ಇತ್ತೀಚಿನ ಸುದ್ದಿ
ಗೋಕರ್ಣ: 10ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ
03/07/2025, 22:21

ಗೋಕರ್ಣ(reporterkarnataka.com):ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತ ಆಷಾಢ ಶುದ್ಧ ಪೂರ್ಣಿಮೆಯ
ಜುಲೈ 10ರಿಂದ ಭಾದ್ರಪದ ಶುದ್ಧ ಪೂರ್ಣಿಮೆಯವರಗೆ ಅಂದರೆ 7ನೇ ಸೆಪ್ಟೆಂಬರ್ 2025ರವರೆಗೆ ಗೋಕರ್ಣ ಅಶೋಕೆಯ ಪುಣ್ಯ ಪರಿಸರದಲ್ಲಿ ಸಂಪನ್ನಗೊಳ್ಳಲಿದೆ.
ಅಶೋಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ್ಯ ವೈಶಿಷ್ಟ್ಯಗಳ ಬಗ್ಗೆ ವಿವರ ನೀಡಿದ ರಾಘವೇಶ್ವರ ಶ್ರೀಗಳು, “ಭಾಷೆ ಸಂವಹನದ ಸಾಧನ ಮಾತ್ರವಲ್ಲ; ಅದು ಸಂಸ್ಕøತಿ ವಾಹಕವೂ ಹೌದು; ಭಾಷೆಯೊಡನೆ ಪರಂಪರೆ ಸಾಗಿಬಂದಿರುತ್ತದೆ. ಹಾಗಾಗಿ ಸ್ವಭಾಷೆಯನ್ನು ಸಂರಕ್ಷಿಸಿಕೊಳ್ಳಬೇಕು. ಅದರಿಂದ ಸ್ವ ಸಂಸ್ಕೃತಿಯ ಸಂರಕ್ಷಣೆಯಾಗುತ್ತದೆ. ಭಾಷೆಯನ್ನು ರಕ್ಷಿಸುವುದೆಂದರೆ ಅದರಲ್ಲಿ ಮಾತನಾಡುವುದು; ಶುದ್ಧವಾಗಿ ಮಾತನಾಡುವುದು. ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ. ಈ ಚಾತುರ್ಮಾಸ್ಯ ಸ್ವಭಾಷೆಯನ್ನು ಪರಿಶುದ್ಧವಾಗಿ ಮಾತನಾಡಲು ಪ್ರೇರೇಪಿಸುತ್ತದೆ” ಎಂದು ಬಣ್ಣಿಸಿದರು.
ನಾವು ನಮ್ಮ ಭಾಷೆಯನ್ನು ಮಾತನಾಡುವುದು ದೇಶ, ಸಂಸ್ಕೃತಿ, ಭಾಷೆ, ಪರಂಪರೆಗೆ ನಾವು ಸಲ್ಲಿಸುವ ಅತಿದೊಡ್ಡ ಸೇವೆ. ಇದು ಜೀವನಕ್ಕೆ ಸ್ವಾರಸ್ಯವನ್ನೂ ತರುತ್ತದೆ. ಶುದ್ಧವಾದ ಮಾತೃಭಾಷೆಯನ್ನು ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ. ಪರಕೀಯತೆ ನಮ್ಮ ನಾಲಿಗೆಯಲ್ಲೇ ಇದೆ. ನಮ್ಮ ನಾಲಿಗೆ ಕೆಡಿಸಿಕೊಳ್ಳದಿರೋಣ. ಸಂಸ್ಕಾರದಿಂದ ಶಬ್ದ. ಶಬ್ದದಿಂದ ವಾಕ್ಯ; ಅದು ಭಾಷೆಯ ಮೂಲ. ಆದ್ದರಿಂದ ಪ್ರತಿ ಪದವೂ ತನ್ನೊಂದಿಗೆ ಆ ಭಾಷೆಯ ಸಂಸ್ಕಾರವನ್ನು ತರುತ್ತದೆ ಎಂದು ವಿವರಿಸಿದರು.
ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆಯನ್ನು ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.
“ಮನೆಮಾತು ಮರೆತು ಹೋಗಿದೆ. ಉಪಭಾಷೆಗಳು ಬಹುತೇಕ ನಶಿಸಿವೆ. ಕನ್ನಡ ಮಾತನಾಡುವ ಸಂದರ್ಭದಲ್ಲೂ ಕನ್ನಡವನ್ನು ಕಡೆಗಣಿಸುತ್ತೇವೆ. ನಮ್ಮ ಭಾಷೆಯಲ್ಲಿ ಬೇರೆ ಭಾಷೆ ತೂರಿಕೊಂಡಿದೆ. ಈ ಬಾರಿಯ ಚಾತುರ್ಮಾಸ್ಯ ಭಾಷೆ ಶುದ್ಧಗೊಳಿಸುವ ಪ್ರಯತ್ನಕ್ಕೆ ಶ್ರೀಕಾರ ಹಾಕಲಿದೆ ಎಂದು ಹೇಳಿದರು.
ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯೋಣ. ಭಾಷೆಯಲ್ಲಿ ಒಂದು ಪದ ಮರೆಯಾದರೆ ಅದಕ್ಕೆ ಸಂಬಂಧಿಸಿದ ಸಂಸ್ಕೃತಿ- ಸಂಸ್ಕಾರ ಎಲ್ಲವೂ ನಾಶವಾಗುತ್ತದೆ. ಒಂದು ಪರಕೀಯ ಪದ ಆಯಾ ಭಾಷೆಯ ಸಂಸ್ಕಾರವನ್ನು ತರುತ್ತದೆ. ನಮಗೆ ಗೊತ್ತಾಗದಂತೆ ನಾವೇ ಪರಕೀಯರಾಗುತ್ತಿದ್ದೇವೆ. ಉದಾಹರಣೆಗೆ ಇಂಗ್ಲಿಷ್ ನಾವು ಆವಾಹಿಸಿಕೊಂಡಿರುವ ಆಕ್ರಮಣ. ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಗುಲಾಮಗಿರಿ, ದಾಸ್ಯದ ಸಂಕೇತ ಏಕೆ ಎಂದು ಈಗ ಪ್ರಶ್ನಿಸದಿದ್ದರೆ ಮುಂದಿನ ದಿನ ಈ ಪ್ರಶ್ನೆ ಎತ್ತುವವರೂ ಇರಲಾರರು. ರಾಮಚಂದ್ರಾಪುರ ಮಠ ಶುದ್ಧ ದೇಸಿ ತಳಿಯ ಗೋವು ಉಳಿಸಲು ಬಹುದೊಡ್ಡ ಆಂದೋಲನ ನಡೆಸಿದೆ. ಭಾರತೀಯ ತಳಿಗಳ ಪರಿಶುದ್ಧತೆ ಉಳಿಯಬೇಕು ಎಂಬ ಕಾರಣಕ್ಕೆ ತಳಿಸಂಕರ ವಿರೋಧಿಸುತ್ತಾ ಬಂದಿದೆ. ಗೋವಿನಲ್ಲಿ ತಳಿಸಂಕರ ಹೇಗೆ ಪ್ರಮಾದವೋ ಭಾಷೆಯಲ್ಲಿ ಕೂಡಾ ಸಂಕರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.
ನಮ್ಮ ಮಾತೃಭಾಷೆಯ ಹಲವು ಪದಗಳು ಮರೆತು ಹೋಗಿವೆ. ಕನ್ನಡ ಮಾತನಾಡುವ ಪ್ರಯತ್ನ ಇಂದಿನಿಂದಲೇ ಆರಂಭವಾಗಲಿ; ಕನ್ನಡ ಮಾತನಾಡಬೇಕಾದಲ್ಲಿ ಕನ್ನಡವನ್ನೇ ಮಾತನಾಡೋಣ. ಪರಿಸ್ಥಿತಿಗೆ ಅನುಗುಣವಾಗಿ ಆಂಗ್ಲಭಾಷೆ ಮಾನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಅದನ್ನು ಬೆರೆಸುವುದು ಬೇಡ. ಹಾಗೆ ಮಾಡಿದರೆ ಇಡೀ ಸಮಾಜವೇ ಭಾಷೆ ಇಲ್ಲದ ಸಮಾಜವಾಗಿ ಮಾರ್ಪಾಡಾಗುತ್ತದೆ. ಈ ಸಮಾಜವನ್ನು ಬದಲಾಯಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಲಿ. ಮನೆಗಳಲ್ಲಿ ಕನ್ನಡ ಅಭ್ಯಸಿಸೋಣ. ಮರೆತು ಹೋದ ಹಳೆ ಪದಗಳ ಮರು ಅನ್ವೇಷಣೆ ನಡೆಯಲಿದೆ; ಮತ್ತೆ ಕೆಲ ಪದಗಳನ್ನು ಸೃಷ್ಟಿ ಮಾಡುವ ಪ್ರಮೇಯವೂ ಬರುತ್ತದೆ. ಅದನ್ನೂ ಮಾಡಲು ಈ ಚಾತುರ್ಮಾಸ್ಯ ಪ್ರೇರೇಪಿಸುತ್ತದೆ. ಮೊದಲ ಹಂತದಲ್ಲಿ ಪರಕೀಯ ಶಬ್ದಗಳನ್ನು ಕಡಿಮೆ ಮಾಡೋಣ; ಅಂತಿಮವಾಗಿ ಶುದ್ಧವಾದ ಭಾಷೆಯನ್ನು ಉಳಿಸಿ ಬೆಳೆಸೋಣ. ಚಾತುರ್ಮಾಸ್ಯದಲ್ಲಿ ನಾಲಿಗೆ ಶುದ್ಧೀಕರಣದ ಕಾರ್ಯ ಮಾಡೋಣ. ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಆಶಿಸಿದರು.
ಗುರುವಾರ ಜುಲೈ 10ರಂದು ಶ್ರೀವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ ವ್ರತ ಆರಂಭವಾಗಲಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ 13ರಂದು ಶ್ರೀವರ್ಧಂತಿ ಕಾರ್ಯಕ್ರಮ ನಡೆಯಲಿದೆ. ಜುಲೈ 21 ಮತ್ತು ಆಗಸ್ಟ್ 19ರಂದು ಎರಡು ಸ್ವಭಾಷಾ ಗೋಷ್ಠಿ ನಡೆಯಲಿದೆ. ಆಗಸ್ಟ್ 16ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 27ರಂದು ಶ್ರೀಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 7ರಂದು ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ಚಾತುರ್ಮಾಸ್ಯ ಸೇವಾಬಿಂದುಗಳಾದ ಮಂಜುನಾಥ ಸುವರ್ಣಗದ್ದೆ, ಪ್ರಸನ್ನ ಕುಮಾರ್ ಟಿ.ಜಿ, ಜಿ.ಕೆ.ಹೆಗಡೆ, ಶ್ರೀಕಾಂತ್ ಪಂಡಿತ್, ಉದಯಶಂಕರ ಭಟ್, ಮಧು ಜಿ.ಕೆ, ಜಿ.ಎಸ್.ಹೆಗಡೆ, ಸುಬ್ರಾಯ ಭಟ್, ಆರ್.ಜಿ.ಹೆಗಡೆ, ಕೆ.ಎಲ್.ಹೆಗಡೆ, ರಾಜು ಹೆಬ್ಬಾರ್, ಉದಯ ಭಟ್, ರಾಜಾರಾಂ ಭಟ್, ಜಿ.ವಿ.ಹೆಗಡೆ, ಮಹೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.