ಇತ್ತೀಚಿನ ಸುದ್ದಿ
ಮೊಂತಿ ಹಬ್ಬ: ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಸಂದೇಶ
07/09/2025, 20:12

ಮಂಗಳೂರು(reporterkarnataka.com): ಮೊಂತಿ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನಾಡಿನ ಜನತೆಗೆ ಸಂದೇಶ ನೀಡಿದ್ದಾರೆ.
ಸಪ್ಟೆಂಬರ್ 8 ಮೇರಿ ಮಾತೆಯ ಜನನದ ಹಬ್ಬದ ದಿನವಾಗಿದೆ. ಇದು ನಮ್ಮ ಮಾತೆಯ ದಿನ. ನಮಗೆ ಸಂತಸ,ಸಡಗರ, ಸಂಭ್ರಮದ ದಿನ. ಈ ದಿನದಂದು ಪುಟಾಣಿ ಮಕ್ಕಳು ಹೂವುಗಳನ್ನು ತಂದು, ನಾವು ನಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ತಂದು ದೇವರಿಗೆ ಅರ್ಪಿಸುವಾಗ ದೇವರು ನಮಗೆ ನೀಡಿದ ಹೊಸ ಬೆಳೆ ಮತ್ತು ನಮ್ಮ ಮನೆಗಳಲ್ಲಿ ಇರುವ ಹೆಣ್ಮಕ್ಕಳು ಹಾಗೂ ಮಹಿಳೆಯರು ನಿಜವಾಗಿಯೂ ನಮ್ಮ ಕುಟುಂಬದ ಭಂಡಾರ.
ಹೊಸ ಬೆಳೆ, ಮೇರಿ ಮಾತೆಯ ಜನ್ಮ ದಿನ ಹಾಗೂ ನಮ್ಮ ಕುಟುಂಬದ ಹೆಣ್ಮಕ್ಕಳು- ಈ ಮೂವರ ಆರೈಕೆ ಮಾಡಲು ದೇವರು ನಮಗೆ ವಿಶೇಷ ಆಹ್ವಾನ ನೀಡಿದ್ದಾರೆ. ಈ ಆಹ್ವಾನಕ್ಕೆ ಓಗೊಟ್ಟು ಮೇರಿ ಮಾತೆಯ ಜನ್ಮ ದಿನ ಆಚರಿಸುವ ಸಂದರ್ಭ ಮಾತೆಗೆ ನೀಡುವ ಗೌರವ ಮರಳಿ ನಮಗೆ ಲಭಿಸುತ್ತದೆ.
ಈ ಹಬ್ಬದ ಜತೆಗೆ ಕ್ಯಾಥೋಲಿಕ್ ಧರ್ಮ ಸಭೆಯು ಇನ್ನೊಂದು ವಿಶೇಷ ಹಬ್ಬವನ್ನು ಆಚರಿಸುತ್ತಿದೆ. ಸಪ್ಟೆಂಬರ್ 1 ರಿಂದ ಅಕ್ಟೋಬರ್ 4 ರ ವರೆಗೆ ಸಂತ ಫ್ರಾನ್ಸಿಸ್ ಆಸಿಸಿ ಅವರ ಹಬ್ಬದ ತನಕದ ಕಾಲವನ್ನು ಸೃಷ್ಟಿಯ ಕಾಲ ಎಂದು ಆಚರಿಸಲಾಗುತ್ತದೆ. ಈ ಸೃಷ್ಟಿಯ ಕಾಲದ ಆಚರಣೆಯ ಸಂದರ್ಭದಲ್ಲಿಯೇ ಮೇರಿ ಮಾತೆಯ ಜನ್ಮ ದಿನಾಚರಣೆ ಕೂಡಾ ಬರುವುದರಿಂದ ನಮ್ಮ ಮಂಗಳೂರಿನ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಹೊಸ ಬೆಳೆಗೆ, ಹೆಣ್ಮಕ್ಕಳಿಗೆ ಹಾಗೂ ಕುಟುಂಬದ ಏಕತೆಗೆ ಗಮನ ಹರಿಸುವುದರಿಂದ ನಮ್ಮ ಸಂಭ್ರಮ ಎರಡು ಪಟ್ಟಾಗುತ್ತದೆ.
ಈ ಹಬ್ಬದ ಸಂದರ್ಭ ವಿಶೇಷವಾಗಿ ಸಮಗ್ರ ಸೃಷ್ಟಿಯ ಸಂರಕ್ಷಣೆ ಮಾಡಲು, ಪ್ರಾರ್ಥನೆ ಸಲ್ಲಿಸಲು, ಬಲಿ ಪೂಜೆಯನ್ನು ಅರ್ಪಿಸಲು ಕ್ರೈಸ್ತ ಧರ್ಮ ಸಭೆ ಕರೆ ನೀಡಿರುವುದರಿಂದ ನಾವು ಪ್ರಾರ್ಥನೆಯ ಮೂಲಕ ಹಾಗೂ ನಮ್ಮ ಸೃಷ್ಟಿಯ ಸಂರಕ್ಷಣೆಯ ಮೂಲಕ ಪರಸ್ಪರರ ಸೇವೆ ಮಾಡಲು , ಗೌರವಿಸಲು , ಪ್ರೀತಿಯಿಂದ ಸೃಷ್ಟಿಯನ್ನು ಉಳಿಸಲು ಹಾಗೂ ಇನ್ನಷ್ಟು ಅಧಿಕ ಪ್ರಮಾಣದಲ್ಲಿ ಅದರ ಆರೈಕೆ ಮಾಡಲು ದೇವರು ನಮಗೆ ಅನುಗ್ರಹಿಸಲಿ. ಸೃಷ್ಟಿಯನ್ನು ಉಳಿಸೋಣ ಹಾಗೂ ಈ ಸೃಷ್ಟಿಯನ್ನು ಪ್ರೀತಿಸೋಣ ಮತ್ತು ಈ ಸೃಷ್ಟಿಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ.
– ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ
ಧರ್ಮಾಧ್ಯಕ್ಷರು,
ಮಂಗಳೂರು ಧರ್ಮ ಪ್ರಾಂತ್ಯ.