ಇತ್ತೀಚಿನ ಸುದ್ದಿ
ಜ.11ರಂದು ಉಳ್ಳಾಲ ನರಿಂಗಾನ ಕಂಬಳೋತ್ಸವ: ಸ್ಪೀಕರ್ ಯು.ಟಿ.ಖಾದರ್
09/01/2025, 22:46
ಮಂಗಳೂರು(reporterkarnataka.com): ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಸಹಕಾರದಲ್ಲಿ ನರಿಂಗಾನ ಗ್ರಾಮದ ಮೋರ್ಲ- ಬೋಳದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಲವ- ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ ಜ.11ರಂದು ಬೆಳಗ್ಗೆ 8.30ರಿಂದ ನಡೆಯಲಿದೆ.
ಈ ಬಾರಿಯ ಕಂಬಳೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಪಜೀರಿನಲ್ಲಿ 25 ವರ್ಷ ಕಂಬಳ ನಡೆಸಿದ, ಕೋಣದ ಯಜಮಾನ ವೆಂಕಪ್ಪ ಕಾಜವ ಮಿತ್ತಕೋಡಿ ಗೌರವಾಧ್ಯಕ್ಷತೆಯಲ್ಲಿ ಮತ್ತು ಅದೇ ಅನುಭವ ಪಡೆದುಕೊಂಡಿರುವ ಅವರ ಪುತ್ರ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಕಾರ್ಯಧ್ಯಕ್ಷತೆಯಲ್ಲಿ ಎರಡು ವರ್ಷ ನಡೆದ ಕಂಬಳ ಯಶಸ್ಸು ಕಂಡಿದೆ. ಕಂಬಳ ಕೋಣಗಳ ಯಜಮಾನ ದಿವಂಗತ ಸುಧಾಕರ ಆಳ್ವ ಮೋರ್ಲ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ ಕೋಣದ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ವಿಜೇತ ಕೋಣಗಳನ್ನು ಓಡಿಸಿದ ಓಟಗಾರರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಮಾಣಿಲಧಾಮದ ಶ್ರೀ
ಮೋಹನದಾಸ ಸ್ವಾಮೀಜಿ ಕಂಬಳೋತ್ಸವ ಉದ್ಘಾಟಿಸಲಿದ್ದು, ಶಾಂತಿಪಳಿಕೆ ಕ್ಷೇತ್ರದ ಪ್ರಧಾನ ತಂತ್ರಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದ್ವೀಪ ಪ್ರಜ್ವಲನ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಮುಲೈ ಮುಗಿಲನ್, ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಪಿ.ಜಿ.ಹನೀಫ್, ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಫಾದರ್ ಫೆಡ್ರಿಕ್ ಕೊರೆಯ ಮತ್ತಿತರರು ಭಾಗವಹಿಸಲಿದ್ದಾರೆ. ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸಮಾರೋಪದಲ್ಲಿ ಮುಖ್ಯಮಂತ್ರಿ ಸಹಿತ ಗಣ್ಯರು, ಚಲನಚತ್ರ ನಟರಾದ ಸುನಿಲ್ ಶೆಟ್ಟಿ, ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ, ಪ್ರದೀಪ್ ಆಳ್ವ ಕದ್ರಿ, ದೇವದಾಸ್ ಕಾಪಿಕಾಡ್, ಮಂಜು ಎಂ.ರೈ ಭೋಜರಾಜ್ ವಾಮಂಜೂರು, ಸೂರಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಜ.13ರಂದು ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ನತ್ಯ ವೈಭವ, ನಾನಾ ಸ್ಪರ್ಧೆಗಳ ಸಹಿತ ನರಿಂಗಾನ ಗ್ರಾಮೋತ್ಸವ ನಡೆಯಲಿದೆ ಎಂದು ಅವರ ಹೇಳಿದರು.