ಇತ್ತೀಚಿನ ಸುದ್ದಿ
ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕಗಳಿಗಿಂತ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್
30/06/2026, 09:50
ಮಂಗಳೂರು(reporterkarnataka.com): ರಾಜ್ಯದಲ್ಲಿ 47 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳಿದ್ದು, ಇವು ರಾಷ್ಟ್ರೀಕೃತ ಬ್ಯಾಂಕಗಳಿಗಿಂತ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸವಾಲು ಹಾಕುತ್ತಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಇಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು ಹಾಗೂ ಜಿಲ್ಲಾ ಸಹಕಾರ ಇಲಾಖೆಯ ಸಹಯೋಗದಲ್ಲಿ ಕೇಂದ್ರ ಸಹಕಾರ ಸಚಿವಾಲಯವು ಸ್ಥಾಪನೆಯಾಗಿ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ವ್ಯವಹಾರದಲ್ಲಿ 30 ಕೋಟಿ ಜನ ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರ ನಡೆಸುತ್ತಿದ್ದು, ಇದು ರಾಜ್ಯ, ದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.



ಸಹಕಾರ ಧ್ವಜಾರೋಹಣ ನೆರವೇರಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಸೇವೆ ರಾಜ್ಯದಲ್ಲಿಯೇ ಉತ್ತಮವಾಗಿದ್ದು, ಅದನ್ನು ಮುಕ್ತ ಕಂಠದಿಂದ ಶ್ಲಾಘಿಸಬೇಕು ಎಂದ ಅವರು ಸಹಕಾರಿ ಚಳುವಳಿಯ ಬಳಿಕ ಅಭೂತಪೂರ್ವ ಬೆಳವಣಿಗೆಯನ್ನು ಕಂಡ ಸಹಕಾರಿ ಕ್ಷೇತ್ರ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೋದಿಯವರ 2047ರ ವಿಕಸಿತ ಭಾರತದ ಕಲ್ಪನೆಗೆ ಸಹಕಾರಿ ಕ್ಷೇತ್ರಗಳ ಕೊಡುಗೆ ಅಪಾರ ಎಂದರು.
ಜಿಲ್ಲೆಯಲ್ಲಿ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಾಕಷ್ಟು ಉತ್ತಮ ಕೆಲಸಗಳಾಗುತ್ತಿದ್ದು, ಮಹಿಳೆಯರ ಸಬಲೀಕರಣದೊಂದಿಗೆ ಅವರನ್ನು ಮುನ್ನೆಲೆಗೆ ತರುವಂತಹ ಮಹತ್ತರ ಕೆಲಸವನ್ನು ಮಾಡುತ್ತಿದ್ದಾರೆ ಎಂದ ಅವರು ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಮಟ್ಟದಲ್ಲೂ ಹೆಸರು ಮಾಡಿದ್ದು, ಮೊಬೈಲ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಜನರನ್ನು ತಲುಪುತ್ತಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಕಕರ ಶೆಟ್ಟಿ ಬಿ. ಇಂದ್ರಾಳಿ, ದ.ಕ. ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಐಕಳ, ವಿಶ್ವಕರ್ಮ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಬ್ಯಾಂಕ್‌ನ ನಿರ್ದೇಶಕರುಗಳು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ವಂದಿಸಿದರು.












