7:18 PM Friday24 - January 2025
ಬ್ರೇಕಿಂಗ್ ನ್ಯೂಸ್
ಗೃಹಲಕ್ಷ್ಮೀ ಮೂಲಕ ಮಹಿಳೆಯರ ಸಬಲೀಕರಣ, ಮೈಕ್ರೋ ಫೈನಾನ್ಸ್ ಮೂಲಕ ಜೀವಹರಣ: ಕೇಂದ್ರ ಸಚಿವ… 7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ…

ಇತ್ತೀಚಿನ ಸುದ್ದಿ

ಗೃಹಲಕ್ಷ್ಮೀ ಮೂಲಕ ಮಹಿಳೆಯರ ಸಬಲೀಕರಣ, ಮೈಕ್ರೋ ಫೈನಾನ್ಸ್ ಮೂಲಕ ಜೀವಹರಣ: ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

24/01/2025, 19:06

ಮೈಸೂರು(reporterkarnataka.com): ಮಹಿಳೆಯರಿಗೆ ₹2000 ಗೃಹಲಕ್ಷ್ಮಿ ಹಣ ಕೊಟ್ಟು ಸಬಲೀಕರಣ ಮಾಡುತ್ತೇವೆ ಎನ್ನುವ ರಾಜ್ಯ ಸರಕಾರ; ಇನ್ನೊಂದು ಕಡೆ ಅದೇ ಮಹಿಳೆಯರ ಜೀವ ಹರಣ ಮಾಡಲು ಮೈಕ್ರೋ ಫೈನಾನ್ಸ್ ಗಳಿಗೆ ಧಾರಾಳವಾಗಿ ಅವಕಾಶ ಕೊಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಕೆ. ಆರ್. ನಗರದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ಉತ್ತಮ ಆಡಳಿತಕ್ಕೆ ಕರ್ನಾಟಕ ಮಾದರಿ ಆಗಿತ್ತು. ಅದನ್ನು ಸರ್ವನಾಶ ಮಾಡಲು ಇವರು ಹೊರಟಿದ್ದಾರೆ ಎಂದು ಟೀಕಿಸಿದರು.
ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಇವರು ಜನರಿಗೆ ಏನು ಮಾಡಿದ್ದಾರೆ. ಒಂದು ತಿಂಗಳ ಹಿಂದೆಯೇ ಚಾಮರಾಜನಗರದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಶುರುವಾಯಿತು. ಜನರು ಊರೇ ಬಿಟ್ಟು ಹೋದರು. ಸಮಸ್ಯೆ ಶುರುವಾಗಿ ಇಷ್ಟು ದಿನವಾದರೂ ಈಗ ಇವರು ನಾಳೆ ಸಭೆ ಕರೆದಿದ್ದಾರೆ. ಇಷ್ಟೆಲ್ಲಾ ಹಾವಳಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದರೂ ಸರ್ಕಾರ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ.. ಯಾಕೆ? ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ರೈತ ಮಹಿಳೆಯರು ಮತ್ತು ಬಡ ಮಹಿಳೆಯರೇ ಹೆಚ್ಚಾಗಿ ಮೈಕ್ರೋ ಫೈನಾನ್ಸ್ ಗಳಿಗೆ ಗುರಿಯಾಗುತ್ತಿದ್ದಾರೆ. ಇವರೆಲ್ಲರೂ ತಮ್ಮ ಮನೆ ಊರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಕೇಂದ್ರ ಸಚಿವರು ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳು ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಕಾನೂನುಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿವೆ. ಕಾನೂನು ನಿಯಂತ್ರಣ ಇಲ್ಲ. 2018ರಲ್ಲಿ ನಾನು ಕಾಂಗ್ರೆಸ್ ಪಕ್ಷದ ಜತೆ ಸೇರಿ ಸರಕಾರ ಮಾಡಿದ್ದೆ. ಋಣ ಮುಕ್ತ ಕಾಯ್ದೆಯನ್ನು ಜಾರಿಗೆ ತಂದಿದ್ದೆ. ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಯೇ ಅಂಗೀಕಾರವಾಗಿದೆ. ರಾಜ್ಯಪಾಲರು ಒಪ್ಪಿಗೆ ಕೊಟ್ಟ ಮೇಲೆ ನಾನೇ ಸ್ವತಃ ದೆಹಲಿಗೆ ಹೋಗಿ ರಾಷ್ಟ್ರಪತಿಗಳ ಅಂಕಿತ ಹಾಕಿಸಿಕೊಂಡು ಬಂದೆ. ನಂತರ ಬಂದ ಸರಕಾರಗಳು ಆ ಕಾಯ್ದೆಯನ್ನು ಏನು ಮಾಡಿದವು? ಎಂದು ಬೇಸರ ವ್ಯಕ್ತಪಡಿಸಿದರು.
ದೇವರಾಜ ಅರಸು ಅವರಿಗೆ ಸರಿಸಮಾನವಾದ ಅಧಿಕಾರ ಮಾಡಿದವರು ಎಂದು ಹೇಳುತ್ತಿದ್ದೀರಿ. ಈ ಐದು ವರ್ಷ ಅಲ್ಲ, ಮುಂದಿನ ಐದು ವರ್ಷವೂ ನೀವೇ ಬನ್ನಿ. ಆದರೆ, ಜನಕ್ಕೆ ಏನು ಒಳ್ಳೆಯದು ಮಾಡಿದ್ದೀರಿ ಎನ್ನುವುದನ್ನು ಹೇಳಿ. ಆ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಆ ಮಾಹಿತಿ ನನಗಿತ್ತು. ಕೇರಳಕ್ಕೆ ತೆರಳಿ ಖುದ್ದು ಆ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ನಾನು ಅಂದಿನ ನನ್ನ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ನೇತೃತ್ವದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದೆ. ಆಮೇಲೆ ಅದು ಏನಾಯಿತು? ಎಂದು ಅವರು ಪ್ರಶ್ನಿಸಿದರು.

*ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್:*
ಸಿಎಂ ಅವರು ನಾಳೆ ಸಭೆ ಕರೆದಿದ್ದಾರೆ. ಸಭೆ ಕರೆದು ಏನು ಮಾಡುತ್ತೀರಿ? ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ? ಎಷ್ಟು ಜನರು ಮನೆ ಊರು ಬಿಟ್ಟು ಹೋಗಿದ್ದಾರೆ. ಅವರಿಗೆಲ್ಲ ಏನು ಪರಿಹಾರ? ಅಧಿಕಾರಿಗಳ ಕೈಯ್ಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾನು ಮಂಡ್ಯ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದೆ. ಈ ಜಿಲ್ಲೆ ಒಂದರಲ್ಲಿಯೇ 60 ಮೈಕ್ರೋ ಫೈನಾನ್ಸ್ ಗಳಿವೆ. ಅದರಲ್ಲಿ 14-15 ಫೈನಾನ್ಸ್ ಗಳು ಪರವಾನಗಿ ಪಡೆದಿವೆ. ಉಳಿದವು ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುತ್ತಾ ಜನರಿಗೆ ತೊಂದರೆ ಕೊಡುತ್ತಿವೆ ಎಂದು ಸಚಿವರು ಹೇಳಿದರು.
ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಕ್ಕೆ ಒಳ್ಳೆಯದು ಮಾಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟರು. ಆದರೆ, ಅವರು ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ತಿಕ್ಕಾಟ ನಡೆಯುತ್ತಿದೆ. ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಆದರೂ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿ ಜನರ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ನಾವು ಒಂದಾಗಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಇವರು ಒಂದಾಗಿರುವುದು ಕೇವಲ ಅಧಿಕಾರಕ್ಕಾಗಿ ಮಾತ್ರ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ರಾಜ್ಯದಲ್ಲಿ ಎಷ್ಟು ಜನ ಬಾಣಂತಿಯರು, ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ? ಇದಕ್ಕೆ ಕಾರಣ ಕಳಪೆ ಔಷಧಿ ಕಾರಣ ಎಂದು ಸರಕಾರವೇ ಹೇಳುತ್ತಿದೆ. ಅದಕ್ಕೆ ಕ್ರಮ ಏನು ಎಂದು ಮಾತ್ರ ಹೇಳುತ್ತಿಲ್ಲ. ಅಂತಹ ಔಷಧಿ ಯಾಕೆ ಖರೀದಿ ಮಾಡಿದ್ದೀರಿ? ಯಾರು ಪೂರೈಕೆ ಮಾಡಿದ್ದು? ಈವರೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಂದ್ರ ಸಚಿವರು ಕೇಳಿದರು.

ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್. ಆದರೂ ತನ್ನೊಳಗಿನ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ಶಕ್ತಿ ಆ ಪಕ್ಷಕ್ಕೆ ಇದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.


ಮಾಜಿ ಸಚಿವ ಶ್ರೀರಾಮುಲು ಅವರು ಬಿಜೆಪಿ ಬಿಟ್ಟು ಹೋಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಸಣ್ಣಪುಟ್ಟ ಸಮಸ್ಯೆ ಇದ್ದರೆ ಅದು ಪರಿಹಾರ ಆಗುತ್ತದೆ. ವಿನಾಕಾರಣ ಕಾಂಗ್ರೆಸ್ ಅದನ್ನು ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು