ಇತ್ತೀಚಿನ ಸುದ್ದಿ
ಕಾಂಗ್ರೆಸ್ ಆಡಳಿತ ಸಂಪೂರ್ಣ ವಿಫಲ: ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೂಡಿಗೆರೆ ವಾಗ್ದಾಳಿ
10/01/2025, 21:40
ಮಂಗಳೂರು(reporterkarnataka.com): ರಾಜ್ಯದಲ್ಲಿ ಅಸಹಜ ಪ್ರಮಾಣದಲ್ಲಿ ಏರಿಕೆಯಾದ ಬಾಣಂತಿಯರ ಸಾವಿನ ಪ್ರಕರಣಗಳು, ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ನಿರಾಕರಿಸಿದ್ದಕ್ಕಾಗಿ ಹಿರಿಯ ನಾಗರಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ- ಇವೆಲ್ಲವನ್ನು ಗಮನಿಸಿದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೂಡಿಗೆರೆ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರಕಾರದ ವೈಫಲ್ಯಗಳನ್ನು ಬಿಡಿಸಿಟ್ಟರು. ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವ ರಾಜ್ಯ ಸರಕಾರ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದೇಕೆ ಎಂದು ಪ್ರಶ್ನಿಸಿದರು.
*ಅವರು ಹೇಳಿದ್ದಿಷ್ಟು:*
* ಉತ್ತರ ಕರ್ನಾಟಕದಲ್ಲಿ ಬಾಣಂತಿಯರ ಸಾವು ಇರಬಹುದು, ಗುತ್ತಿಗೆದಾರರ ಆತ್ಮಹತ್ಯೆಯಿಂದ ಸಚಿವರ ಮೇಲೆ ಬಂದಿರುವ ಕಪ್ಪು ಚುಕ್ಕೆ ಇರಬಹುದು, ಆಯುಷ್ಮಾನ್ ಭಾರತ್ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡದೆ ಇರುವಂಥ ಸಂದರ್ಭದಲ್ಲಿ ಒಬ್ಬ ಹಿರಿಯ ನಾಗರಿಕರ ಆತ್ಮಹತ್ಯೆ ಇರಬಹುದು, ದಿನೇ ದಿನೇ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಈ ಎಲ್ಲ ಪ್ರಕರಣಗಳಲ್ಲೂ ಎದ್ದು ಕಾಣುತ್ತಿರುವುದು ರಾಜ್ಯ ಸರಕಾರದ ವೈಫಲ್ಯ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಿನಿಂದ ಕರ್ನಾಟಕ ಸರಕಾರ ಎಲ್ಲ ವಿಚಾರಗಳಲ್ಲೂ ಎಡವುತ್ತಲೇ ಬಂದಿದೆ.
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಆರೋಗ್ಯ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಬಾಣಂತಿಯರ ಸಾವು ಆಗಿದೆ, ಶಿಶು ಮರಣಗಳು ಸಂಭವಿಸುತ್ತಿವೆ; ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ದೊರಕಿಸಿಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಮತ್ತೆ ಅದೇ, ಕೇಂದ್ರದ ಬಗ್ಗೆ ಬೆರಳು ತೋರಿಸಿ ತಮ್ಮ ವೈಫಲ್ಯ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಪಿಎಂ ಆವಾಸ್ ಯೋಜನೆಯಡಿ ಮನೆ ಕಟ್ಟಿ ಕೊಡುತ್ತಿಲ್ಲ ಏಕೆ ಎಂದರೂ ಅದೇ ಉತ್ತರ. ಸಚಿವ ಸಂಪುಟ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೂ ಅವರಿಂದ ಬರುವುದು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಉತ್ತರ. ಕೇಂದ್ರ ಏನೂ ಮಾಡಿಲ್ಲ, ನಮಗೆ ಏನೂ ಕೊಡುತ್ತಿಲ್ಲ ಎಂಬ ಸಿದ್ಧ ಉತ್ತರ, ಸಿದ್ಧ ಆರೋಪ.
* 2024ರ ಡಿಸೆಂಬರ್ ನಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಅತ್ಯಧಿಕ ದಾಖಲಾಗಿವೆ. ಅಕ್ಟೋಬರ್ ನಿಂದಲೇ ಪ್ರಕರಣಗಳು ವರದಿಯಾಗುತ್ತಿದ್ದವು. ಆಸ್ಪತ್ರೆಯ ಅಧಿಕಾರಿಗಳು ಅಲ್ಲೇನೋ ಅವ್ಯವಹಾರ ಆಗಿದೆ ಎಂಬುದನ್ನು ಹೇಳುತ್ತಿದ್ದರು. ವೈದ್ಯಕೀಯ ಉಪಕರಣಗಳು, ಔಷಧಗಳ ಖರೀದಿ ಸರಿಯಾಗಿ ಆಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
* 217 ಪ್ರಕರಣಗಳು ನಾಲ್ಕು ತಿಂಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ನಡೆದಿವೆ. ಬಾಣಂತಿಯರು ಮತ್ತು ಶಿಶುಗಳ ಸಾವು ಆಗಿದೆ. ಅಸಹಜ ಸಂಖ್ಯೆಯ ಪ್ರಕರಣಗಳು ದಾಖಲಾಗ್ತಿವೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಬಾಣಂತಿಯರು, ಶಿಶುಗಳ ಮರಣ ಪ್ರಮಾಣ ಇಳಿಮುಖವಾಗುತ್ತಾ ಬಂದಿರುವಾಗ ಇದ್ದಕ್ಕಿದ್ದಂತೆ ಅಸಹಜ ರೀತಿಯಲ್ಲಿ ಈ ಪ್ರಕರಣಗಳ ಸಂಖ್ಯೆ ಏರುತ್ತಿವೆ.
* ದಾವಣಗೆರೆ, ರಾಯಚೂರು, ಕಲಬುರಗಿ- ಹೀಗೆ ಬೇರೆ ಬೇರೆ ಭಾಗಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಅಸಹಜ ಸಾವಿನ ಪ್ರಕರಣಗಳು ದಾಖಲಾಗಿವೆ. ಸರಕಾರ ಎಲ್ಲದಕ್ಕೂ ಕಣ್ಣುಮುಚ್ಚಿಕೊಂಡು ಕುಳಿತಿತ್ತು. ಡಿಸೆಂಬರ್ 24ರಂದು ಈ ಪ್ರಕರಣಗಳು ಮಾಧ್ಯಮಗಳಲ್ಲಿ ದೊಡ್ಡದಾಗಿ ವರದಿಯಾದಾಗ ಎಚ್ಚತ್ತುಕೊಂಡು ಕೇಂದ್ರದ ಮೇಲೆ ಗೂಬೆ ಕೂರಿಸಲಾರಂಭಿಸಿತು.
* ಬಿಜೆಪಿ ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸತ್ಯಶೋಧನಾ ತಂಡಗಳನ್ನು ರಚಿಸಿ ಮಾಹಿತಿಗಳನ್ನು ಕಲೆಹಾಕಿತು. ಬಿಜೆಪಿ ಹೋರಾಟ ಮಾಡಿದ ನಂತರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚತ್ತುಕೊಂಡು, ಈ ಬಗ್ಗೆ ಕೇಂದ್ರ ಸರಕಾರ ಒಂದು ಡೇಟಾಬೇಸ್ ತಯಾರು ಮಾಡಲಿ, ಆಗ ಸರಿಯಾಗಿ ಗೊತ್ತಾಗುತ್ತದೆ ಎನ್ನುತ್ತಾರೆ. ನಿಮ್ಮ ಸರಕಾರದಲ್ಲಿ ಕೆಲಸ ಮಾಡುವವರು ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಬಂದು ನಿಮ್ಮಲ್ಲಿ ಸಮಸ್ಯೆ ಹೇಳಿಕೊಂಡಾಗ ಗೊತ್ತಾಗಲಿಲ್ವಾ?
* ಮಗುವಿಗೆ ಜನ್ಮ ನೀಡಿದ ಖುಷಿಯ ಸಂದರ್ಭದಲ್ಲಿ ಒಬ್ಬ ಮಹಿಳೆ ಮಗುವನ್ನು ಕಳೆದುಕೊಳ್ಳುವ ಸನ್ನಿವೇಶ ಅಥವಾ ತಾನೇ ಪ್ರಾಣ ಬಿಡುವ ಸನ್ನಿವೇಶ ಎದುರಾಗಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯವಲ್ಲದೆ ಮತ್ತೇನು?
* ಆಸ್ಪತ್ರೆ ಮತ್ತು ವೈದ್ಯರ ಮೇಲೆ ಬಹಳಷ್ಟು ನಂಬಿಕೆ ಇಟ್ಟುಕೊಂಡು ಜನರು ದಾಖಲಾಗುತ್ತಾರೆ. ಅಲ್ಲಿ ಕೊಡುವ ಔಷಧಗಳನ್ನು ಸೇವಿಸುವಾಗ ಇದರಿಂದ ತನಗೇನಾದರೂ ತೊಂದರೆಯಾಗುತ್ತದಾ ಎಂಬ ಸಂದೇಹವನ್ನು ಯಾರೂ ವ್ಯಕ್ತಪಡಿಸುವುದಿಲ್ಲ. ಅಷ್ಟು ನಂಬಿಕೆ ಇಟ್ಟುಕೊಂಡು ಆರೋಗ್ಯ ಸೇವೆಗಳನ್ನು ಪಡೆಯಲು ಬಂದಾಗ ಸರಕಾರದ ವ್ಯವಸ್ಥೆ ಅವರ ನಂಬಿಕೆ ಸುಳ್ಳು ಮಾಡುವಂತೆ ನಡೆದುಕೊಂಡರೆ ಅದು ಸರಕಾರದ ವೈಫಲ್ಯವಲ್ಲದೆ ಮತ್ತೇನು?
* ದೋಷಪೂರಿತ ಔಷಧ ನೀಡಿ ಸಾವು ಸಂಭವಿಸಿದ ಸನ್ನಿವೇಶದಲ್ಲಿ ಆರೋಗ್ಯ ಸಚಿವರು- ಇದನ್ನು ತನಿಖೆ ಮಾಡುತ್ತೇವೆ. ಆದರೆ ಅದಕ್ಕೆ ಮುಂಚೆ ಕೇಂದ್ರ ಸರಕಾರ ನಮಗೆ ಸಹಾಯ ಮಾಡಬೇಕು ಎನ್ನುತ್ತಾರೆ. ನಿಮ್ಮದೇ ಅಧಿಕಾರಿಗಳು ಬಂದು ಹೇಳಿದಾಗ ನೀವ್ಯಾಕೆ ಜಾಗೃತರಾಗಿ ಕ್ರಮ ಕೈಗೊಳ್ಳಲಿಲ್ಲ?
* ಇದೇ ಸಚಿವ ದಿನೇಶ್ ಗುಂಡೂರಾವ್ ಟ್ವಿಟರ್ ನಲ್ಲಿ ಜಗಳವಾಡುತ್ತಾರೆ. ಡಿಸೆಂಬರ್ 25ರಂದು ಒಬ್ಬ ಹಿರಿಯ ನಾಗರಿಕರೊಬ್ಬರು ಸರಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೋದಾಗ- ನಿಮಗೆ ಈ ಸೌಲಭ್ಯ ಇಲ್ಲ;, ಚಿಕಿತ್ಸೆ ಕೊಡಲ್ಲ ಎನ್ನುತ್ತಾರೆ. ಅದಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
* ಮಾನ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ಎಲ್ಲದರಲ್ಲೂ ನೀವು ರಾಜಕೀಯ ತರುತ್ತೀರಿ, ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸ್ತೀರಿ ಎನ್ನುವುದಾದರೆ ರಾಜ್ಯವನ್ನು ಆಳಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ಆಯುಷ್ಮಾನ್ ಭಾರತ್ ಬಗ್ಗೆ ನಾವು ಮಾತಾಡುವುದಿಲ್ಲ. ಕೇಂದ್ರದಿಂದ ಎಷ್ಟು ಹಣ ಬರಬೇಕೋ ಅಷ್ಟು ಬಂದಿಲ್ಲ ಎನ್ನುವುದಾದರೆ ನೀವು ಮಾತನಾಡಿ ಅದನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕೆ ಹೊರತು ಸುಮ್ಮನೆ ಕೇಂದ್ರದ ಮೇಲೆ ಆರೋಪ ಮಾಡುವುದಲ್ಲ.
* 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸಾ ವ್ಯವಸ್ಥೆ ಮಾಡಿರುವುದು ಅತ್ಯಂತ ಮಹತ್ವದ ಯೋಜನೆ. ನಮ್ಮ ದೇಶದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಹಿರಿಯ ನಾಗರಿಕರ ಜೀವಿತಾವಧಿ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಿರುವಾಗ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಕೇಂದ್ರ ಸರಕಾರ ಒದಗಿಸಿದಾಗ ಅದನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎನ್ನುವುದಾದರೆ ನಿಮ್ಮ ಸರಕಾರ ಏಕಿರಬೇಕು? ಜನರಿಗೆ ಸಹಾಯವಾಗುವಂತಹ ಯೋಜನೆಯನ್ನು ಜಾರಿಗೊಳಿಸುವಲ್ಲಿ ರಾಜಕೀಯ ಮಾಡುತ್ತೀರಾದರೆ ನಿಮ್ಮ ವೈಫಲ್ಯ ಒಪ್ಪಿಕೊಂಡು ಕೇಂದ್ರ ಸರಕಾರಕ್ಕೇ ಅಧಿಕಾರವನ್ನು ಬಿಟ್ಟುಕೊಡಿ.
* ಈ ಸರಕಾರಕ್ಕೆ ಬದ್ಥತೆ ಇಲ್ಲ. ಜನರ ಸಮಸ್ಯೆ ಪರಿಹಾರ ಮಾಡುತ್ತೇವೆ ಎನ್ನುವ ಕನಿಷ್ಠ ಕಾಳಜಿ ಈ ಸರಕಾರಕ್ಕಿಲ್ಲ.
* ದ.ಕ. ಸಂಸದ ಬ್ರಿಜೇಶ್ ಚೌಟರು ಈ ಸರಕಾರದ ಟ್ರೆಂಡ್ ನೋಡಿದರೆ ಕೇಂದ್ರ ಸರಕಾರದ ಅನುದಾನಗಳನ್ನು ಸರಿಯಾಗಿ ಬಳಸುತ್ತಿಲ್ಲ ಎಂಬ ಅಂಶವನ್ನು ಎತ್ತಿ ತೋರಿಸಿದ್ದಾರೆ.
* ಆವಾಸ್ 2.2- ಯೋಜನೆಯನ್ನು 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಪ್ಪಿಕೊಂಡಿವೆ. ಕರ್ನಾಟಕ ಇದರಲ್ಲಿ ಭಾಗಿಯಾಗಿಲ್ಲ.
ಜನರಿಗೆ ತಲುಪಬೇಕಾದ ಒಂದೊಂದು ಯೋಜನೆಯನ್ನು ಕೂಡ ರಾಜಕೀಯ ವಿಷಯಕ್ಕಾಗಿ ಬೇಡ ಅನ್ನುವುದಾದರೆ ನಾವೆಲ್ಲಿ ಹೋಗುತ್ತಿದ್ದೇವೆ?
* ಸರಕಾರ ರಚನೆಯಾದಾಗಿನಿಂದ ಹೇಳುತ್ತಾ ಬಂದಿದ್ದೇವೆ. ಒಕ್ಕೂಟ ವ್ಯವಸ್ಥೆ ಎನ್ನುವ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಸಹಕಾರಿ ಒಕ್ಕೂಟ ವ್ಯವಸ್ಥೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗೋಣ ಅನ್ನುವುದು ಆಗಬೇಕು.
* ರಾಜ್ಯ ಸರಕಾರಕ್ಕೆ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಆಗದೆ ಕೇಂದ್ರದ ಮೇಲೆ ಆರೋಪ ಹೊರಿಸುತ್ತಿರುವುದು ಕಾಣುತ್ತದೆ.
* ಸಿದ್ದರಾಮಯ್ಯ- ಆಡಳಿತಾಧಿಕಾರಿಗಳ ಸಭೆ ಮಾಡಿದರು. ವಿವಿಧ ಯೋಜನೆಗಳಲ್ಲಿ, ಇಲಾಖೆಗಳಲ್ಲಿ ಅನುದಾನಗಳ ಬಳಕೆ ಸರಿಯಾಗಿ ಆಗುತ್ತಿಲ್ಲ ಎಂಬುದು ಬೆಳಕಿಗೆ ಬಂತು. ಒಂದೆಡೆ ಈ ಪರಿಸ್ಥಿತಿ, ಇನ್ನೊಂದೆಡೆ ಕೇಂದ್ರ ಅನುದಾನ ಕೊಡುತ್ತಿಲ್ಲ ಎನ್ನುವ ಸುಳ್ಳು ಆರೋಪಗಳು.
* ಡಿಜಿಟಲ್ ಇಂಡಿಯಾದಿಂದ ಸರಕಾರ ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ಸಾಧ್ಯವಾಗಿದೆ. ಕರ್ನಾಟಕ ಸರಕಾರದ್ದೇ ಒಂದು ವೆಬ್ಸೈಟ್- ಅವಲೋಕನ- ಅದರಲ್ಲಿ ಎಲ್ಲ ಮಾಹಿತಿ ಇದೆ. ಯಾವ ಇಲಾಖೆಗೆ ಎಷ್ಟು ಅನುದಾನ ಮಂಜೂರಾಗಿದೆ ಮತ್ತು ಎಷ್ಟು ಬಳಕೆಯಾಗಿದೆ ಎಂಬುದನ್ನು ಅಲ್ಲಿ ನೋಡಬಹುದು. 50% ಎಲ್ಲ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದಿದೆ. ಆರ್ಥಿಕ ವರ್ಷ ಮುಗಿಯುತ್ತಾ ಬಂತು. ಪ್ರತಿ ಇಲಾಖೆಯಲ್ಲೂ ಶೇ 43, ಶೇ. 50- ಈ ರೀತಿ ಬಳಕೆಯಾಗದೆ ಉಳಿದ ಅನುದಾನವನ್ನು ಇನ್ನು ಎರಡು ತಿಂಗಳಲ್ಲಿ ಹೇಗೆ ಬಳಕೆ ಮಾಡಿ ಜನರಿಗೆ ಸೌಲಭ್ಯ ಒದಗಿಸ್ತೀರಿ?
* ಒಂದು ಕಡೆ, ಅಭಿವೃದ್ಧಿಗೆ ನಮ್ಮಲ್ಲಿ ಹಣ ಇಲ್ಲ ಎನ್ನುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರೇ ಹೇಳುವ ಮಾತು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಹೇಳಿದ್ದಾರೆ.
* ಸಿದ್ದರಾಮಯ್ಯಗೆ ತಮ್ಮ ಸರಕಾರದಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲವೇ? ಅವರು ಭೋಜನಕೂಟದ ರಾಜಕೀಯದಲ್ಲಿ ಕಳೆದುಹೋಗಿದ್ದಾರೆಯೇ?
* ಅಂಬೇಡ್ಕರ್ ಆರಾಧನೆ ಮಾಡುತ್ತೇವೆ ಎನ್ನುವ ಈ ಸರಕಾರದಲ್ಲಿ ವಾಲ್ಮೀಕಿ ನಿಗಮದ ಹಗರಣ ನಡೆದಾಗ ಎಸ್ಸಿ/ಎಸ್ಟಿ ನಿಧಿಯಲ್ಲಿ ಏನೆಲ್ಲ ಅಕ್ರಮಗಳು ನಡೆದಿವೆ ಎನ್ನುವುದು ಇಡೀ ರಾಜ್ಯಕ್ಕೇ ಗೊತ್ತಾಗಿದೆ.
* ಅನುದಾನಗಳ ತಪ್ಪು ನಿರ್ವಹಣೆ, ದುರ್ಬಳಕೆ, ಗ್ಯಾರಂಟಿ ಯೋಜನೆಗಳಿಗೆ ಇತರ ಫಂಡ್ ಬಳಕೆಯಿಂದಲೇ ಈ ಸರಕಾರ ದಾರಿ ತಪ್ಪಿದೆ.
* ಬಾಯಿ ಮಾತಿಗೆ ಗ್ಯಾರಂಟಿ ಗ್ಯಾರಂಟಿ ಅಂದರೆ ಜನರಿಗೆ ನಿಜವಾಗಿ ಏನು ಸೌಲಭ್ಯ ಕೊಟ್ಟ ಹಾಗಾಯ್ತು. ಅದನ್ನು ಪ್ರಶ್ನೆ ಮಾಡುವುದು ಬಹಳ ಮುಖ್ಯ. ಆ ರೀತಿ ಪ್ರಶ್ನಿಸಿದಾಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದೇ ಆಯಿತು. ಇದನ್ನು ನಾವು ಸಹಿಸುವುದಿಲ್ಲ. ಇನನು ಎರಡು ತಿಂಗಳಲ್ಲಿ ಬಜೆಟ್ ಮಂಡನೆಯಾಗಲಿದೆ. ದಕ್ಷಿಣದ ರಾಜ್ಯಗಳಲ್ಲೇ ಅತ್ಯಧಿಕ ಸಾಲ ಪಡೆಯುತ್ತಿರುವ ರಾಜ್ಯ ಕರ್ನಾಟಕ ಎಂದು ವರದಿ ಬಂದಿದೆ. ಆದಾಯದ ಕೊರತೆ 12,000 ಕೋಟಿ ಎಂಬ ವರದಿ ಬಂದಿದೆ. ಬಮಡವಾಳ ವೆಚ್ಚ ಕಳೆ ಆರ್ಥಿಕ ವರ್ಷದಲ್ಲಿ ಶೇ 17ರಷ್ಟು ಕಡಿಮೆಯಾಗಿದೆ. ಕಂದಾಯ ಕೊರತೆ, ವಿತ್ತೀಯ ಕೊರತೆ ಹೆಚ್ಚಾಗುತ್ತಿದೆ. ಈ ಎಲ್ಲ ಅಂಕಿ-ಅಂಶಗಳನ್ನು ಅಧ್ಯಯನ ಮಾಡಿ, ಸಿದ್ದರಾಮಯ್ಯರ 18ನೇ ಬಜೆಟ್ ಮಂಡನೆ ವೇಳೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ, ಆಡಳಿತದ ಮೇಲೆ ಹಿಡಿತ ಕೈತಪ್ಪುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ.
*ಸತ್ಯಶೋಧನಾ ಸಮಿತಿ:*
ಬಿಜೆಪಿ ಕಳೆದ 4 ತಿಂಗಳಲ್ಲಿ ಸಾಕಷ್ಟು ಹೋರಾಟ ನಡೆಸಿದೆ. ಗುತ್ತಿಗೆದಾರರ ಆತ್ಮಹತ್ಯೆ, ಬಾಣಂತಿಯರ ಸಾವು- ಸತ್ಯಶೋಧನಾ ಸಮಿತಿ ರಚನೆ ಮಾಡಿ ಮಾಹಿತಿ ಹೊರಗೆ ಹಾಕುತ್ತೇವೆ. ಕೆಲವೇ ದಿನಗಳಲ್ಲಿ ಅಧ್ಯಯನ ವರದಿ ಬರಲಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ರಾಜ್ಯ ಸರಕಾರಕ್ಕೆ ಪ್ರಶ್ನೆ ಮಾಡಿದೆ. ಎರಡು ಸತ್ಯಶೋಧನಾ ಸಮಿತಿಗಳು ಬಿಜೆಪಿಯ ಹೋರಾಟಕ್ಕೆ ಇನ್ನಷ್ಟು ಬಲ ತುಂಬಲಿವೆ.
* ಎಟಿಎಂ ಸರಕಾರ- ದಿಲ್ಲಿ ಚುನಾವಣೆಗೆ ಈಗ ಎಷ್ಟು ಹಣ ವರ್ಗಾಯಿಸುತ್ತಾರೋ ನೋಡಬೇಕು. ತೆಲಂಗಾಣ ಚುನಾವಣೆ ವೇಳೆ ಮಾಡಿದ ಹಗರಣಗಳು ರಾಜ್ಯವನ್ನು ಬೆಚ್ಚಿಬೀಳಿಸಿವೆ.
* ಹಿಂದುಳಿದ ವರ್ಗದ ಸ್ಕಾಲರ್ಶಿಪ್ ಹಣವನ್ನೂ ನುಂಗಿಹಾಕಿದ್ದೀರಿ. ಬಿಜೆಪಿ ಸೂಕ್ಷ್ಮದರ್ಶಕ ಹಿಡಿದುಕೊಂಡು ಸರಕಾರದ ಮೇಲೆ ನಿಗಾ ಇಡುತ್ತದೆ. ಮುಂದಿನ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಈ ವಿಚಾರದ ಮೇಲೆ ಕೇಂದ್ರೀಕರಿಸಿ ಹೋರಾಟ ನಡೆಸಲಿದೆ.
* ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೇ, ನೀವು ಒಂದು ಬೆರಳನ್ನು ಕೇಂದ್ರದ ಕಡೆಗೆ ತೋರಿಸುವಾಗ ಉಳಿದ ನಾಲ್ಕು ಬೆರಳು ನಿಮ್ಮನ್ನೇ ತೋರಿಸುತ್ತವೆ. ನೀವೇನು ಮಾಡುತ್ತಿದ್ದೀರಿ.
*ಬಿಜೆಪಿ ಹೋರಾಟದ ಪರಿಣಾಮ:*
* ಬಿಜೆಪಿಯಿಂದ ಸಂಘಟಿತ ಹೋರಾಟ ನಡೆಯುತ್ತಿಲ್ಲ ಎಂಬ ಆರೋಪದ ಬಗ್ಗೆ- ಬಿಜೆಪಿ ಮೇಲೆ ಇಟ್ಟಿರುವ ಭರವಸೆ ಬಗ್ಗೆ ಖುಷಿ ಇದೆ. ಮೊಂಡು ಸರಕಾರದ ಮೇಲೆ ಪರಿಣಾಮ ಬೇಗನೆ ಆಗೋದಿಲ್ಲ.
* ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುವ ಹೋರಾಟವನ್ನಷ್ಟೇ ಅಲ್ಲ, ಕಾರ್ಯಕರ್ತರು ತಳಮಟ್ಟದಲ್ಲಿ ನಡೆಸುವ ಹೋರಾಟಗಳನ್ನು ಗಮನಿಸಬೇಕು. ಅದರ ಪರಿಣಾಮ ಸರಕಾರದ ಮೇಲೆ ಆಗುತ್ತಲೇ ಇದೆ. ಯಶಸ್ವಿ ಆಗಿಲ್ಲ ಎಂದು ಬಣ್ಣಿಸುವ ಹಾಗಿಲ್ಲ.
ಬಸ್ ದರ ಏರಿಕೆ ವಿಚಾರ ಗುಲಾಬಿ ಕೊಟ್ಟು ಹೋರಾಟ ಮಾಡಿದೆವು.
* ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತರು ಸರಕಾರದ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಂದಿದೆ. ಪಕ್ಷದ ನಾಯಕರು ಅವರನ್ನು ಭೇಟಿ ಮಾಡಿದ್ದಾರೆ.
* ಬಣ ರಾಜಕೀಯ ಜಾಸ್ತಿ- ಅನ್ನುವ ಹಾಗಿಲ್ಲ. ನಾಗೇಂದ್ರ ರಾಜೀನಾಮೆ ಕೊಟ್ಟಿದ್ದು ಸಿದ್ದರಾಮಯ್ಯ ಸೈಟ್ ವಾಪಸ್ ಕೊಟ್ಟಿದ್ದು, ಜೂನಿಯರ್ ಖರ್ಗೆ ಸಿದ್ದಾರ್ಥ ಟ್ರಸ್ಟ್ಗೆ ಅಕ್ರಮವಾಗಿ ಬಂದ ಸೈಟ್ ವಾಪಸ್ ಮಾಡಿದ್ದು- ಇವೆಲ್ಲ ಬಿಜೆಪಿ ಹೋರಾಟದ ಫಲವೇ ಆಗಿದೆ.
* 60 ಕೋಟಿ ಕೊಟ್ಟರೆ ಸೈಟ್ ವಾಪಸ್ ಕೊಡ್ತೇನೆ ಎಂದ ಸಿದ್ದರಾಮಯ್ಯ ಕೊನೆಗೆ ತಾವಾಗಿಯೇ ಸೈಟ್ ವಾಪಸ್ ಮಾಡಿದರು. ಹಾಗೆಯೇ ಜೂನಿಯರ್ ಖರ್ಗೆಯವರು- ಏನೂ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡ ನಂತರವೂ ಸೈಟ್ ವಾಪಸ್ ಕೊಟ್ಟಿದ್ದೇಕೆ? ಇದು ಬಿಜೆಪಿ ನಡೆಸಿದ ಹೋರಾಟದ ಫಲ ಅಲ್ಲವೇ?
* ಪ್ರಿಯಾಂಕ್ ಖರ್ಗೆಯವರು ನಮ್ಮ ಬಗ್ಗೆ ಕೆಟ್ಟದಾಗಿ ಬೈಯ್ಯುತ್ತಾರೆ ಅಂದರೆ ಅವರು ನಮ್ಮ ಹೋರಾಟಕ್ಕೆ ಬೆದರಿದ್ದಾರೆ ಎಂದೇ ಅರ್ಥ.
* ಇನ್ನು ಎರಡು ಮೂರು ತಿಂಗಳಲ್ಲಿ ಬಿಜೆಪಿ ಹೋರಾಟದ ಫಲ ನಿಮಗೆ ಕಾಣಲಿದೆ.
ಎಲ್ಲ ಪಕ್ಷಗಳಲ್ಲೂ ಅಭಿಪ್ರಾಯ ಭೇದ ಇರುವುದು ಸಹಜ. ಯತ್ನಾಳ್ ಅವರೂ ಹೋರಾಟ ಮಾಡಿದ್ದು ವಕ್ಫ್ ವಿಚಾರದಲ್ಲೇ ಹೊರತು, ಬಿಜೆಪಿ ನಾಯಕತ್ವದ ಬಗ್ಗೆ ಅಲ್ಲ. ಗಟ್ಟಿಯಾದ ಹೋರಾಟ ಮಾಡುವ ಸಾಮರ್ಥ್ಯ ಬಿಜೆಪಿಗಿದೆ. ಕಾರ್ಯಕರ್ತರ ಪಕ್ಷವಾದ ಬಿಜೆಪಿಗೆ ಮಾತ್ರ ಇದು ಸಾಧ್ಯ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತರರಾದ ಸತೀಶ್ ಪ್ರಭು, ರಾಜಗೋಪಾಲ್ ರೈ, ಮೋಹನ್ ರಾಜ್ ಕೆ ಆರ್, ಅರುಣ್ ಶೇಟ್, ದೊಂಬಯ ಅರಳ. ಜಿಲ್ಲಾ ಮಾಧ್ಯಮ ಸಂಚಾಲಕರಾದ ವಸಂತ್ ಜೆ ಪೂಜಾರಿ ಉಪಸ್ಥಿತರಿದ್ದರು.