ಇತ್ತೀಚಿನ ಸುದ್ದಿ
ಜನಿವಾರ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರಕಾರ ಬದ್ಧ: ಬೆಳ್ತಂಗಡಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್
20/04/2025, 19:27

ಬೆಳ್ತಂಗಡಿ(reporterkarnataka.com): ವಿದ್ಯಾರ್ಥಿಗಳ ಜನಿವಾರ ಕಳಚಿಸಿರುವ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.
ಧರ್ಮ ಆಚರಣೆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಆಯಾ ಧರ್ಮ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಮ್ಮ ಸರ್ಕಾರ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.
ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ನಾವು ಜಾತಿ ಧರ್ಮ ಬೇಡ ಎಂದು ಎಷ್ಟೇ ಹೇಳಿದರೂ, ನಮ್ಮ ಹುಟ್ಟು ಹಾಗೂ ಸಾವು ನಮ್ಮ ಜಾತಿ ಹಾಗೂ ಧರ್ಮಗಳನ್ನು ನೆನಪಿಸುತ್ತದೆ ಎಂದರು.
ಅನೇಕರು ರಾಜಕೀಯ ಟೀಕೆ ಮಾಡುತ್ತಿದ್ದಾರೆ. ಮಾಡಕೊಳ್ಳಲಿ. ಟೀಕೆ ಮಾಡಿದರೆ ನಾವು ತಿದ್ದುಕೊಳ್ಳಲು ಅವಕಾಶ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮಲ್ಲಿ ದೋಷ ಇದ್ದರೆ ಮಾತ್ರ ತಿದ್ದುಕೊಳ್ಳಲು ಸಾಧ್ಯ” ಎಂದು ಹೇಳಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದೇ ರೀತಿ ನಾವು ಇಂದು ಜ್ಞಾನ, ಗುರು, ದೇವರನ್ನು ಸ್ಮರಿಸಲು ಇಲ್ಲಿ ಸೇರಿದ್ದೇವೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಶೃಂಗೇರಿಯ ಶಾರದಾ ಪೀಠದ ಶ್ರೀಗಳು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿದ್ದಾರೆ ಎಂದರು.
1983ರಲ್ಲಿ ಈ ಭಾಗದ ಜನರ ಪ್ರೋತ್ಸಾಹದೊಂದಿಗೆ ಬೆಳ್ತಂಗಡಿ ತಾಲೂಕಿನ ಒಕ್ಕಲಿಗರ ಸೇವಾ ಸಂಘದ ಟ್ರಸ್ಟ್ ನಿಂದ ಶಾಲೆ ಆರಂಭಿಸಲಾಗಿದೆ. ಶಿಕ್ಷಣ ಸಂಸ್ಥೆ ಕಟ್ಟಿರುವಈ ಸಮುದಾಯದ ಪ್ರತಿನಿಧಿಯಾಗಿ, ಉಪಮುಖ್ಯಮಂತ್ರಿಯಾಗಿ ಸರ್ಕಾರದ ಪರವಾಗಿ ಈ ಸಂಸ್ಥೆಯವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಾನು ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇನೆ. ಅದನ್ನು ನೋಡಿಕೊಳ್ಳಲು ಸಮಯವಿಲ್ಲದ ಕಾರಣ ನನ್ನ ಮಗಳಿಗೆ ಜವಾಬ್ದಾರಿ ವಹಿಸಿದ್ದೇನೆ. ಸಮುದಾಯದ ಸೇವೆಗೆ ಈ ಸಂಸ್ಥೆ ನಡೆಸುತ್ತಿರುವ ನಿಮ್ಮ ಜತೆ ನಾನು ಇದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಈ ಸಂಸ್ಥೆಯ ಬೇಡಿಕೆಗೆ ಶಕ್ತಿ ತುಂಬುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂಸ್ಥೆಯು ಕಡಿಮೆ ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಎಲ್ಲರಿಗೂ ತಮಗೆ ಸಿಗುವ ಶಿಕ್ಷಣದ ಬೆಲೆ ಅರಿವಾಗಬೇಕು. ವಿದ್ಯಾ ದದಾತಿ ವಿನಯಂ ವಿನಯಾ ದದಾತಿ ಪಾತ್ರತಾಂ। ಪಾತ್ರತ್ವಂ ಧನಮಾಪ್ರೋತಿ ಧನಧರ್ಮಂ ತತಃ ಸುಖಮ್. ಅಂದರೆ ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ವಿದ್ಯೆ ಇದ್ದರೆ ಇದೆಲ್ಲವೂ ಸಿಗುತ್ತದೆ ಎಂದು ಅವರು ನುಡಿದರು.
ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. ಇದನ್ನು ನಾವೆಲ್ಲರೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಬೇರೇನೂ ಇಲ್ಲ. ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ಹೀಗಾಗಿ ನಮ್ಮ ಸಮುದಾಯದ ಮಕ್ಕಳಿಗೆ ವಿದ್ಯೆ ಎಂಬ ನಿಧಿಯನ್ನು ಕೊಟ್ಟು ಅವರನ್ನು ಬಲಿಷ್ಟರನ್ನಾಗಿ ಮಾಡಲು ಈ ಸಂಘ ಮುಂದಾಗಿದೆ” ಎಂದರು.
*ಮಠಗಳು, ಶಿಕ್ಷಣ ಸಂಸ್ಥೆಗಳಿಗೆ ಕೈಲಾದ ಸಹಾಯ ಮಾಡಿ:*
ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಸರಳತೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಸರಳತೆಗೆ ಹೆಸರಾಗಿರುವ ಪೀಠ ಶೃಂಗೇರಿ ಮಠದ ಪೀಠ. ನಿರ್ಮಲಾನಂದ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಬಂದು ನಿಮಗೆ ಆಶೀರ್ವದಿಸಿದ್ದಾರೆ. ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ನಾವು ನಮ್ಮ ಮನೆ ಕಾಪಾಡಿಕೊಳ್ಳುವಂತೆ ಮಠಗಳನ್ನು ಕಪಾಡಿಕೊಳ್ಳಬೇಕು. ಆಗ ಮಾತ್ರ ಧರ್ಮ ಉಳಿಸಲು ಸಾಧ್ಯ. ದೇವರು ನಮಗೆ ಎರಡು ಆಯ್ಕೆ ನೀಡುತ್ತಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಹೀಗಾಗಿ ಇಂತಹ ಸಂಸ್ಥೆಗಳಿಗೆ ನೀವು ನಿಮ್ಮ ಕೈಲಾದ ದಾನ ಧರ್ಮದ ಮೂಲಕ ಸಹಾಯ ಮಾಡಿ.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ, ನದಿ, ಹಸು ಎಲ್ಲವೂ ಪರರ ಉಪಕಾರಕ್ಕಾಗಿ ಇವೆ. ಅದೇ ರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಸೀಮಿತವಾಗಬೇಕು ಎಂಬುದು ಈ ಶ್ಲೋಕದ ಅರ್ಥ. ಅದೇ ರೀತಿ ನೀವು ನಿಮ್ಮ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡಿ ಎಂದು ತಿಳಿಸಿದರು.