ಇತ್ತೀಚಿನ ಸುದ್ದಿ
ಪಟಾಕಿ ಸಿಡಿಸಲು ಸಮಯ ನಿಗದಿ: ಪರಿಸರಸ್ನೇಹಿ ದೀಪಾವಳಿ ಆಚರಿಸಲು ಸಚಿವ ಈಶ್ವರ ಖಂಡ್ರೆ ಸಲಹೆ
21/10/2024, 14:37
ಬೆಂಗಳೂರು(reporterkarnataka.com): ದೀಪಾವಳಿ ಹಿನ್ನೆಲೆಯಲ್ಲಿ ಸರಕಾರ ಪಟಾಕಿ ಸಿಡಿಸಲು ಸಮಯ ನಿಗದಿಪಡಿಸಿದ್ದು, ರಾತ್ರಿ 8 ರಿಂದ 10 ಗಂಟೆಯ ನಡುವೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ.
ಸುಪ್ರೀಂಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮಿಸುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ಇದರ ಅನ್ವಯ ಹಸಿರು ಪಟಾಕಿ ಸಿಡಿಸಲು ಮಾತ್ರ ಸರಕಾರ ಅವಕಾಶ ಕಲ್ಪಿಸಿದೆ. ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಯಲು ಮತ್ತು ಹಿರಿಯ ನಾಗರಿಕರ, ಪುಟ್ಟ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಟಾಕಿ ತ್ಯಜಿಸಲು ಇಲ್ಲವೇ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಮಾಡುತ್ತವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ ಹಾಗೂ ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಭಾರೀ ಶಬ್ದ ಮಾಡುವ ಪಟಾಕಿಗಳಿಂದ ಪಶು, ಪಕ್ಷಿ ಪ್ರಾಣಿ ಸಂಕುಲಗಳಿಗೆ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ದೀಪದಿಂದ ದೀಪ ಹಚ್ಚಿ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಎಂದು ಸಚಿವ ಈಶ್ವರ ಖಂಡ್ರೆ ಕರೆಯಿತ್ತಿದ್ದಾರೆ.