ಇತ್ತೀಚಿನ ಸುದ್ದಿ
ಗಣರಾಜ್ಯೋತ್ಸವ ಪರೇಡ್: ರಫೇಲ್ ಸೇರಿದಂತೆ 75 ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ
18/01/2022, 10:35
ಹೊಸದಿಲ್ಲಿ(reporterkarnataka.com): ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭವ್ಯವಾದ ಫ್ಲೈಪಾಸ್ಟ್ ನಡೆಯಲಿದ್ದು, ಇದರಲ್ಲಿ ಭಾರತೀಯ ರಕ್ಷಣಾ ಪಡೆಗಳ 75 ವಿಮಾನಗಳು ದೆಹಲಿಯ ರಾಜ್ ಪಥ್ ಮೇಲೆ ಹಾರಾಟ ನಡೆಸಲಿವೆ.
ಈ ವರ್ಷದ ಗಣರಾಜ್ಯೋತ್ಸವದ ಆಚರಣೆ ಮತ್ತಷ್ಟು ವಿಶೇಷವಾಗಿ ನಡೆಯಲಿದ್ದು, ಪರೇಡ್ ನಲ್ಲಿ ವಾಯು ಸೇನೆ, ಭೂಸೇನೆ ಹಾಗೂ ನೌಕಾಪಡೆಯ ವಿಮಾನಗಳು ಸೇರಿದಂತೆ 75 ವಿಮಾಗಳು ಪಂಥಸಂಚಲನದ ಸಂದರ್ಭದಲ್ಲಿ ಫ್ಲೈಪಾಸ್ಟ್ ನಡೆಸಲಿವೆ.
ಈ ಬಗ್ಗೆ ಮಾಹಿತಿ ನೀಡಿದ ಐಎಎಫ್ ಪ್ರೋ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ, ಗಣರಾಜ್ಯೋತ್ಸವದ ಪರೇಡ್ ನಲ್ಲಿ ಫ್ಲೈಪಾಸ್ಟ್ ಅತ್ಯಂತ ಕುತೂಹಲದಾಯಕ ಕ್ಷಣವಾಗಿದೆ. ಈ ವೇಳೆ ಭಾರತೀಯ ನೌಕಾ ಪಡೆಯ ಮಿಗ್ 29ಕೆ ಮತ್ತು ಪಿ-81, ಜಾಗ್ವಾರ್ ಫೈಟರ್ ಜಟ್ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
5 ರಫೇಲ್ ಜೆಟ್ ಗಳು ‘ವಿನಾಶ್’ ರಚನೆಯಲ್ಲಿರಲಿದ್ದು, ಮಿಗ್ 29ಕೆ ಮತ್ತು ಪಿ-81 ಕಣ್ಗಾವಲು ವಿಮಾನಗಳು ‘ವರುಣ’ ರಚನೆಯಲ್ಲಿ ಹಾರಾಟ ನಡೆಸಲಿವೆ. 17 ಜಾಗ್ವಾರ್ ಯುದ್ಧ ವಿಮಾನಗಳು ’75’ ರ ಆಕಾರದಲ್ಲಿ ಹಾರಾಟ ನಡೆಸಲಿವೆ ಎಂದು ತಿಳಿಸಿದರು.
ಈ ಬಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಿಂದ ಗಣರಾಜ್ಯೋತ್ಸವದ ಆಚರಣೆ ಪ್ರಾರಂಭವಾಗಲಿದೆ.