ಇತ್ತೀಚಿನ ಸುದ್ದಿ
ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ ಸಮಿತಿಯಿಂದ ಪರಿಶೀಲನೆ; ಸಾಂಕೇತಿಕ ಪ್ರತಿಭಟನೆ
03/06/2023, 20:00
ಸುರತ್ಕಲ್(reporterkarnataka.com): ಬಾಬಾ ರಾಮದೇವ್ ಮಾಲಕತ್ವದ ಪತಂಜಲಿ (ರುಚಿಗೋಲ್ಡ್) ಕೈಗಾರಿಕಾ ಘಟಕ ಜೀವನದಿ ಪಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ನೇರವಾಗಿ ಹರಿಸುವ ಅಕ್ರಮ ಕೊಳವೆಗಳು ಪತ್ತೆಯಾಗಿದ್ದು, ಸ್ಥಳಕ್ಕೆ ನಾಗರಿಕ
ಹೋರಾಟ ಸಮಿತಿಯು ಸಮಾನ ಮನಸ್ಕರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದೇ ಸಂದರ್ಭದಲ್ಲಿ ಕಂಪನಿಯ ವಿರುದ್ಧ ಸಾಂಕೇತಿಕ ಪ್ರತಿಭಟನೆ ಕೂಡ ನಡೆಸಲಾಯಿತು.
ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಮಾರಕ ಕೈಗಾರಿಕಾ ಮಾಲಿನ್ಯ ಬೃಹತ್ ಕೊಳವೆಗಳ ಮೂಲಕ ನದಿಗೆ ಹರಿದಿರುವುದು ಕಂಡು ಬಂತು. ಸಾರ್ವಜನಿಕ ಆಕ್ರೋಶ ವ್ಯಾಪಕವಾಗುತ್ತಿರುವುದರಿಂದ ಕಂಗೆಟ್ಟು ಕಣ್ಣಿಗೆ ಕಾಣುವ ತ್ಯಾಜ್ಯವನ್ನು ಕೊಳವೆಯ ಸುತ್ತಲಿನಿಂದ ತೆರವುಗೊಳಿಸಲು ಕಂಪೆನಿ ವ್ಯರ್ಥ ಪ್ರಯತ್ನ ಮಾಡುತ್ತಿರುವುದು ಗೋಚರಿಸುತ್ತಿತ್ತು. ಹಾಗೆ ಆಡಳಿತದ ಕಡೆಯಿಂದ ಕಂಪೆನಿಯ ಒಳಗಡೆ ಬಂದು ಮಾತಾಡುವಂತೆ ಆಹ್ವಾನ ಬಂದದ್ದನ್ನು ತಿರಸ್ಕರಿಸಲಾಯಿತು. ಸ್ಥಳದಿಂದಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಫೋನ್ ಮೂಲಕ ಕಂಪೆನಿಯ ಮೇಲೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಕೇಳಿ, ಕಂಪನಿಗೆ ತಕ್ಷಣದಿಂದಲೇ ಬೀಗ ಜಡಿಯಲು ಆಗ್ರಹಿಸಲಾಯಿತು ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಘಟಕವು ಪತಂಜಲಿ ಕೈಗಾರಿಕಾ ಘಟಕ ಮುಚ್ಚುವಂತೆ ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಿ ದಾಖಲೆ ಸಹಿತ ವಿವರವಾದ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಈಗ ವಿಷಕಾರಿ ಕೈಗಾರಿಕಾ ತ್ಯಾಜ್ಯದ ನೀರು ಹಾಗೂ ಅದರ ಜಿಡ್ಡನ್ನು ಕಂಪೆನಿಯು ಸಂಗ್ರಹಿಸಿ ಒಳಭಾಗಕ್ಕೆ ಸಾಗಿಸುವ ಔಚಿತ್ಯವನ್ನು ಪ್ರಶ್ನಿಸಲಾಯಿತು. ತ್ಯಾಜ್ಯವನ್ನು ಒಳಗಡೆ ಇರುವ ಶುದ್ದೀಕರಣ ಘಟಕದಲ್ಲಿ ಶುದ್ದೀಕರಿಸಿ ನಿಯಮ ಪ್ರಕಾರ ವಿಸರ್ಜಿಸಲು ಸೂಚಿಸಲಾಗಿದೆ ಎಂಬ ಅನುಮಾನಾಸ್ಪದ ಉತ್ತರ ಬಂತು. ಈ ಪ್ರಯತ್ನದ ಕುರಿತು ಅನುಮಾನ ವ್ಯಕ್ತ ಪಡಿಸಿದಾಗ ತಜ್ಞರು ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳನ್ನು ಒಳಗಡೆ ಕರೆದೊಯ್ದು ಪರಿಶೀಲನೆ ನಡೆಸುವುದಾಗಿ ಹೇಳಲಾಯಿತು ಎಂದು ಮುನೀರ್ ಹೇಳಿದ್ದಾರೆ.
ಪ್ರತಿಭಟನೆ: ಕಂಪೆನಿಯ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಗಂಭೀರವಾದ ಕ್ರಿಮಿನಲ್ ಅಪರಾಧ ಎಸಗಿರುವ, ಪರಿಸರ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಉಲ್ಲಂಘಿಸಿರುವ ಪತಂಜಲಿ ಘಟಕವನ್ನು ತಕ್ಷಣವೆ ಮುಚ್ಚಿ ಬೀಗ ಜಡಿಯಲು ಆಗ್ರಹಿಸಲಾಯಿತು. ನಿರ್ಣಾಯಕ ಕ್ರಮ ಜರುಗದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಯಿತು.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಾರೂಕ್ ಜೋಕಟ್ಟೆ, ಮಾಜಿ ಅಧ್ಯಕ್ಷ ಕೆವಿನ್, ಹೋರಾಟ ಸಮಿತಿ ಪ್ರಮುಖರಾದ ಅಬೂಬಕ್ಕರ್ ಬಾವಾ, ಶ್ರೀನಾಥ್ ಕುಲಾಲ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ನಿತಿನ್ ಬಂಗೇರ, ಮನೋಜ್ ಉರ್ವಸ್ಟೋರ್, ಇಕ್ಬಾಲ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಚಂದ್ರಶೇಖರ್ ಜೋಕಟ್ಟೆ, ಹನೀಫ್ ಜೋಕಟ್ಟೆ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಶು ಇದ್ದಿನಬ್ಬ, ಹನೀಫ್ ಇಡ್ಯಾ, ವಿಜಯ್ ಅರಾನ್ಹ ಮತ್ತಿತರರು ಹಾಜರಿದ್ದರು.