ಲಿ ವಿಧೇಯತೆಯನ್ನು ಬಯಸುತ್ತಾನೆ. ಹೊರಗಿನ ಆಡಂಬರಕ್ಕಂತ ಹೆಚ್ಚಾಗಿ ಹೃದಯದಲ್ಲಿರುವ ಭಕ್ತಿಯನ್ನು ಬಯಸುತ್ತಾನೆ. ಮಹಾತ್ಮಗಾಂಧೀಜಿ, ಮದರ್ ತೆರೇಸಾ, ಸಂತ ಫ್ರಾನ್ಸಿಸ್ ಅಸೀಸಿಯಂತಹ ಮಹಾನ್ ಪುರುಷರು ಇಂದಿಗೂ ಸಮಾಜಕ್ಕೆ ಮಾದರಿಯಾಗಿರುವುದು ಅವರಲ್ಲಿ ತುಂಬಿರುವ ವಿಧೇಯತೆಯಿಂದ ಭಕ್ತರು ಕೂಡ ಇತರರನ್ನು ಗೌರವಿಸುವ ವಿಧೇಯತೆ ತೋರುವ ಕರ‍್ಯದಿಂದ ದೇವರು ಸಂತೃಪ್ತನಾಗುತ್ತಾನೆ ಎಂದರು. ಈ ಸಂದರ್ಭ ಫಾ. ಮೌರಿಸ್ ಕೃತಜ್ಞತಾ ಪೂಜೆಯಲ್ಲಿ ಉಪಸ್ಥಿತರಿದ್ದರು. ಈ ಬಳಿಕ ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ನೊವೆನಾ ಪ್ರಾರ್ಥನಾವಿಧಿಯನ್ನು ನಡೆಸಿಕೊಟ್ಟರು. ಕನ್ಯಾ ಮರಿಯಮ್ಮಳಿಗೆ ಪುಷ್ಪ ಅರ್ಪಣೆ ಮಾಡಿದ ಮಕ್ಕಳಿಗೆ ಹಾಗೂ ಹಿರಿಯರಿಗೆ ಸಿಹಿತಿಂಡಿ ನೀಡಲಾಯಿತು.