ಇತ್ತೀಚಿನ ಸುದ್ದಿ
ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ
16/03/2026, 18:53
ಬೆಂಗಳೂರು(reporterkarnataka.com): ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಭಾಧ್ಯಕ್ಷರೇ ಸಭಾತ್ಯಾಗ ಮಾಡುವಂಥ ಸನ್ನಿವೇಶವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ.

ವಿಧಾನಸಭೆಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಕೆಲ ಸಚಿವರು ಹಾಗೂ ಅಧಿಕಾರಿಗಳ ಉತ್ತರ ನೀಡದೇ ಇದಿದ್ದಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದದರು.ಅಲ್ಲದೆ, ಮೊದಲ ಬಾರಿಗೆ ಸದನವನ್ನೇ ಮುಂದೂಡಿಕೆ ಮಾಡಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಸರ್ಕಾರ ಸತತವಾಗಿ ವಿಧಾನಸಭೆಗೆ ಲಿಖಿತ ಮೂಲಕ ಒದಗಿಸಬೇಕಾದ ಉತ್ತರವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಇದೇ ಅಧಿವೇಶನದಲ್ಲಿ ಐದನೇ ಬಾರಿಗೆ ಸರ್ಕಾರ ಸಭಾಧ್ಯಕ್ಷರ ಸೂಚನೆಯನ್ನು ನಿರ್ಲಕ್ಷಿಸಿದೆ. ಇಂದು ಲಿಖಿತ ರೂಪದಲ್ಲಿ ಪೂರೈಕೆ ಮಾಡಬೇಕಾದ 230 ಪ್ರಶ್ನೆಗಳ ಪೈಕಿ 80ಕ್ಕೆ ಮಾತ್ರ ಗೃಹ ಸಚಿವ ಡಾ. ಪರಮೇಶ್ವರ್ ಅವರು ಉತ್ತರ ನೀಡಿದರು.
ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿ, ಹೇಗೆ ಲೆಕ್ಕ ಹಾಕಿದರೂ ಶೇ. 50ರಷ್ಟು ಗಡಿ ದಾಟಿಲ್ಲ. ಈ ಹಿಂದೆ ಹೇಳಿದ ಸಭಾಧ್ಯಕ್ಷರ ಆದೇಶಗಳಿಗೆ ಈ ಸರ್ಕಾರ ಯಾವುದೇ ಬೆಲೆ ನೀಡಿಲ್ಲ ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ಸಭಾಧ್ಯಕ್ಷರು, ಸಕಾರಣ ನೀಡುವವರೆಗೆ ಸದನ ನಡೆಸುವುದಿಲ್ಲ ಎಂದು ಕಲಾಪ ಮುಂದೂಡಿದ್ದಾರೆ.
ಈ ರಾಜ್ಯ ಸರ್ಕಾರಕ್ಕೆ ಕಲಾಪ ನಡೆಸುವುದಕ್ಕಾಗಲಿ, ಉತ್ತರ ನೀಡುವುದಕ್ಕಾಗಲಿ ಮನಸಿಲ್ಲ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂಬುದಕ್ಕೆ ಸಭಾಧ್ಯಕ್ಷರ ಸಾಭಾತ್ಯಾಗವೇ ಸಾಕ್ಷಿಯಾಗಿದೆ.
ಮನವೊಲಿಸಿದ ಸಿಎಂ ಸಭಾತ್ಯಾಗ ಮಾಡಿದ ಯು.ಟಿ. ಖಾದರ್ ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾದರು. ಉತ್ತರ ನೀಡದ ಮೂರರಿಂದ ನಾಲ್ಕು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲು ಸೂಚನೆ ನೀಡಿದ ಸಿದ್ದರಾಮಯ್ಯ. ಅಲ್ಲದೆ, ಯು.ಟಿ. ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳನ್ನು ಸಹ ಅಮಾನತು ಮಾಡಲಾಗಿದೆ.












