8:38 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಪ್ರಭಾರ ಎಂಡಿ: ಕುಂಟುತ್ತಿದೆ ಮಂಗಳೂರು ಸ್ಮಾರ್ಟ್‌ಸಿಟಿ ಬಂಡಿ!: ಉಸ್ತುವಾರಿ ಸಚಿವರೇ, ಶಾಸಕರೇ ಯಾಕೆ ವಿಳಂಬ?

20/04/2022, 17:07

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾದ ಮಂಗಳೂರಿಗೆ ಇದುವರೆಗೆ 590.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 442.10 ಕೋಟಿ ರೂ. ಖರ್ಚಾಗಿದೆ. ಆದರೆ ಒಟ್ಟು 52 ಪ್ರಾಜೆಕ್ಟ್ ಗಳಲ್ಲಿ ಕೇವಲ 18 ಮಾತ್ರ ಪೂರ್ಣಗೊಂಡಿದೆ. ವಿಶೇಷವೆಂದರೆ ಸಾವಿರ ಕೋಟಿ ಹರಿದು ಬರುವ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಗೆ ಒಬ್ಬರು ಪೂರ್ಣಾವಧಿಯ ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ)ಇಲ್ಲ.

ಇಲ್ಲಿಯ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಈ ಕುರಿತು ರಾಜ್ಯ ಸರಕಾರಕ್ಕೆ ಒತ್ತಾಯ ಕೂಡ ಮಾಡಿಲ್ಲ. ಮಂಗಳೂರು ಸ್ಮಾರ್ಟ್ ಸಿಟಿಯ ಎಂಡಿ ಆಗಿದ್ದ ಮಹಮ್ಮದ್ ನಜೀರ್ ಅವರನ್ನು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ 
ಎತ್ತಂಗಡಿ ಮಾಡಲಾಯಿತು. ನಂತರ ಮಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಗೆ ಸ್ಮಾರ್ಟ್ ಸಿಟಿ ಎಂಡಿ ಆಗಿ ಹೆಚ್ಚುವರಿ ಹೊಣೆಗಾರಿಕೆ ನೀಡಲಾಯಿತು. ಇದೀಗ ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮೆಹ್ತಾ ಅವರು ಸ್ಮಾರ್ಟ್ ಸಿಟಿಯ ಹೆಚ್ಚುವರಿ ಹೊಣೆಗಾರಿಕೆ ವಹಿಸಿದ್ದಾರೆ.

ಮೊದಲೇ ರಾಜ್ಯ ವಿದ್ಯುತ್ ಇಲಾಖೆ ಸಂಕಷ್ಟದಲ್ಲಿದೆ. ಕಲ್ಲಿದ್ದಲು ಖಾಲಿಯಾಗಿದೆ. ಅಘೋಷಿತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಮೆಹ್ತಾ ಅವರಿಗೆ ಎಲೆಕ್ಟ್ರಿಸಿಟಿ ಸಮಸ್ಯೆ ಪರಿಹಾರದ ದೊಡ್ಡ ಸವಾಲು ಇದೆ. ಇದರ ಜತೆಗೆ ಸಾವಿರ ಕೋಟಿ ಹರಿದು ಬರುವ ಮಂಗಳೂರು ಸ್ಮಾರ್ಟ್ ಸಿಟಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇದೇ ಕಾರಣದಿಂದ ಮಂಗಳೂರು ಸ್ಮಾರ್ಟ್ ಸಿಟಿ ಬಂಡಿ ಮುಂದಕ್ಕೆ ಎಳೆಯುತ್ತಿಲ್ಲ ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಳಲು ವ್ಯಕ್ತಪಡಿಸುತ್ತಿದ್ದಾರೆ.

ಸ್ಮಾರ್ಟ್ ಸಿಟಿಗೆ ಪ್ರತ್ಯೇಕ ಎಂಡಿ ಬೇಕಾಗಿದ್ದಾರೆ ಎಂಬುವುದು ಇಲ್ಲಿನ ಸ್ಥಳೀಯ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರಿಗೆ ಗೊತ್ತಿದ್ದರೂ ಅವರು ಮೌನಕ್ಕೆ ಶರಣಾಗಿದ್ದಾರೆ. ಕಳೆದ ತಿಂಗಳು ನಡೆದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಶಾಸಕರು ಯಾವುದೇ ಪ್ರಸ್ತಾವ ಮಾಡಿಲ್ಲ. ಅದು ಬಿಡಿ, ಪತ್ರದ ಮೂಲಕವೂ ಸರಕಾರಕ್ಕೆ ಒತ್ತಾಯ ಮಾಡಿಲ್ಲ.

ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ರಸ್ತೆ ರಿಪೇರಿ, ಬಣ್ಣದ ಫುಟ್ ಪಾತ್, ಕೆರೆ ದುರಸ್ತಿಯಲ್ಲೇ ಬ್ಯುಸಿಯಾಗಿದ್ದಾರೆ. ಹಾಗಂತ ರಸ್ತೆ, ಫುಟ್ ಪಾತ್ ಬೇಡ ಎಂದಲ್ಲ. ಸಾಕಷ್ಟು ಗಟ್ಟಿಮುಟ್ಟಾಗಿದ್ದ ರಸ್ತೆಯನ್ನು ಅಗೆದು ಮರು ಮೇಕಪ್ ಮಾಡುವ ಅವಶ್ಯಕತೆಯಾದರೂ ಏನು ಎಂದು ತೆರಿಗೆದಾರರು ಪ್ರಶ್ನಿಸುತ್ತಾರೆ. ರಸ್ತೆಗಾಗಿಯೇ ಸ್ಮಾರ್ಟ್ ಸಿಟಿ ಫಂಡ್ ನಲ್ಲಿ 250 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ 120 ಕೋಟಿ ರೂ.ವನ್ನು ಈಗಾಗಲೇ ರಸ್ತೆಗೆ ವಿನಿಯೋಗಿಸಲಾಗಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಯ ಮಾಹಿತಿ ತಿಳಿಸುತ್ತದೆ.

ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಯಿಂದ ಇದುವರೆಗೆ ಒಟ್ಟು 52 ಪ್ಯಾಕೇಜ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬರೇ 18 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದೆ. 26 ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 4 ಕಾಮಗಾರಿ ಟೆಂಡರ್ ಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪೂರ್ಣಗೊಂಡ ಕಾಮಗಾರಿ ಕೂಡ ದೊಡ್ಡ ಪ್ರಾಜೆಕ್ಟ್ ಏನೂ ಅಲ್ಲ. ಕ್ಲಾಕ್ ಟವರ್, ಸ್ಮಾರ್ಟ್ ರೋಡ್, ಸ್ಮಾರ್ಟ್ ಸ್ಕೂಲ್, ಸರಕಾರಿ ಕಚೇರಿಗಳಿಗೆ  ಎಲ್ ಇಡಿ ಅಳವಡಿಕೆ, ಸರಕಾರಿ ಕಚೇರಿಗಳಿಗೆ ಸೋಲಾರ್ ಪ್ಯಾನಲ್ ಅಳವಡಿಕೆ ಮುಂತಾದ ಚಿಲ್ಲರೆ ಕಾಮಗಾರಿಯನ್ನು ಪೂರ್ಣಗೊಂಡ ಕಾಮಗಾರಿ ಪಟ್ಟಿಯಲ್ಲಿ ತೋರಿಸಲಾಗುತ್ತಿದೆ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡ ಆರಂಭದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಸಂಬಂಧಿಸಿದ ಮಂಗಳೂರು ಸ್ಪೆಷಲ್ ಪರ್ಪಸ್ ವೆಹಿಕಲ್(ಎಸ್‌ಪಿವಿ)ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಆರಂಭದಲ್ಲಿ ಒಟ್ಟು 216 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. 2015-16ನೇ ಸಾಲಿನಲ್ಲಿ ಕೇಂದ್ರ 2 ಕೋಟಿ, 2017-18ನೇ ಸಾಲಿನಲ್ಲಿ ಕೇಂದ್ರದಿಂದ 109 ಕೋಟಿ ಹಾಗೂ ರಾಜ್ಯದಿಂದ 105 ಕೋಟಿ ಅನುದಾನ ಬಂದಿತ್ತು. 2 ಕೋಟಿ ರೂ.ಮತ್ತೆ ಬಿಡುಗಡೆಯಾಗಿತ್ತು. ಇದೀಗ ಒಟ್ಟು 590.25 ಕೋಟಿ ರೂ. ಅನುದಾನ ಬಂದಿದೆ. ಈ ವರ್ಷದ ಅಂತ್ಯದೊಳಗೆ ಒಟ್ಟು ಅನುದಾನ 930 ಕೋಟಿ ರೂಪಾಯಿಗೆ ಏರಲಿದೆ.

ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಸ್‌ಪಿವಿಗೆ ಪ್ರತ್ಯೇಕ ಎಂಡಿ ನೇಮಕ ಮಾಡುವ ಕುರಿತು ಅಂದಿನ ಕಾಂಗ್ರೆಸ್ ಸರಕಾರ ಪ್ರಕಟಿಸಿತ್ತು. ಸ್ವಲ್ಪ ಸಮಯ ಮಹಮ್ಮದ್ ನಜೀರ್ ಅವರು ಪೂರ್ಣಾವಧಿಯ ಎಂಡಿ ಆಗಿ ಕಾರ್ಯನಿರ್ವಹಿಸಿದ್ದನ್ನು ಬಿಟ್ಟರೆ ಪ್ರಭಾರಗಳೇ ಜಾಸ್ತಿ. ಈಗಲೂ ಪ್ರತ್ಯೇಕ  ಎಂಡಿ ನೇಮಕ ನಡೆದಿಲ್ಲ. ಪ್ರಸ್ತುತ ಮೆಸ್ಕಾಂ ಎಂಡಿ ಇಲ್ಲಿನ ಪ್ರಭಾರ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ 
ಸಚಿವ ಸುನಿಲ್ ಕುಮಾರ್ ಹಾಗೂ ಉಸ್ತುವಾರಿ ಕಾರ್ಯದರ್ಶಿಯವರು ಇತ್ತ ಗಮನ ಹರಿಸುವುದು ಅಗತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು