ಇತ್ತೀಚಿನ ಸುದ್ದಿ
ಮಂಗಳೂರು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ರಕ್ತದಾನ ಶಿಬಿರ
01/02/2022, 21:58
ಮಂಗಳೂರು(reporterkarnataka.com): ಕೋವಿಡ್ 19ರ ಮಹಾಮಾರಿಯಿಂದ ಜನರು ತತ್ತರಿಸಿ ಹೋದ ಈ ಸಂದರ್ಭದಲ್ಲಿ ರಕ್ತದಾನದಂತಹ ಮಹತ್ಕಾರ್ಯವನ್ನು ಕೈಗೊಂಡು ನೂರಾರು ಜನರ ಬಾಳಿಗೆ ಆಶಾದೀಪವಾಗಿರುವ ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ನಗರಪಾಲಿಕೆಯ ಕಾರ್ಪೊರೇಟರ್ ಹಾಗೂ ಲೆಕ್ಕ ಪತ್ರ ಸ್ಥಾಯೀ ಸಮಿತಿ ಅಧ್ಯಕ್ಷ ಲೀಲಾವತಿ ಪ್ರಕಾಶ್ ಹೇಳಿದರು.
ಅವರು ಬೆಸೆಂಟ್ ಸಂಧ್ಯಾ ಹಳೆ ವಿದ್ಯಾರ್ಥಿ ಸಂಘ (ರಿ) ಹಾಗೂ ಬೆಸೆಂಟ್ ಸಂಧ್ಯಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆ ಅಂಬೇಡ್ಕರ್ ವೃತ್ತ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಬೆಸಂಟ್ ಸಂಧ್ಯಾ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಸಂಚಾಲಕ ಗಣೇಶ ಕೃಷ್ಣ ಭಟ್ ಹಾಗೂ ಪ್ರಾಂಶುಪಾಲ ಡಾ. ಲಕ್ಷ್ಮಿ ನಾರಾಯಣ ಭಟ್ ಅವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಹಳೆ ವಿದ್ಯಾರ್ಥಿ ಪ್ರದೀಪ್ ಸ್ವಾಗತಿಸಿದರು. ಡಾ. ಸೌಮ್ಯ ಗುಪ್ತ ರಕ್ತದಾನದ ಮಹತ್ವ ಮತ್ತು ರಕ್ತದಾನಕ್ಕೆ ಯಾರು ಅರ್ಹರು ಎಂಬ ಬಗ್ಗೆ ವಿವರಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆದಿತ್ಯ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಮೊದಲಿಯಾರ್, ಸಲಹೆಗಾರ ಶ್ರೀ ಗಣಪತಿ ಭಟ್ ಎಂ. ಉಪಸ್ಥಿತರಿದ್ದರು. ಪದ್ಮಜ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಶ್ ಮೊದಲಿಯಾರ್ ವಂದಿಸಿದರು. ಯೋಗೀಶ್ ಶರ್ಮ ನಿರೂಪಿಸಿದರು.