ಇತ್ತೀಚಿನ ಸುದ್ದಿ
ಸಿ.ಟಿ. ರವಿ ಪ್ರಕರಣದಲ್ಲಿ ಸಭಾಪತಿಯವರು ನುಣುಚಿಕೊಳ್ಳುವಂತಿಲ್ಲ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
30/12/2024, 18:15
ಬೆಂಗಳೂರು(reporterkarnataka.com):ಸಿ.ಟಿ. ರವಿ ಪ್ರಕರಣ ಕಲಾಪ ಮುಗಿದ ನಂತರ ನಡೆದದ್ದು ಎಂದು ವಿಧಾನ ಪರಿಷತ್ ಸಭಾಪತಿಯವರು ನುಣುಚಿಕೊಳ್ಳುವಂತಿಲ್ಲ. ಸಭಾಪತಿ ಹುದ್ದೆ ಸಂವಿಧಾನಕ ಹುದ್ದೆ. ಕಲಾಪ ಮುಗಿದ ನಂತರವೂ ಸದನದ ಒಳಗೆ ಏನಾದರೂ ಘಟನೆ ನಡೆದರೆ ಅದರ ವಿರುದ್ದ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು,
ವಿಧಾನ ಪರಿಷತ್ ನಲ್ಲಿ ಸಿ.ಟಿ.ರವಿ ಅವರಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಅಹಿತಕರ ಮಾತುಗಳ ಪ್ರಯೋಗ ಆದ ವೇಳೆ ಸಭಾಪತಿಗಳ ಹೇಳಿಕೆ ನಿರೀಕ್ಷಿತವಾಗಿರಲಿಲ್ಲ. ಕಲಾಪ ಮುಗಿದ ವೇಳೆ ಈ ಘಟನೆ ನಡೆದ ಕಾರಣಕ್ಕೆ ಇದರ ಬಗ್ಗೆ ಏನನ್ನೂ ಹೇಳಲು ಇಷ್ಠ ಪಡುವುದಿಲ್ಲ ಎಂದಿದ್ದಾರೆ. ಮಾಧ್ಯಮಗಳಲ್ಲಿ ನೋಡಿದ ಪ್ರಕಾರ ಸುಳ್ಳು ಪ್ರಕರಣಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಘಟನೆ ಕಲಾಪದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಭಾಪತಿಯವರು ತಪ್ಪಿಸಿಕೊಳ್ಳುವಂತಿಲ್ಲ. ಡಿ.26 ರಂದು ಸಭಾಪತಿಗಳ ಕಾರ್ಯದಯರ್ಶಿಯವರಿಗೆ ಸಿ.ಟಿ.ರವಿ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದೇವೆ. ಸಿ.ಟಿ.ರವಿ ನಿಂದನಾತ್ಮಕ ಪದ ಪ್ರಯೋಗ ಮಾಡಿದಾಗ ಕಲಾಪ ಮುಗಿದಿತ್ತೇ ಹೊರತು ಸದನದಲ್ಲಿ ಎಲ್ಲರೂ ಹಾಜರಿದ್ದರು. ಮಾರ್ಷಲ್ ಗಳು, ಸಿಬ್ಬಂದಿಗಳು, ಎಲ್ಲಾ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮದವರೂ ಈ ಘಟನೆಯನ್ನು ಚಿತ್ರೀಕರಣ ಮಾಡುತ್ತಾ ಇದ್ದರು. ಇದನ್ನು ಹೇಗೆ ಸಭಾಪತಿಗಳ ವ್ಯಾಪ್ತಿಗೆ ಬರಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯ ಎಂದು ಮಾಜಿ ಸಚಿವರು ಪ್ರಶ್ನಿಸಿದರು.
ಈ ಘಟನೆ ನಡೆಯುವಾಗ ಯಾರು ಯಾರು ಇದ್ದರು ಅವರನ್ನೆಲ್ಲಾ ಕರೆಸಿ ಮಾಧ್ಯಮದವರಿಂದ ವಿಡಿಯೋ ಪಡೆದು ಅದನ್ನು ಎಫ್ ಎಸ್ ಎಲ್ ಗೆ ನೀಡಿ ತನಿಖೆಗೆ ಒಳಪಡಿಸಬಹುದಿತ್ತು. ರಾಜಿ ಸಂಧಾನ ಮಾಡುವ ವಿವೇಚನೆ ಸಭಾಪತಿಗಳಿಗೆ ಬಿಟ್ಟಿದ್ದು. ಅವರು ಸಂಬಂಧಪಟ್ಟಿಲ್ಲ ಎಂದು ಹೇಳದರೆ ತನಿಖೆಗೆ ಆದೇಶಿಸಬೇಕು. ಸಭಾಪತಿ ಅವರಿಗೆ ತೀರ್ಮಾನ ಮಾಡಲು ತೊಂದರೆ ಆಗುತ್ತದೆ ಎಂದರೆ ಸರ್ಕಾರದ ನೆರವು ಪಡೆಯಲಿ. ಇದು ವಿಧಾನ ಪರಿಷತ್ತಿನ ವ್ಯಾಪ್ತಿಯಲ್ಲಿ ನಡೆದ ಘಟನೆಯಾದ ಕಾರಣಕ್ಕೆ ತನಿಖೆಗೆ ಆದೇಶಿಸುವ ಅಧಿಕಾರ ಅವರಿಗೆ ಇದೇ ಎನ್ನುವುದನ್ನು ನಾನು ನೆನಪಿಸಲು ಬಯಸುತ್ತೇನೆ ಎಂದು ಕಿಮ್ಮನೆ ನುಡಿದರು.
ಘಟನೆ ನಡೆದಿರುವುದು ಸತ್ಯ. ಆದರೆ ಏನು ನಡೆದಿದೆ ಎನ್ನುವುದನ್ನು ಸಭಾಧ್ಯಕ್ಷರ ಮಾತ್ರ ತನಿಖೆಗೆ ಆದೇಶಿಸಿ ಸತ್ಯ ಹೊರಗೆ ಬರುವಂತೆ ಮಾಡಬಹುದು. ಏಕೆಂದರೆ 1980ರಿಂದ ಇಲ್ಲಿಯ ತನಕ ವಿಧಾನ ಪರಿಷತ್ ಅಲ್ಲಿ ಇವರು ಕೆಲಸ ಮಾಡಿದ್ದಾರೆ. ಅನೇಕ ಮುಖ್ಯಮಂತ್ರಿಗಳನ್ನು ಇವರು ನೋಡಿದ್ದಾರೆ. ಇಡೀ ದೇಶದಲ್ಲಿ ಪರಿಷತ್ ಅಲ್ಲಿ ಹೆಚ್ಚು ಅನುಭವ ಇರುವ ವ್ಯಕ್ತಿ. ಅನೇಕ ಸಭಾಧ್ಯಕ್ಷರ ಕೈ ಕೆಳಗೆ ಕೆಲಸ ಮಾಡಿದವರು. ಇವರು ಸ್ವತಃ ಸಭಾಧ್ಯಕ್ಷರಾಗಿ ಹೆಚ್ಚು ಕೆಲಸ ಮಾಡಿದ ಅನುಭವವಿದೆ.
ಈ ಪ್ರಕರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸಂವಿಧಾನದ ಹಾಗೂ ಕಾನೂನಿನ ವ್ಯಾಪ್ತಿಯ ಒಳಗೆ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಸಿಐಡಿ ತನಿಖೆ ಸೇರಿದಂತೆ ಯಾರಿಗೆ ತನಿಖೆಗೆ ನೀಡಿದರು. ಅವರು ವಿಧಾನಸಭೆಗೆ ಪ್ರವೇಶ ಪಡೆಯಬೇಕು ಎಂದರೆ ಸ್ಪೀಕರ್ ಅವರ ಅನುಮತಿ ಪಡೆಯಬೇಕು. ಅದರ ಬದಲು ಇವರೇ ತನಿಖೆ ನಡೆಸಿದರೆ ಉತ್ತಮವಲ್ಲವೇ? ಈ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ನೀಡಬಹುದು ಅಥವಾ ಇನ್ನೊಂದು ಉಪ ಸಮಿತಿ ರಚನೆ ಮಾಡಿಯೂ ತನಿಖೆಗೆ ನೀಡಬಹುದು.
ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿದ ಕಾರಣಕ್ಕೆ ನಾನು ದನಿ ಏರಿಸಿದೆ ಎನ್ನುವ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಸ್ಪೀಕರ್ ಅವರು ಏನಾದರೂ ಉತ್ತರ ಕೊಟ್ಟಿದ್ದಾರೆಯೇ? ಅವರು ಉತ್ತರ ಕೊಟ್ಟಿದ್ದರೆ ನಾನು ಉತ್ತರ ನೀಡುತ್ತಿದ್ದೆ. ಸಚಿವರು ಯಾವುದರ ಬಗ್ಗೆ ಮಾತನಾಡಿದ್ದಾರೆಯೋ ಅದರ ಬಗ್ಗೆ ಅವರು ಬಲವಾಗಿ ನಿಂತಿದ್ದಾರೆ. ಅವರ ಹೇಳಿಕೆಯಿಂದ ಹಿಂದೆ ಸರಿದಿಲ್ಲ ಎಂದು ಅವರು ನುಡಿದರು.
ನಾನು ಆ ರೀತಿಯ ಪದ ಬಳಕೆ ಮಾಡಿಲ್ಲ ಎನ್ನುವ ಬಗ್ಗೆ ಸಿ.ಟಿ.ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಸಹ ಇದನ್ನೇ ಹೇಳುತ್ತಿದ್ದೇನೆ. ಈ ಘಟನೆ ನಡೆದ ವೇಳೆ ಸದನದಲ್ಲಿ ಹಾಜರಿದ್ದವರ ಬಳಿ ವಿಚಾರಣೆ ನಡೆಸಲಿ, ವಿಡಿಯೋ ಸೇರಿದಂತೆ ಅನೇಕ ಸಾಕ್ಷಿಗಳಿವೆ ಅವುಗಳನ್ನು ಪರೀಕ್ಷೆಗೆ ಒಳಪಡಿಸಲಿ. ಆಗ ಸತ್ಯ ತಿಳಿಯುತ್ತದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.