ಇತ್ತೀಚಿನ ಸುದ್ದಿ
ಕೇರಳ ಪೊಲೀಸರಿಂದ ಸೋಮವಾರಪೇಟೆಯ ಮನೆಯೊಂದರ ಮೇಲೆ ದಾಳಿ: ವ್ಯಕ್ತಿ ತೀವ್ರ ಗಾಯ
26/09/2025, 15:16

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳ ರಾಜ್ಯದ ಪೊಲೀಸರ ತಂಡವೊಂದು ಸೋಮವಾರಪೇಟೆ ತಾಲ್ಲೂಕಿನ ಅಬುರುಕಟ್ಟೆ ಸಮೀಪದ ಮೋರಿಕಲ್ಲು ಗ್ರಾಮದ ಮನೆಯೊಂದಕ್ಕೆ ಏಕಾಏಕಿ ನುಗ್ಗಿ ಮನೆಯವರ ಮೇಲೆ ದಾಳಿ ನಡೆಸಿದ ಪರಿಣಾಮ ಒಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕೇರಳದ ಪ್ರಕರಣವೊಂದರ ತನಿಖೆ ಸಂಬಂಧ ಸೋಮವಾರಪೇಟೆಗೆ ಆಗಮಿಸಿರುವ ಪೊಲೀಸರು ಇಂದು ಬೆಳಗ್ಗೆ ಮೋರಿಕಲ್ಲು ಗ್ರಾಮದ ಬಿನೇಶ್ ಎಂಬುವವರ ಮನೆ ಮೇಲೆ ದಾಳಿ ನಡೆಸಿ ಮನೆಯವರಿಗೆಲ್ಲ ಥಳಿಸಿ, ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಬಿನೇಶ್ ತೀವ್ರವಾಗಿ ಗಾಯಗೊಂಡು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ ಕೇರಳದ ಅಪರಾಧ ಪ್ರಕರಣದಲ್ಲಿ ಬೇಕಾದ ಆರೋಪಿ ಬಿನೇಶ್ ಸಹೋದರ, ಆತನ ಮನೆಗೆ ಮನೆಗೆ ದಾಳಿ ನಡೆಸುವ ಬದಲು ತಪ್ಪಾಗಿ ಬಿನೇಶ್ ಮನೆಗೆ ನುಗ್ಗಿದ್ದಾರೆ, ಈ ವೇಳೆ ಬಿನೇಶ್ ತಾನು ಹೃದಯ ಸಂಬಂಧಿಸಿದ ರೋಗದಿಂದ ಬಳಲೂತ್ತಿದ್ದೇನೆ, ಹೊಡಿಬೇಡಿ ಎಂದು ಅಂಗಲಾಚಿದರು ಎದೆಗೆ ಕಾಲಿನಿಂದ ಒದ್ದಿದ್ದು ಹಾಗೂ ದಾಳಿ ಮಾಡಿದ ಪೊಲೀಸರು ಮದ್ಯಪಾನ ಮಾಡಿ ಬಂದಿದ್ದರು ಎಂದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.