ಇತ್ತೀಚಿನ ಸುದ್ದಿ
ಲಂಚ ಸ್ವೀಕಾರ: ಅಥಣಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್, ಮೆನೇಜರ್ ಎಸಿಬಿ ಬಲೆಗೆ
22/09/2021, 17:44
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಲಂಚ ಸ್ವೀಕರಿಸುತ್ತಿದ್ದಾಗಲೇ ಅಥಣಿಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಕಚೇರಿಯ ಮ್ಯಾನೇಜರ್ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಇಂದ್ರಪ್ಪ ಪರಣಾಕರ ಹಾಗೂ ಮ್ಯಾನೇಜರ್ ದೀಪಕ ಕೃಷ್ಣಾಜಿ ಕುಲಕರ್ಣಿ ಅವರು ಗುತ್ತಿಗೆದಾರ ಒಬ್ಬರಿಂದ 68,000 ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎಸಿಬಿಯಿಂದ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಇಲಾಖೆ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಬೆಳಗಾವಿಯ ಗುತ್ತಿಗೆದಾರ ಒಬ್ಬರಿಂದ ಇಬ್ಬರೂ ಅಧಿಕಾರಿಗಳು ಶೇ.3 ರಷ್ಟು ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಎಸಿಬಿ ಎಸ್ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.