ಇತ್ತೀಚಿನ ಸುದ್ದಿ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ: ಬಹುತೇಕ ಶಾಂತಿಯುತ ಮತದಾನ
09/04/2026, 18:32
ಬೆಂಗಳೂರು(reporterkarnataka.com): ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೆಲವು ಸಣ್ಣಪುಟ್ಟ ಗೊಂದಲ ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ.
ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಎರಡೂ ಕ್ಷೇತ್ರಗಳಲ್ಲೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಜೆಪಿ, ಕಾಂಗ್ರೆಸ್, ಪಕ್ಷೇತರ ಸೇರಿದಂತೆ ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯವು ಇವಿಎಂನಲ್ಲಿ ಭದ್ರವಾಗಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ವಿಜಯಲಕ್ಷಿ ಯಾರಿಗೆ ಒಲಿಯುವಳು ಎಂಬುದು ಅಂದೇ ನಿರ್ಧಾರವಾಗಲಿದೆ.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ನಿರೀಕ್ಷೆಯಂತೆ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಎರಡೂ ಕಡೆ ಮತದಾರರು ಬೆಳಗ್ಗಿನಿಂದಲೇ ಮತಗಟ್ಟೆಗಳಿಗೆ ಆಗಮಿಸಿ ತಮ ತಮ ಹಕ್ಕನ್ನು ಚಲಾಯಿಸಿದರು. 85 ವರ್ಷ ಮೇಲ್ಪಟ್ಟ ಹಿರಿಯರಿಗೆ ಮನೆಯಿಂದಲೇ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಸುಡುವ ಬಿಸಲನ್ನು ಲೆಕ್ಕಿಸದೆ ಮತದಾರರು ಮತಗಟ್ಟೆಗೆ ಬಂದು ಸರತಿಯಲ್ಲಿ ನಿಂತು ಮತ ಚಲಾಯಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ.ಎಸ್.ಎಸ್ ಸೇರಿದಂತೆ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಸಾಮಾನ್ಯರಂತೆ ಸರತಿಯಲ್ಲಿ ನಿಂತು ಮತ ಹಾಕಿದರು.
ಇತ್ತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಹಾಗೂ ಅವರ ಪತ್ನಿ ಕೂಡ ಮತಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು. ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಅವರು ಶಿರಮಗೊಂಡನಹಳ್ಳಿ ಮತಗಟ್ಟೆ ಸಂಖ್ಯೆ 242ಕ್ಕೆ ಆಗಮಿಸಿ ಮತದಾನ ಮಾಡಿದರು.
ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್ ಮತಗಟ್ಟೆಯ ಪ್ರವೇಶದ್ವಾರಕ್ಕೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಹಳೆಯಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ.66ರಲ್ಲಿ ಪೂಜೆ ಸಲ್ಲಿಸಿದರು.
ಹಾಲುಮತ ಸಮುದಾಯದವರು ಪ್ರಪ್ರಥಮವಾಗಿ ಮತದಾನ ಮಾಡಿದರೆ ಕಣದಲ್ಲಿರುವ ಅಭ್ಯರ್ಥಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಕುಟುಂಬ ಸಮೇತ ಪೂಜೆ ಸಲ್ಲಿಸಿದ್ದಾರೆ. ಇನ್ನು ಮತದಾನ ಆರಂಭವಾಗುತ್ತಿದ್ದಂತೆ ಹಳೆಪೇಟೆಯಲ್ಲಿರುವ ಮತಗಟ್ಟೆಯಲ್ಲಿ ತಾಂತ್ರಿಕದೋಷ ಉಂಟಾಗಿ ಇವಿಎಂ ಕೆಲಹೊತ್ತು ಕೈಕೊಟ್ಟ ಪರಿಣಾಮ ಮತದಾನ ಸ್ಥಗಿತಗೊಂಡಿತ್ತು.
ತಕ್ಷಣವೇ ಸಿಬ್ಬಂದಿಗಳು ಇವಿಎಂನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಇಲ್ಲಿನ ಮತಗಟ್ಟೆ ಸಂಖ್ಯೆ 195ರಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪಕ್ಷವೊಂದರ ಮುಖಂಡರು ಮತ ಕೇಂದ್ರದ ಹೊರಗಡೆ ಮತ ಚಲಾಯಿಸಿ ಆಚೆ ಬರುತ್ತಿದ್ದವರಿಗೆ ಪಲಾವ್ ವಿತರಣೆಗೆ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಎದುರಾಳಿ ಅಭ್ಯರ್ಥಿಗಳ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪಲಾವ್ ಹಂಚದಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಅಬ್ದುಲ್ ಸತಾರ್ ಸೇರಿದಂತೆ ಪ್ರಮುಖರು ಮತ ಚಲಾಯಿಸಿದರು.
ಬಾಗಲಕೋಟೆ
ಮಾಜಿ ಸಚಿವ ಎಚ್.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಉತ್ತಮ ಮತದಾನ ಆಗಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕುಟುಂಬ ಸಮೇತರಾಗಿ ಮತದಾನ ಮಾಡಿದರೆ, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಕೂಡ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಇಬ್ಬರೂ ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬೂತ್ ನಂ.166 ರಲ್ಲಿ ಮತದಾನ ಮಾಡಿದರು. ಕುಟುಂಬ ಸದಸ್ಯರೊಂದಿಗೆ ಬಂದು 166 ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಸಮಾಧಿ ಸ್ಥಳಕ್ಕೆ ಭೇಟಿ ನೀಡಿ
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪೂಜೆ ಸಲ್ಲಿಸಿದರು.ದಿ. ಹೆಚ್ ವೈ ಮೇಟಿ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ತಿಮಾಪುರ ಗ್ರಾಮದ ಜಮೀನಿನಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಇನ್ನೂ ಈ ವೇಳೆ ಅಭಿಮಾನಿಯೊಬ್ಬರು ಉಮೇಶ್ ಮೇಟಿ ಬಳಿ ಕಾಂಗ್ರೆಸ್ ಪಕ್ಷದ ಶಾಲು ಕಟ್ಟಿದ ಟಗರನ್ನು ಕರೆತಂದು ಹಾರೈಸಿದರು.
ದಂಪತಿ ಸಮೇತ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ ನಗರದ ಸಕ್ರಿ ಮಹಾವಿದ್ಯಾಲಯದಲ್ಲಿ ಮತ ಚಲಾವಣೆ ಮಾಡಿದರರೆ, ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮತಗಟ್ಟೆ ಸಂಖ್ಯೆ 16 ರಲ್ಲಿ ತಮ ಹಕ್ಕು ಚಲಾಯಿಸಿದರು.
ಮತದಾನದ ವೇಳೆ, ಮತದಾರರ ಪಟ್ಟಿಯಲ್ಲಿ ಮಗನ ಹೆಸರಿಗೆ ಮಾರ್ಕ್ ಮಾಡುವ ಬದಲು,ತಂದೆ ಹೆಸರಿಗೆ ಸಿಬ್ಬಂದಿ ಮಾರ್ಕ್ ಮಾಡಿದಾಗ ಸ್ಥಳದಲ್ಲಿ ಗೊಂದಲ ವಾಗ್ವಾದ ಉಂಟಾಗಿ, ಮತ್ತೆ ಸರಿಪಡಿಸಿದರು.







ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ ಮತದಾರರು ಮತಗಟ್ಟೆಗೆ ಬಂದು ಬೆಳಗ್ಗಿನಿಂದಲೇ ತಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭತ್ವದ ಹಬ್ಬವನ್ನು ಸಂಭ್ರಮಿಸಿದರು. ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳು ತೆರೆಯುತ್ತಿದ್ದಂತೆ ಕ್ಷೇತ್ರದಾದ್ಯಂತ ಮತದಾರರು ತಮ ತಮ ಹಕ್ಕುಗಳನ್ನು ಚಲಾಯಿಸಿ ಬೇರೆಯವರಿಗೂ ಮತದಾನ ಮಾಡುವಂತೆ ಪ್ರೇರೇಪಿಸಿದರು. ಪ್ರಮುಖ ಮತಗಟ್ಟೆಗಳಾದ ಕೆಎಂಎಸ್ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದಲೇ ಮತದಾನ ಮಾಡಿದರು.
ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗುತ್ತಿದ್ದಂತೆ 12 ಗಂಟೆವರೆಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಬಿಸಿಲ ಝಳ ಹೆಚ್ಚಾದ ನಂತರ ಮತದಾನದಲ್ಲಿ ಕೊಂಚ ಇಳಿಮುಖ ಕಂಡುಬಂದಿತು. ಮಧ್ಯಾಹ್ನದ ಬಳಿಕ ಬಿಸಿಲಿನ ತಾಪ ಕಡಿಮೆಯಾದ್ದರಿಂದ ಮತ್ತೆ ಮತದಾನ ಚುರುಕುಗೊಂಡಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಯಿತು. ಮೇ 4ರಂದು ನಡೆಯಲಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಮತ್ತು ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರೆ, ಅತ್ತ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯುತ್ತಿದೆ.













