ಇತ್ತೀಚಿನ ಸುದ್ದಿ
ಚಂದನದಲ್ಲಿ ಕುಂ. ವೀರಭದ್ರಪ್ಪನವರ ‘ಅರಮನೆ’ ಮಹಾಕಾವ್ಯದ ದೃಶ್ಯರೂಪ ಮಾರ್ಚ್ 25ರಿಂದ ಪ್ರಸಾರ
22/03/2026, 23:13
ಬೆಂಗಳೂರು(reporterkarnataka.com): ಗುಣಮಟ್ಟದ ಕಾರ್ಯಕ್ರಮಗಳು ಹಾಗೂ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾಗಿರುವ ದೂರದರ್ಶನ ಚಂದನ ವಾಹಿನಿಯು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕೃತಿಗಳನ್ನು ಕಿರುತೆರೆಯ ಮೇಲೆ ತರುವ ತನ್ನ ಸುದೀರ್ಘ ಪರಂಪರೆಯನ್ನು ಮುಂದುವರಿಸುತ್ತಿದೆ. ಈ ನಿಟ್ಟಿನಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ, ನಾಡೋಜ ಡಾ. ಕುಂ. ವೀರಭದ್ರಪ್ಪ ಅವರ ವಿಶಿಷ್ಟ ಕೃತಿ ಅರಮನೆ ಈಗ ಮೆಗಾ ಧಾರಾವಾಹಿಯಾಗಿ ಮೂಡಿಬರುತ್ತಿದೆ.


ಈ ಧಾರವಾಹಿಯು ಮಾರ್ಚ್ 25 ರಿಂದ, ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30 ಗಂಟೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.
*ಸಾಂಸ್ಕೃತಿಕ ಹಿನ್ನೆಲೆ ಮತ್ತು ವಿಶೇಷತೆ*:
ದೂರದರ್ಶನ ಚಂದನವು ಮೊದಲಿನಿಂದಲೂ ಖ್ಯಾತ ಸಾಹಿತಿಗಳ ಕಥೆ-ಕಾದಂಬರಿಗಳನ್ನು ಆಧರಿಸಿದ ಧಾರಾವಾಹಿಗಳ ಮೂಲಕ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದೆ. ಇದೀಗ ಅದೇ ಕಟಿಬದ್ಧತೆಯೊಂದಿಗೆ, ಆಧುನಿಕ ತಂತ್ರಜ್ಞಾನ ಮತ್ತು ರಂಗಭೂಮಿಯ ಸತ್ವವನ್ನು ಬೆರೆಸಿ ‘ಅರಮನೆ’ ಕಾದಂಬರಿಯನ್ನು ದೃಶ್ಯರೂಪಕ್ಕೆ ಇಳಿಸಲಾಗಿದೆ.
*ತಾಂತ್ರಿಕ ಮತ್ತು ಕಲಾತ್ಮಕ ತಂಡ*:
ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಭರವಸೆಯ ಯುವ ನಿರ್ದೇಶಕರಾದ ಮನ್ಸೋರೆ ಅವರು ಈ ಬೃಹತ್ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತ ಬಿ. ಜಯಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸರಣಿಯ ವಿಶೇಷ ಆಕರ್ಷಣೆ.
*ತಾರಾಗಣ*: ಬಿ. ಎಂ. ಗಿರಿರಾಜ್, ವೆಂಕಟೇಶ್ ಪ್ರಸಾದ್, ಚಂದನಾ, ಸಿತಾರ ನೀನಾಸಂ, ಬಿಂದು ರಕ್ಷಿದಿ, ವಿನಯ್ ಕೃಷ್ಣಸ್ವಾಮಿ, ಗುಂಡಣ್ಣ, ಮಂಜುನಾಥ ಜಂಬೆ ಮುಂತಾದ ಚಿತ್ರರಂಗ ಮತ್ತು ರಂಗಭೂಮಿಯ ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.
*ತಾಂತ್ರಿಕ ವರ್ಗ*: ಶಿವು ಬಿ. ಕೆ. ಕುಮಾರ್ ಅವರ ಛಾಯಾಗ್ರಹಣ, ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆ ಈ ಧಾರಾವಾಹಿಗಿದೆ.
*ಗಾಯನ ಮತ್ತು ಸಾಹಿತ್ಯ*: ತ್ರಿಲೋಕ್ ಅವರ ಸಾಹಿತ್ಯವಿರುವ ಶೀರ್ಷಿಕೆ ಗೀತೆಯನ್ನು ಖ್ಯಾತ ಗಾಯಕ ರವೀಂದ್ರ ಸೊರಗಾವಿ ಹಾಡಿದ್ದಾರೆ. ಪಿ. ಚಂದ್ರಿಕಾ ಅವರ ಚಿತ್ರಕಥೆ ಹಾಗೂ ಪ್ರವೀಣ್ ಕುಮಾರ್ ಜಿ. ಅವರ ಸಂಭಾಷಣೆ ಕೃತಿಯ ಹೂರಣವನ್ನು ಸಮರ್ಥವಾಗಿ ಕಟ್ಟಿಕೊಟ್ಟಿವೆ.
ಉತ್ತಮ ಸಾಹಿತ್ಯ ಕೃತಿಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಈ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಕನ್ನಡದ ಎಲ್ಲಾ ಕಲಾಭಿಮಾನಿಗಳು ಮತ್ತು ಪ್ರೇಕ್ಷಕರು ಪ್ರೀತಿಯಿಂದ ಬೆಂಬಲ ನೀಡಬೇಕೆಂದು ಚಂದನ ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.












