4:51 PM Wednesday30 - July 2025
ಬ್ರೇಕಿಂಗ್ ನ್ಯೂಸ್
USA | ಡ್ರೈವರ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್!: ಇದು… Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ…

ಇತ್ತೀಚಿನ ಸುದ್ದಿ

ಸಿಎಂ ಪ್ರತಿಷ್ಠೆಯಿಂದ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಮಸ್ಯೆ ಉಲ್ಬಣಗೊಂಡಿದೆ: ದಿಲ್ಲಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ‌ ಆರೋಪ

12/12/2024, 20:27

*ಕೈಯಲ್ಲಿ ಸಂವಿಧಾನ ಹಿಡಿದು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ*

ಹೊಸದಿಲ್ಲಿ(reporterkarnataka.com): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಅವರ ಈ ನಡತೆಯಿಂದಲೇ ಸಮಸ್ಯೆಗಳು ಉಲ್ಬಣಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಸರ್ಕಾರಕ್ಕೆ ಈ ರೀತಿಯ ಸವಾಲುಗಳು ಎದುರಾಗುವುದು ಸಹಜ, ಸಮಾಜ ಬದಲಾದಂತೆ ಸಮುದಾಯಗಳ ಆಶೋತ್ತರಗಳು ಬದಲಾಗುತ್ತವೆ. ತಮ್ಮ ಹಕ್ಕುಗಳನ್ನು ಮೀಸಲಾತಿ ಮೂಲಕ ಕೇಳುತ್ತಾರೆ. ಇಪ್ಪತ್ತು ಮೂವತ್ತು ವರ್ಷದಿಂದ ಇದ್ದಂತಹ ಸಾಮಾಜಿಕ ವ್ಯವಸ್ಥೆ ಈಗ ಬದಲಾಗಿದೆ. ಸಾಮಾಜಿಕ, ಆರ್ಥಿಕವಾಗಿ ಸಾಕಷ್ಟು ಬದಲಾಗಿದೆ. ಹೀಗಾಗಿ ಈ ಥರದ ಬೇಡಿಕೆಗಳು ಹೆಚ್ಚಾಗುತ್ತವೆ.
ಒಂದು ಜನಪರವಾಗಿರುವ ಸಾಮಾನ್ಯ ಜ್ಞಾನ ಇರುವ ಸರ್ಕಾರ ಪ್ರಬುದ್ದತೆಯಿಂದ ತೀರ್ಮಾನ ಮಾಡಬೇಕು. ಏನೇ ಸಮಸ್ಯೆ ಇದ್ದರೂ ಮಾತುಕತೆಯಿಂದ ಸಮಸ್ಯೆ ಬಗೆ ಹರಿಸಬಹುದು ಎನ್ನುವುದನ್ನು ಈ ಸರ್ಕಾರ ಮರೆತಿದೆ ಎಂದು ಆರೋಪಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜ ಕಳೆದ ಒಂದೂವರೆ ವರ್ಷದಲ್ಲಿ ಮುಖ್ಯಮಂತ್ರಿ ಭೇಟಿಗೆ ಹಲವಾರು ಬಾರಿ ಪ್ರಯತ್ನ ಮಾಡಿದೆ, ಸಮಯ ಕೊಟ್ಟಿಲ್ಲ. ಕೊಟ್ಟ ಸಮಯದಲ್ಲಿಯೂ ಸರಿಯಾಗಿ ಸ್ಪಂದನೆ ಮಾಡಿಲ್ಲ ಎನ್ನುವ ಭಾವನೆ ಅವರ ಮನಸಲ್ಲಿ ಬಂದಿದೆ. ಅದಕ್ಕಾಗಿ ಅವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆದರೂ ಅವರನ್ನು ಕರೆದು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಕಾಲದಲ್ಲಿ ಧಾರ್ಮಿಕ ಮೀಸಲಾತಿಯನ್ಬು ತೆಗೆದು ಹಾಕಿದ್ದೇವೆ. ಹಿಂದೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಧಾರ್ಮಿಕ ಮೀಸಲಾತಿ ನೀಡಿರುವುದನ್ನು ತಿರಸ್ಕಾರ ಮಾಡಿವೆ. ಮೊನ್ನೆ ಪಶ್ಚಿಮ ಬಂಗಾಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಧಾರ್ಮಿಕ ಆಧಾರದಲ್ಲಿ ಮೀಸಲಾತಿ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದೆ. ಹೀಗಿರುವಾಗ ಅದನ್ನು ತೆಗೆದು ಬೇಡಿಕೆ ಇರುವ ಸಮುದಾಗಳಿಗೆ ನೀಡಿದ್ದೇವೆ. ಪಂಚಮಸಾಲಿ ಸಮುದಾಯದಲ್ಲಿಯೂ ಬಡವರಿದ್ದಾರೆ, ರೈತಾಪಿ ವರ್ಗದ ಜನರಿದ್ದಾರೆ. ರೈತರು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಒಂದು ಸಾರಿ ಪ್ರವಾಹ, ಮತ್ತೊಂದು ಸಾರಿ ಬರಗಾಲ ಬರುತ್ತದೆ. ಹೀಗಾಗಿ ಅವರ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಸಂದರ್ಭದಲ್ಲಿ ಈ ಬೇಡಿಕೆ ಬರುವುದು ಸಹಜ. ಹೀಗಾಗಿ ನಾವು ಅದನ್ನು 2ಸಿ, ಮತ್ತು 2ಡಿ ಗೆ ವಿಂಗಡಣೆ ಮಾಡಿದ್ದೇವು. ಆದರೆ, ಕಾಂಗ್ರೆಸ್ ಪಕ್ಷದ ಕೆಲವು ಬೆಂಬಲಿಗರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಅಲ್ಲಿ ಕೂಡ ನಾವು ಪೂರ್ಣ ಪ್ರಮಾಣದ ವಾದ ಮಾಡಲು ಅವಕಾಶ ಕೇಳಿದ್ದೇವು, ಆಗ ಸುಪ್ರೀಂ ಕೋರ್ಟ್ ಅಲ್ಲಿಯವರೆಗೂ ಯಾವುದೇ ಆದೇಶ ಜಾರಿ ಮಾಡಬೇಡಿ ಅಂತ ಹೇಳಿತು. ನಾವು ಮುಂದಿನ ವಿಚಾರಣೆವರೆಗೂ ಯಾವುದೇ ಆದೇಶ ಜಾರಿ ಮಾಡುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೇವೆ‌. ಆಗ ನಾವು ಅಧಿಕಾರದಲ್ಲಿ ಇದ್ದರೂ ಇದೆಲ್ಲ ಚುನಾವಣೆ ನೀತಿ ಸಂಹಿತೆ ಬಂದ ಮೇಲೆ ಆಗಿರುವುದು. 2023 ರ ಜೂನ್ ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋರ್ಟ್ ಗೆ ಹಾಜರಾಗಿಲ್ಲ. ತಮ್ಮ ವಾದ ಮಂಡಿಸಿಲ್ಲ, ನಮ್ಮ ಆದೇಶಕ್ಕೆ ಬೆಂಬಲ ಕೊಟ್ಟಿಲ್ಲ. ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಈಗಲಾದರೂ ಸಮರ್ಥವಾಗಿ ವಾದ ಮಾಡಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

*ಮೀಸಲಾತಿ ರಾಷ್ಟ್ರದ ವಿಚಾರ:* ಯಾರಿಗೂ ಅನ್ಯಾಯ ಆಗದಂತೆ ಒಂದು ಸಮಾಜಕ್ಕೆ ನ್ಯಾಯ ಕೊಡಿಸಲು ಸಾಧ್ಯವಾದರೆ ಮಾಡಬೇಕು. ಇದು ಇಡೀ ರಾಷ್ಟ್ರದ ವಿಚಾರವಾಗಿದೆ. ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳಲ್ಲಿ ಗುಜ್ಜರು, ಮರಾಠರು, ಜಾಟರು ಹೀಗೆ ಹಲವಾರು ಸಮುದಾಯಗಳ ಬೇಡಿಕೆ ಇದೆ. ಮುಂದೊಂದು ದಿನ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿ ಇದಕ್ಕೊಂದು ಪರಿಹಾರ ಸಿಗುತ್ತದೆ. ಯಾರಿಗೂ ತೊಂದರೆ ಆಗದಂತೆ ನಾವು ಮಾಡಿದ ಆದೇಶವನ್ನು ಜಾರಿ ಮಾಡಲು ಇವರಿಗೆ ಏನು ತೊಂದರೆ ಎಂದು ಪ್ರಸ್ನಿಸಿದರು. ಆದರೆ, ಇವರಿಗೆ ಮನಸಿಲ್ಲ, ಹೀಗಾಗಿ ಸ್ವಾಮೀಜಿ ಮೇಲೆ, ಸಮುದಾಯದ ಮೇಲೆ ದ್ವೇಷ ಕಾರುತ್ತಿದ್ದಾರೆ. ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿ, ರಕ್ತ ಸುರಿಸಿದ್ದಾರೆ. ಬಹಳ ದೊಡ್ಡ ಪ್ರಮಾಣದ ನೋವುಗಳಾಗಿವೆ. ಹೀಗಾಗಿ ಸಮುದಾಯ ಆಕ್ರೋಶಗೊಂಡಿದೆ. ಇದು ಪ್ರಜಾಪ್ರಭುತ್ವದ ನಡೆಯಲ್ಲ, ಮುಖ್ಯಮಂತ್ರಿ ಹಾಗೂ ಸಚಿವರು ಸಂವಿಧಾನ ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಾರೆ, ಆದರೆ, ಎಲ್ಲವೂ ಸಂವಿಧಾನ ವಿರೋಧಿ ಕೆಲಸ ಮಾಡುತ್ತಾರೆ. ಇದು ದಮನಕಾರಿ ನೀತಿಯಾಗಿದ್ದು, ಸರ್ವಾಧಿಕಾರಿ ಸರ್ಕಾರ ಇದಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಲಾಠಿ ಚಾರ್ಜ್ ಮಾಡಿರುವ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ಹಾಗೂ ಹೋರಾಟಗಾರರನ್ನು ಕರೆದು ಶಾಂತ ರೀತಿಯಿಂದ ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕು ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಸಚಿವರು ಶಾಸಕರ ಜೊತೆ ಚರ್ಚಿಸಿ ಹೋರಾಟಗಾರರ ಜೊತೆಗೆ ಮುಖ್ಯಮಂತ್ರಿಗಳು ನೇರವಾಗಿ ಮಾತನಾಡಿದರೆ ಯಾರೂ ಇಲ್ಲ ಎನ್ನುವುದಿಲ್ಲ. ಎಲ್ಲದಕ್ಕೂ ಮುಖ್ಯಮಂತ್ರಿಗಳು ಪ್ರತಿಷ್ಠೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಅವರ ಈ ನಡತೆಯಿಂದಲೇ ಸಮಸ್ಯೆಗಳು ಉಲ್ಬಣಗೊಂಡಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು