6:45 PM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ದ.ಕ., ಉಡುಪಿ ಜಿಲ್ಲೆ: ಕೊರೊನಾ ಕಾಲದಲ್ಲಿ ಸ್ಥಗಿತಗೊಂಡಿರುವ ಸರಕಾರಿ ಬಸ್ ಮರು ಓಡಾಟಕ್ಕೆ ಡಿವೈಎಫ್ಐ ಒತ್ತಾಯ

01/06/2023, 15:10

ಮಂಗಳೂರು(reporterkarnataka.com): ಕರ್ನಾಟಕ ರಾಜ್ಯಾದ್ಯಂತ ಜೂನ್ 1 ರಿಂದ ಸರಕಾರಿ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಸರಕಾರಿ ಕೆಎಸ್ಆರ್ಟಿಸಿ ಬಸ್ ಕೊರೋನಾ ಕಾಲದ ನಂತರ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದು ಉಭಯ ಜಿಲ್ಲೆಗಳ ಪ್ರಯಾಣಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಸರಕಾರದಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಕೆಎಸ್ಆರ್ಟಿಸಿ ಸರಕಾರಿ ಬಸ್ಸು ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕರ್ನಾಟಕ ರಾಜ್ಯ ಸರಕಾರವನ್ನು, ಸಾರಿಗೆ ಸಚಿವರನ್ನು ಒತ್ತಾಯಿಸಿದೆ.
ನರ್ಮ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸುಮಾರು 55 ರಷ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ರಷ್ಟು ಸರಕಾರಿ ಕೆಎಸ್ಆರ್ಟಿಸಿ ನಗರ ಸಾರಿಗೆ ಬಸ್ಸುಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಉಡುಪಿಯಲ್ಲಿ 55 ಬಸ್ಸುಗಳು ಮಂಜೂರಾಗಿ ಸೇವೆ ಸಲ್ಲಿಸುವ ಹೊತ್ತಿಗೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಶಾದಾಯಕ ಸೇವೆಯನ್ನು ಸಲ್ಲಿಸಿದೆ. ಅದೇ ರೀತಿ ಮಂಗಳೂರಿನಲ್ಲಿ ಮಂಜೂರಾದ 35 ಬಸ್ಸುಗಳಲ್ಲಿ 18 ಬಸ್ಸು ನಗರದ ಸ್ಟೇಟ್ ಬ್ಯಾಂಕ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಬಾಕಿ ಉಳಿದ ಬಸ್ಸು ನಗರದ ಹೊರಭಾಗದಿಂದ ಸೇವೆ ಸಲ್ಲಿಸಲು ಆರ್ಟಿಎ ಪ್ರಾಧಿಕಾರ ಸಭೆ ಒಪ್ಪಿಗೆ‌ ನೀಡಿದ್ದವು. ಆ ಸಂದರ್ಭ ಖಾಸಗೀ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆ ಹೇರಿದೆಯಾದರೂ ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥ ಪಡಿಸಲು ನಿರ್ದೇಶನ ನೀಡಿತ್ತು. ಒಟ್ಟಾರೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ಜನಪರ ಆಡಳಿತ ನಡೆಯಿಂದ ಸರಕಾರಿ ನರ್ಮ್ ನಗರ ಸಾರಿಗೆ‌ ಬಸ್ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಅದರ ಜೊತೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಂತಹ ಗ್ರಾಮೀಣ ಭಾಗಗಳಿಗೂ ಸರಕಾರಿ ಗ್ರಾಮಾಂತರ ಸಾರಿಗೆ ಬಸ್ಸು ನಿರಂತರ ಸೇವೆಯನ್ನು ನೀಡಿದೆ. ಆದರೆ ಇತ್ತೀಚೆಗೆ ಕೊರೋನಾ ಕಾಲದಲ್ಲಿ ಸ್ಥಗಿತಗೊಂಡಿರುವ ಸರಕಾರಿ ಬಸ್ ಸಂಚಾರ ಸೇವೆಯು ಮತ್ತೆ ಹಿಂದಿನ ರೀತಿಯಲ್ಲಿ ನೀಡಲೇ ಇಲ್ಲ. ಉಭಯ ಜಿಲ್ಲೆಯಲ್ಲೂ ಸರಕಾರಿ ನರ್ಮ್ ನಗರ ಸಾರಿಗೆ ಬಸ್ಸು ಮತ್ತು ಗ್ರಾಮೀಣ ಭಾಗದ ಸರಕಾರಿ ಬಸ್ ಸಂಚಾರ ಸೇವೆಯಲ್ಲಿ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ. ಜಿಲ್ಲೆಯಲ್ಲಿ ಖಾಸಗೀ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗ ತೊಡಗಿದೆ. ಇದರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಜೂನ್ 1ರಿಂದ ಸರಕಾರ ಫೋಷಿಸಿದ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು. ಉಭಯ ಜಿಲ್ಲೆಯಲ್ಲಿ ಬೀಡಿ ಉದ್ದಿಮೆ ನೆಲಕ್ಕಚ್ಚಿದ ನಂತರ ಈಗ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಲ್ಲಿ, ಬಟ್ಟೆಯಂಗಡಿಗಳಲ್ಲಿ, ಆಸ್ಪತ್ರೆ, ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಅಂತ ಮಹಿಳೆಯರಿಗೆ ಸರಕಾರದ ಈ ಯೋಜನೆಯು ಅನುಕೂಲಕರವಾಗಲಿದೆ.
ಆದ್ದರಿಂದ ದ.ಕ ಮತ್ತು ಉಡುಪಿ ಜಿಲ್ಲಾದ್ಯಂತ ಸ್ಥಗಿತಗೊಂಡಿರುವ ಕೆಎಸ್ಏರ್ಟಿಸಿ ಸರಕಾರಿ ಬಸ್ಸ್ ತನ್ನ ಸಂಚಾರ ಸೇವೆಯನ್ನು ಈ ಕೂಡಲೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಮತ್ತು ಜನರ ಬೇಡಿಕೆಯ ಅನುಗುಣವಾಗಿ ಮಂಜೂರಾಗದೆ ಬಾಕಿ ಇರುವ ಪ್ರದೇಶಗಳಿಗೂ ಶೀಘ್ರವೇ ಬಸ್ ಸಂಚಾರ ಸೇವೆ ಒದಗಿಸಲು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು