ಇತ್ತೀಚಿನ ಸುದ್ದಿ
ಅವಘಡ, ವಿಪತ್ತು ತಡೆಗೆ ಏಕೀಕೃತ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
20/03/2025, 20:24

ಮಂಗಳೂರು(reporterkarnataka.com): ಕೈಗಾರಿಕೆಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಅವಘಡ ಮತ್ತು ವಿಪತ್ತುಗಳಿಂದ ರಕ್ಷಿಸಲು ಏಕೀಕೃತ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಕರೆ ನೀಡಿದ್ದಾರೆ.
ಅವರು ಗುರುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ 54ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ರಿಸ್ಕ್ ಕೈಗಾರಿಕೆಗಳು ಸೇರಿದಂತೆ ವಿವಿಧ ರೀತಿಯ ಉದ್ಯಮಗಳು ಇವೆ. ಇವು ತಮ್ಮ ಸುರಕ್ಷತಾ ವ್ಯವಸ್ಥೆಯನ್ನು ಆಗಿಂದ್ದಾಗೆ ಪರಿಶೀಲಿಸುತ್ತಿರಬೇಕು. ಯಾವುದೇ ಅನಾಹುತಗಳಾದರೆ ಅವುಗಳ ಪರಿಣಾಮ ಇತರೆ ಪ್ರದೇಶಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಮತ್ತು ಜನವಸತಿ ಪ್ರದೇಶಗಳ ಸುರಕ್ಷತೆಗೆ ಎಲ್ಲಾ ಭಾಗೀದಾರಿ ಇಲಾಖೆಗಳು ಹಾಗೂ ಸುರಕ್ಷತಾ ಏಜೆನ್ಸಿಗಳು ಏಕೀಕೃತವಾದ ಸುರಕ್ಷತಾ ವ್ಯವಸ್ಥೆಯನ್ನು ಹೊಂದಬೇಕು. ಇದರಿಂದ ಯಾವುದೇ ಅನಾಹುತಗಳ ಸಂದರ್ಭದಲ್ಲಿ ಜೀವ ಹಾನಿ ಮತ್ತು ನಷ್ಟದ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ಅವರು ಹೇಳಿದರು.
ನಾಗರೀಕರು ತಮ್ಮ ದೈನಂದಿನ ಬದುಕಿನಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಆಗಿಂದ್ದಾಗೆ ಪರಿಶೀಲಿಸಬೇಕು. ಯಾವುದೇ ಅನಾಹುತಗಳಿಂದ ಮಾನಸಿಕ ಸ್ಥಿರತೆ ಮೇಲೂ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸುರಕ್ಷತಾ ವ್ಯವಸ್ಥೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ. ತಿರುಮಲೇಶ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಜಂಟಿ ನಿರ್ದೇಶಕ ನರೇಂದ್ರಬಾಬು , ಎಂ.ಆರ್.ಪಿ.ಎಲ್ ರಿಫೈನರಿ ನಿರ್ದೇಶಕ ನಂದಕುಮಾರ್ ಪಿಲ್ಲೈ, ರಾಷ್ಟ್ರೀಯ ಸುರಕ್ಷತಾ ಕೌನ್ಸಿಲ್ ಮಂಗಳೂರು ಘಟಕದ ಸಮನ್ವಯಕಾರ ಪಿ.ಎಫ್ ಮರಿಯಣ್ಣನವರ್ ಉಪಸ್ಥಿತರಿದ್ದರು.
ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಉಪ ನಿರ್ದೇಶಕ ಎಂ.ಎಸ್ ಮಹಾದೇವ ಸ್ವಾಗತಿಸಿದರು.