ಇತ್ತೀಚಿನ ಸುದ್ದಿ
ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಕೊಡಗು ಜಿಲ್ಲೆಯ 6 ಮಂದಿ ಸ್ಥಳದಲ್ಲೇ ಸಾವು; ಇಬ್ಬರು ಗಂಭೀರ
20/04/2022, 20:31
ಹುಣಸೂರು(reporterkarnataka.com): ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೊಲೊರೋದಲ್ಲಿ ಹಿಂತಿರುತ್ತಿದ್ದಾಗ ವಾಹನ ಮರಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಹುಣಸೂರು ಬಳಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಪಾಲಿಬೆಟ್ಟ ಗ್ರಾಮದ ನಿವಾಸಿಗಳು ಬೊಲೋರೋದಲ್ಲಿ ಹುಣಸೂರಿನಲ್ಲಿ ಆಯೋಜಿಸಿದ್ದ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿ ಪಾಲಿಬೆಟ್ಟ ಕಡೆಗೆ ಬರುತ್ತಿದ್ದಾಗ ಅರಸು ಕಲ್ಲಹಳ್ಳಿ ಬಳಿ ಅವಘಡ ಸಂಭವಿಸಿದೆ.
ಮೃತರನ್ನು ರಾಜೇಶ್, ಅನಿಲ್, ಸಂತೋಷ್, ವಿನುತ್, ದಯಾನಂದ್, ಬಾಬು ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮದವರು ಎಂದು ತಿಳಿದುಬಂದಿದೆ.