10:39 PM Tuesday20 - May 2025
ಬ್ರೇಕಿಂಗ್ ನ್ಯೂಸ್
1,600 ಕೋಟಿ ರೂ. ಕಾಮಗಾರಿ ರದ್ದು ಮಾಡದಿದ್ದರೆ ಬೆಂಗಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ:… Ex chief Minister | ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ ಸರ್ಕಾರ: ಬಸವರಾಜ ಬೊಮ್ಮಾಯಿ… Karnataka CM | ಬೆಂಗಳೂರಿನಲ್ಲಿ ಮಳೆ ಹಾನಿ: ಮೇ 21ರಂದು ಇಡೀ ದಿನ… GBA | ಬೆಂಗಳೂರಿಗೆ ಭಾರಿ ಮಳೆಯಿಂದ ಹಾನಿ: ವಾರ್ ರೂಮ್‌ನಲ್ಲಿ ಮಾಹಿತಿ ಪಡೆದ… ಫಲಾನುಭವಿಗಳ ನೋಡಲು ಬಿಜೆಪಿ ನಾಯಕರುಗಳೇ ಬನ್ನಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆಹ್ವಾನ Karnataka | ಹಂಪಿಯಲ್ಲಿ ರಾಜ್ಯದ 2ನೇ ಅತಿದೊಡ್ಡ ತಾರಾಲಯ ಹಾಗೂ ವಿಜ್ಞಾನ ಕೇಂದ್ರ… HDK | ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್ ಗಳ ಬೆಂಗಳೂರು: ರಾಜ್ಯ ಸರಕಾರ… ಬೆಂಗಳೂರು: ಗುಡುಗು ಸಹಿತ ಭಾರೀ ಮಳೆ: ರಸ್ತೆಯಲ್ಲಿ ನಿಂತ ನೀರು; ಟ್ರಾಫಿಕ್ ಜಾಮ್;… ಪಾಕ್ ಬೆಂಬಲಿತ ಭಯೋತ್ಪಾದನೆ: ಅಮೆರಿಕ ತೆರಳಲಿರುವ ಸರ್ವಪಕ್ಷ ನಿಯೋಗದಲ್ಲಿ ಸಂಸದರಾದ ತೇಜಸ್ವಿ ಸೂರ್ಯ,… Chikkamagaluru | ಕೃಷಿ ಹೊಂಡದಲ್ಲಿ ಒಂಟಿ ಸಲಗನ ಜಲಕ್ರೀಡೆ!: ಒಂದು ತಾಸಿಗೂ ಅಧಿಕ…

ಇತ್ತೀಚಿನ ಸುದ್ದಿ

ಜನ ಸತ್ತರೂ ಕಾಂಗ್ರೆಸ್‌ ಸಾಧನಾ ಸಂಭ್ರಮಾಚರಣೆ; ನಾಚಿಕೆ ಆಗುವುದಿಲ್ಲವೇ?: ಸಿಎಂ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ

20/05/2025, 22:38

ನವದೆಹಲಿ(reporterkarnataka.com): ಬೆಂಗಳೂರಿನಲ್ಲಿ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಇಂಥ ಸ್ಥಿತಿಯಲ್ಲಿ ನೀವು ವಿಜಯನಗರಕ್ಕೆ ಹೋಗಿ ಸಂಭ್ರಮಾಚರಣೆ ಮಾಡುತ್ತಿದ್ದೀರಲ್ಲ? ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ…ನಿಮಗೆ ಸ್ವಲ್ಪವೂ ನಾಚಿಕೆ ಆಗುವುದಿಲ್ಲವೇ? ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ನವದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಬೆಂಗಳೂರು ಜಲಾವೃತವಾಗಿ ಜನ ಸತ್ತರೂ ಇವರು ವಿಜಯನಗರಕ್ಕೆ ಹೋಗಿ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ಎನ್ನುತ್ತ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಿಜಕ್ಕೂ ಇವರಿಗೆ ರಾಜ್ಯದ ಜನಜೀವನದ ಬಗ್ಗೆ ಕಾಳಜಿಯೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ಒಂದೇ ಒಂದು ರಸ್ತೆಯ ತೆಗ್ಗು-ಗುಂಡಿ ಮುಚ್ಚಿಲ್ಲ. ಮಣ್ಣು ಸಹ ಹಾಕಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್‌ ಬೆಂಗಳೂರು ಉಸ್ತುವಾರಿ ಮಂತ್ರಿ.ಯಾಗಿದ್ದರೂ ಆಡಳಿತದ ಕಡೆ ಗಮನವಿಲ್ಲ. ಬೆಂಗಳೂರಿನ ರಾಜಕಾಲುವೆ ಸಹ ಸ್ವಚ್ಛಗೊಳಿಸಿದ ಇವರು ಖಜಾನೆ ಮಾತ್ರ ಸ್ವಚ್ಛಗೊಳಿಸುತ್ತಿದ್ದಾರಷ್ಟೇ ಎಂದು ಕಿಡಿಕಾರಿದರು.
ಬೆಂಗಳೂರು ಪರಿಸ್ಥಿತಿ ನೋಡಲು ಸರ್ಕಾರದಲ್ಲಿ ಯಾರೂ ಇಲ್ಲದಂತಾಗಿದೆ. ಬ್ರ್ಯಾಂಡ್‌ ಬೆಂಗಳೂರು ಎಂದೆಲ್ಲಾ ಬಡಾಯಿ ಬಿಡುವ ಇವರ ಆಡಳಿತದಲ್ಲಿ ಬೆಂಗಳೂರು ಪರಿಸ್ಥಿತಿ ಏನಾಗಿದೆ? ಎಂಬುದನ್ನು ಸದ್ಯ ಸುರಿದ ಮಳೆಯೇ ತೆರೆದಿಟ್ಟಿದೆ. ರಸ್ತೆ ಅಭಿವೃದ್ಧಿ, ರಾಜಕಾಲುವೆ ಸ್ವಚ್ಛತೆಯಂತಹ ಕಾಮಗಾರಿ ಕೈಗೊಳ್ಳಲೂ ಸಾಧ್ಯವಾಗದ ಗಂಭೀರ ಸ್ಥಿತಿಗೆ ಕೊಂಡೋಯ್ದಿದ್ದಾರೆ ಎಂದು ಸಚಿವ ಜೋಶಿ ಹರಿಹಾಯ್ದರು.

*ಸಿಎಂ ಕುರ್ಚಿಗೆ ಪೈಪೋಟಿ:* ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರೂ ಬರೀ ಗುಂಪುಗಾರಿಕೆ ಮಾಡುತ್ತ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ರಾಹುಲ್‌ ಗಾಂಧಿ ಪಕ್ಕದಲ್ಲಿ ಕಾಣಿಸಿಕೊಳ್ಳಲು ಪರಸ್ಪರ ಹಾತೊರೆಯುತ್ತಿದ್ದಾರೆ ವಿನಃ ರಾಜ್ಯದ ಅಭಿವೃದ್ಧಿ, ಜನ ಜೀವನದ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಆರೋಪಿಸಿದರು.

*ಲಂಚ ಹೊಡೆಯಲು ಫ್ರೀ ಬಿಟ್ಟ ಸಿಎಂ:* ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಆಡಳಿತ ವೈಫಲ್ಯ ಕಂಡಿದ್ದಾರೆ. ಲಂಚ ಹೊಡೆಯಲು ಇಡೀ ಸರ್ಕಾರವನ್ನು ಫ್ರೀ ಬಿಟ್ಟು ಬಿಟ್ಟಿದ್ದಾರೆ. ವಾಲ್ಮೀಕಿ, ಮೂಡಾ ಹಗರಣ, ಈಗ ಕಾರ್ಮಿಕ ಇಲಾಖೆಯಲ್ಲೂ ಹಗರಣ ನಡೆದಿದೆ. ಇದೆಲ್ಲವನ್ನೂ ಮುಚ್ಚಿಡಲು ಪ್ರಯತ್ನಿಸುತ್ತಿರುವುದೇ ಇವರ ೨ ವರ್ಷದ ಸಾಧನೆ ಎಂದು ಸಚಿವ ಜೋಶಿ ದೂರಿದರು.
ರಾಜ್ಯ ಸರ್ಕಾರದಲ್ಲಿ ವೇತನ ಕೊಡಲೂ ಹಣವಿಲ್ಲದಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 303 ಕೋಟಿ ಬಾಕಿಯನ್ನು ಇನ್ನೂ ಕೊಟ್ಟಿಲ್ಲ. ಇವರು ಅದ್ಯಾವ ಸ್ಥಿತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೋ ಗೊತ್ತಿಲ್ಲ? ಅಭಿವೃದ್ಧಿ ಕಾಮಗಾರಿಗಳು ನಡೆಯದೆ ಶಾಸಕರೇ ದಿಕ್ಕೆಟ್ಟು ಕುಳಿತಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಈಗ ಭ್ರಷ್ಟಾಚಾರ ಮಿತಿ ಮೀರಿದೆ ಎಂದಿದ್ದಾರೆ. ದುರಾಡಳಿತದ ಬಗ್ಗೆ ಇದಕ್ಕಿಂತ ನಿದರ್ಶನ ಬೇಕೇ? ಎಂದು ಜೋಶಿ ಪ್ರಶ್ನಿಸಿದರು.

*ʼತುಷ್ಟೀಕರಣ, ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತ, ಹಗರಣಗಳೇ ಕಾಂಗ್ರೆಸ್‌ನ ಪಂಚ ಗ್ಯಾರೆಂಟಿಗಳು:*
ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ʼತುಷ್ಟೀಕರಣ, ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತ ಮತ್ತು ಹಗರಣಗಳುʼ ಎಂಬ ಐದು ಪಂಚ ಗ್ಯಾರೆಂಟಿಗಳನ್ನು ನೀಡಿದೆಯೇ ಹೊರತು ಜನಪರ ಗ್ಯಾರೆಂಟಿಗಳನ್ನಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ 2 ವರ್ಷದಿಂದ ಬರೀ ಟಿಪ್ಪು ಸುಲ್ತಾನ್‌ ಜಪ ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಕುಟುಕಿದರು.
ನೀರು, ಹಾಲಿನಿಂದ ಹಿಡಿದು ಆಲ್ಕೋಹಾಲ್‌ವರೆಗೂ 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವ ಹಿಂಡುತ್ತಿರುವುದೇ ಇವರ ಬಹು ದೊಡ್ಡ ಸಾಧನೆಯಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಸಂಪೂರ್ಣ ತುಷ್ಟೀಕರಣ, ಭ್ರಷ್ಟಾಚಾರ, ಹಗರಣ ಮತ್ತು ಮಿತಿಮೀರಿದ ಸಾಲದಲ್ಲಿ ತೊಡಗಿರುವುದೇ ಇವರ ಮಹತ್ಸಾಧನೆಯಾಗಿದೆ ಎಂದು ಸಚಿವ ಜೋಶಿ ಟೀಕಿಸಿದರು.

*ಬೋಗಸ್‌ ಗ್ಯಾರೆಂಟಿಗಳು:* ರಾಜ್ಯದ ಜನತೆಗೆ ಬೋಗಸ್‌ ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ, ನಂತರದಲ್ಲಿ ಅವನ್ನು ಪೂರೈಸಲು ಹೆಣಗಾಡುತ್ತಿದೆ. ಗೃಹಲಕ್ಷ್ಮಿ, ಯುವ ನಿಧಿ ಯಾವುದೊಂದೂ ಜನರನ್ನು ಸಮರ್ಪಕವಾಗಿ ತಲುಪಿಲ್ಲ. ವರ್ಷದಲ್ಲಿ ಒಂದೆರೆಡು ಕಂತು ಹಾಕಿ ಫೋಸ್‌ ಕೊಡುತ್ತಿದೆಯಷ್ಟೇ ಎಂದು ಟೀಕಿಸಿದರು.

*ಬೇಜವಾಬ್ದಾರಿ ಹೇಳಿಕೆ ಬೇಡ:* ಪಹಲ್ಗಾಮ್‌ ಭಯೋತ್ಪಾದನಾ ದಾಳಿ ವಿರುದ್ಧ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ನಮ್ಮ ರಕ್ಷಣಾ ಪಡೆ ನಡೆಸಿದ ಪ್ರತಿ ದಾಳಿಗೆ ಕಾಂಗ್ರೆಸ್ಸಿಗರು ಸಾಕ್ಷಿ ಕೇಳುತ್ತಿದ್ದಾರೆ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಬೇಕಾದವರು ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟಂತಾಗುತ್ತದೆ. ಹಾಗಾಗಿ ಸ್ವಲ್ಪ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಸಚಿವ ಜೋಶಿ ಸಲಹೆ ನೀಡಿದರು.
ಕಾಂಗ್ರೆಸ್‌ ಅವಧಿಯಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ, ಹೈದ್ರಾಬಾದ್‌, ಬೆಂಗಳೂರು, ಪುಣೆ, ದೆಹಲಿವರೆಗೂ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ದಾಳಿ ನಡೆದಿತ್ತು. ಖರ್ಗೆ ಅವರು ಹತ್ತು ವರ್ಷದ ಹಿಂದಿನ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಪರಿಸ್ಥಿತಿ ಹೇಗಿತ್ತು? ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಚಾಟಿ ಬೀಸಿದ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶಾದ್ಯಂತ ಶಾಂತಿಯ ವಾತಾವರಣವಿದೆ ಎಂದು ಪ್ರತಿಪಾದಿಸಿದರು.

*ಸುಳ್ಳು ಹೇಳುತ್ತಲೇ ಕಾಂಗ್ರೆಸ್‌ ಅವನತಿಗೆ:* ಕಾಂಗ್ರೆಸ್‌ ಪಕ್ಷ ಬರೀ ಸುಳ್ಳು ಹೇಳುತ್ತಿದ್ದರಿಂದಲೇ ಅವನತಿಗೆ ಬಂದಿದೆ. ನೆಹರು ಕಾಲಘಟ್ಟ ಬಿಟ್ಟರೆ ನಂತರದಲ್ಲಿ ಕಾಂಗ್ರೆಸ್‌ ಒಮ್ಮೆಯೂ ಮೂರು ಬಾರಿ ಅಧಿಕಾರಕ್ಕೆ ಬಂದ ಉದಾಹರಣೆಯಿಲ್ಲ. ಆದರೆ, ಎನ್‌ಡಿಎ ಆಡಳಿತದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ. ಭಯೋತ್ಪಾದನೆ ವಿರುದ್ಧ ಪ್ರಥಮದಿಂದಲೂ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದಾರೆ ಎಂದು ಜೋಶಿ ಕಾಂಗ್ರೆಸ್‌ ನಾಯಕರಿಗೆ ತಿವಿದರು.

ಇತ್ತೀಚಿನ ಸುದ್ದಿ

ಜಾಹೀರಾತು