ಇತ್ತೀಚಿನ ಸುದ್ದಿ
ಖಡಕ್ ಇಲ್ಲದ ಖಾಕಿ!: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಕೇವಲ 14 ಸಾವಿರಕ್ಕೆ ಹೆಣ್ಣು ಮಗು ಮಾರಾಟ!
20/03/2025, 11:53

*ಸಿಎಂ ನಂಜನಗೂಡಿಯಲ್ಲಿ ಮಗು ಮಾರಾಟ ಆರೋಪ...!**
*ಪ್ರಕರಣ ದಾಖಲಿಸದೇ ಮೀನಾ ಮೇಷ ಎಣಿಸುತ್ತಿರುವ ಪೊಲೀಸರು...!*
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದಕ್ಷಿಣಕಾಶಿ ನಂಜನಗೂಡಿನಲ್ಲಿ ಮತ್ತೊಂದು ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಕೇವಲ 14 ಸಾವಿರಕ್ಕೆ ಹೆಣ್ಣುಮಗು ಮಾರಾಟ ಮಾಡಲಾಗಿದೆ.
ಮಗು ಮಾರಾಟ ಬೆಳಕಿಗೆ ಬಂದರೂ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲೇ ಘಟನೆ ನಡೆದರೂ ಪೊಲೀಸರು ಲೆಕ್ಕಕ್ಕೇ ಇಲ್ಲವೆಂಬಂತೆ ವರ್ತಿಸಿರುವುದ ಭಾರಿ ಅನುಮಾನಕ್ಕೆ ಕಾರಣವಾಗಿದೆ.
ನಂಜನಗೂಡಿನ ನೀಲಕಂಠನಗರದ ಅನಿಲ್ ಕುಮಾರ್ ಹಾಗೂ ಸೌಮ್ಯ ಎಂಬ ದಂಪತಿಗೆ ಸೇರಿದ ಮಗುವನ್ನು ಮಾರಾಟ ಮಾಡಿರುವ ಆರೋಪ ಇದಾಗಿದೆ. ದಂಪತಿಗೆ ಹುಟ್ಟಿದ ಮೂರು ಮಕ್ಕಳಲ್ಲಿ ಮೂರನೇ ಮಗು ಎರಡು ವರ್ಷದ ಹಸುಗೂಸು ಅಮೂಲ್ಯಳನ್ನ ಮಾರಾಟ ಮಾಡಲಾಗಿದೆ. ಚಾಮರಾಜನಗರದ ನಿವಾಸಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
ನೀಲಕಂಠ ನಗರದಲ್ಲಿ ವಾಸವಿದ್ದ ಲಕ್ಷ್ಮಿ ಎಂಬ ಮಧ್ಯವರ್ತಿ ಮಹಿಳೆ ಮಗುವಿನ ಪೋಷಕರ ಬಡತನ ಹಾಗೂ ಅವರ ಮುಗ್ಧತನವನ್ನು ಬಳಸಿ ಅವರಿಂದ ಮಗುವನ್ನು 14000 ಕ್ಕೆ ಖರೀದಿಸಿ ಚಾಮರಾಜನಗರದ ಮೂಲದವನಿಗೆ ಹೆಚ್ಚು ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಗು ಮಾರಾಟ ಆಗಿದೆ ಎಂಬ ಮಾಹಿತಿಯೊಂದು ಅಂಗನವಾಡಿ ಕಾರ್ಯಕರ್ತೆ ಲಾವಣ್ಯ ಎಂಬುವರಿಗೆ ದೂರು ಬಂದಿದೆ. ಕೂಡಲೇ ಲಾವಣ್ಯ ರವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಶಿಶು ಅಭಿವೃದ್ಧಿ ಅಧಿಕಾರಿ ಭವ್ಯಶ್ರೀ ಅವರ ಸಮಯ ಹಾಗೂ ಕಾರ್ಯಪ್ರಜ್ಞೆಯಿಂದಾಗಿ ಸ್ಥಳೀಯ ಮುಖಂಡರಾದ ಅನಂತ್ ರವರ ಸಹಕಾರದೊಂದಿಗೆ ಮಗುವನ್ನ ಮಾರಾಟ ಮಾಡಿದ ಮಹಿಳೆ ಮತ್ತು ಖರೀದಿಸಿದವರನ್ನು ಸಂಪರ್ಕಿಸಿದಾಗ 14 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿ. ನಮಗೆ ನಮ್ಮ ಹಣ ಕೊಟ್ಟರೆ ಮಗು ಕೊಡುವುದಾಗಿ ತಿಳಿಸಿದ್ದಾರೆ. ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಇಲ್ಲವಾದಲ್ಲಿ ಪೊಲೀಸ್ ಗೆ ದೂರು ನೀಡಲಾಗುವುದು ಎಂದು ಹೇಳಿದಾಗ ಮಗುವನ್ನು ವಾಪಸ್ ತಂದು ಕೊಟ್ಟಿದ್ದಾರೆ. ಮಗು ವಾಪಸ್ ಬಂದ ವಿಷಯ ತಿಳಿದು ಪೊಲೀಸರು ಎಂಟ್ರಿ ಕೊಟ್ಟು ಮಗುವನ್ನ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಇಷ್ಟೆಲ್ಲ ಘಟನೆ ನಡೆದು ಮಗು ಮಾರಾಟದ ಸುಳಿವು ಸಿಗುತ್ತಿದ್ದಂತೆ ಮಗು ಮಾರಾಟ ಮಾಡಿಸಿದ್ದ ಮಧ್ಯವರ್ತಿ ಮಹಿಳೆ ಲಕ್ಷ್ಮಿ ಘಟನೆಗೆ ಹೆದರಿ ಮನೆ ಖಾಲಿ ಮಾಡಿ ಹೋಗಿದ್ದಾಳೆ. ಮಗು ಖರೀದಿಸಿದ್ದ ಚಾಮರಾಜನಗರ ಮೂಲದ ವ್ಯಕ್ತಿಗಳು ಹಣ ಹಿಂಪಡೆದು ಮಗುವನ್ನು ವಾಪಸ್ ನೀಡಿದ್ದಾರೆ.
ಇಷ್ಟೆಲ್ಲ ನಡೆದಿರುವ ಮಗು ಮಾರಾಟ ಪ್ರಕರಣ ನಂಜನಗೂಡು ಟೌನ್ ಪೊಲೀಸರ ಗಮನಕ್ಕೆ ಬಂದು ನೇರವಾಗಿ ಎಂಟ್ರಿ ಕೊಟ್ಟು ಮಗುವನ್ನ ಮೈಸೂರಿನಲ್ಲಿರುವ ಶಿಶುಪಾಲನಾ ಅಧಿಕಾರಿಗಳ ವಶಕ್ಕೆ ನೀಡಿದ್ದರೂ ಯಾರ ವಿರುದ್ದವೂ ಇದುವರೆಗೆ ಪ್ರಕರಣ ದಾಖಲಿಸದೇ ಇರುವುದಕ್ಕೆ ಕಾರಣ ಗೊತ್ತಿಲ್ಲ .
ಪಟನೆಗೆ ಸಂಬಂಧಿಸಿದಂತೆ ಮಗುವನ್ನ ಮಾರಾಟ ಮಾಡಿದವರಾಗಲಿ,ಮಧ್ಯವರ್ತಿಯಾಗಲಿ ಅಥವಾ ಖರೀದಿಸದವರನ್ನಾಗಲಿ ವಶಕ್ಕೆ ಪಡೆದು ವಿಚಾರಣೆಯನ್ನು ಸಹ ನಡೆಸಿಲ್ಲ. ಇಂತಹ ಗಂಭೀರ ಪ್ರಕರಣ ನಡೆದಿದ್ದರೂ ಇವರು ಕೂಡ ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಆರೋಪಿಗಳನ್ನ ವಾಪಸ್ ಕಳುಹಿಸಿರುವುದು ಇವರ ಕಾರ್ಯವೈಕರಿಗೆ ಸಾಕ್ಷಿಯಾಗಿದೆ. ಸದ್ಯಕ್ಕೆ ವಿಧಾನಸಭೆ ಕಲಾಪಗಳು ನಡೆಯುತ್ತಿರುವ ವೇಳೆ ಇಂತಹ ಘಟನೆಯನ್ನು ರಹಸ್ಯವಾಗಿ ಇಡುವ ಹುನ್ನಾರವೇ ಎಂಬ ಅನುಮಾನವಾಗಿದೆ…?
ಮುಂದೆ ನಂಜನಗೂಡಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಎಸ್ ಪಿ ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕಾಗಿದೆ.