ಇತ್ತೀಚಿನ ಸುದ್ದಿ
ಮತ್ತೆ ಖಾಸಗಿ ಬಸ್ ಅಟ್ಟಹಾಸ: ಮಹಿಳೆ ಬಲಿ; ಇದು ರಸ್ತೆ ಭಯೋತ್ಪಾದನೆ ಅಲ್ವೇ? ಎನ್ನುವುದು ಜನರ ಪ್ರಶ್ನೆ; ಎಸಿಪಿಯವರೇ ದಯವಿಟ್ಟು ಉತ್ತರಿಸಿ
30/03/2023, 15:36
ಮಂಗಳೂರು(reporterkarnataka.com): ಖಾಸಗಿ ಬಸ್ಸುಗಳ ಅಟ್ಟಹಾಸಕ್ಕೆ ಒಂದೇ ವಾರದಲ್ಲಿ ಒಂದೇ ಕಡೆ ಎರಡನೇ ಬಲಿ ನಡೆದಿದೆ. ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಸಿಟಿ ಬಸ್ಸೊಂದು ಅಪೋಷಣ ಮಾಡಿದ ಘಟನೆ ನಗರದ ಬೆಂದೂರ್ ವೆಲ್ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಕಂಕನಾಡಿ ಕಡೆಗೆ ಚಲಿಸುತ್ತಿದ್ದ ಸಿಟಿ ಬಸ್ ಬೆಂದೂರ್ ವೆಲ್ ಸಮೀಪ ರಸ್ತೆ ದಾಟುತ್ತಿದ್ದಾಗ ಮಹಿಳೆಯ ಮೇಲೆ ಹರಿದು ಹೋದ ಪರಿಣಾಮ ಮಹಿಳೆ
ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ.
ಬಸ್ ಚಾಲಕನ ನಿರ್ಲಕ್ಷ್ಯಹಾಗೂ ಅಜಾಕರೂಕತೆಯ ಚಾಲನೆಯಿಂದ ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಮೃತ ಮಹಿಳೆ ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಅಪರಾಧ ಮತ್ತು ಟ್ರಾಫಿಕ್ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೆಂದೂರುವೆಲ್ ಜಂಕ್ಷನ್ ನಲ್ಲಿ ಮಾರ್ಚ್ 24 ರಂದು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು11 ವರ್ಷದ ಬಾಲಕ ಸಾವನ್ನಪ್ಪಿದ್ದ. ಸ್ಕೂಟರ್ ಚಾಲನೆ ಮಾಡುತ್ತಿದ್ದ ಬಾಲಕನ ತಾಯಿ ತೀವ್ರವಾಗಿ ಗಾಯಗೊಂಡಿದ್ದರು. ಅದಕ್ಕಿಂತ ಸ್ವಲ್ಪ ದಿನ ಮುನ್ನ ನಂತೂರು ಜಂಕ್ಷನ್ ನಲ್ಲಿ ಟಿಪ್ಪರ್ ಲಾರಿ ಚಾಲಕ ಸ್ಕೂಟರ್ ವೊಂದನ್ನು ಅಡಿಗೆ ಹಾಕಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಸಾವನ್ನಪ್ಪಿದವರಲ್ಲಿ ಬಾಲಕಿ ಸೇರಿದ್ದಳು. ಇದೊಂದು ರೀತಿಯ ರಸ್ತೆ ಭಯೋತ್ಪಾದನೆ ಅಲ್ವೇ ಎಂದು ಮಂಗಳೂರು ನಾಗರಿಕರು ಪ್ರಶ್ಬಿಸುತ್ತಿದ್ದಾರೆ. ಟ್ರಾಫಿಕ್ ಎಸಿಪಿಯವರೇ ದಯವಿಟ್ಟು ಉತ್ತರ ಕೊಡಿ.