ಇತ್ತೀಚಿನ ಸುದ್ದಿ
CM | ಮೈಸೂರು ವಿವಿಯಲ್ಲಿ ಸಂವಿಧಾನ ಪೀಠ, ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಂ ಸ್ಥಾಪನೆ: ಮುಖ್ಯಮಂತ್ರಿ ಘೋಷಣೆ
14/04/2025, 19:30

ಬೆಂಗಳೂರು(reporterkarnataka.com): ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಮತ್ತು ಬೆಂಗಳೂರಿನಲ್ಲೂ ಆಂಧ್ರಪ್ರದೇಶದ ಮಾದರಿಯನ್ನೂ ಮೀರಿದ ಅಂಬೇಡ್ಕರ್ ಮ್ಯೂಸಿಯಂ ಮತ್ತು ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುವುದರ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನದ ಆಶಯ ಈಡೇರಬೇಕಾದರೆ ಅಸಮಾನತೆ, ಅಸ್ಪøಶ್ಯತೆ ಅಳಿಯಬೇಕು. ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರುವುದಿಲ್ಲ, ಅಸ್ಪೃಶ್ಯತೆ ಅಳಿಯುವುದಿಲ್ಲ ಎಂದು ತಿಳಿಸಿದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಒಬ್ಬ ವ್ಯಕ್ತಿ ಇಡೀ ದೇಶದ ಶಿಕ್ಷಣ ವಂಚಿತ ನೂರಾರು ಜಾತಿ ಸಮುದಾಯಗಳಿಗೆ ಶಿಕ್ಷಣ ಸಿಗಲು ಕಾರಣಕರ್ತರಾದರು. ಯಾವುದೇ ಜಾತಿ ಸಮುದಾಯವು ಸಹ ಶಿಕ್ಷಣದಿಂದ ವಂಚಿತರಾಗಬಾರದು, ಅವಕಾಶಗಳಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರವು ಸಂವಿಧಾನದಲ್ಲಿ ಹೇಳಿದಂತೆ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಜಾತಿ ವ್ಯವಸ್ಥೆ ನಿವಾರಣೆಯಾಗದ ಹೊರತು ಸಮಾನತೆ ಸಾಧ್ಯವಿಲ್ಲ*:
ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ ಸಮಾನತೆಯನ್ನು ತರಲು ಸಾಧ್ಯವಾಗುವುದಿಲ್ಲ. ಅಸ್ಪøಶ್ಯತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಎಂದು ಹೇಳಿದ ಮುಖ್ಯಮಂತ್ರಿಗಳು ಸಂವಿಧಾನ ಜಾರಿಯಾದ ದಿನ 1950 ಜನವರಿ 26 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತನ್ನು ಹೇಳಿದ್ದರು, ನಾವು ಇಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕತೆಯ ಅಸಮಾನತೆ ಇರುವಂತಹ ವೈರುದ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಅದರಂತೆ ಇಂದು ನಾವು ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಂದಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ, ಅಸ್ಪøಶ್ಯತೆಯನ್ನು ನಿವಾರಣೆ ಮಾಡಲು ಸಾಧ್ಯವಾಗಲಿಲ್ಲ. ಅಸಮಾನತೆ ಮತ್ತು ಅಸ್ಪøಶ್ಯತೆ ತೊಡೆದು ಹಾಕಿದಲ್ಲಿ ಮಾತ್ರ ಸ್ವಾತಂತ್ರ್ಯಕ್ಕೆ ನಿಜ ಸ್ವರೂಪದ ಅರ್ಥ ಸಿಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು, ಇದರ ಜಾರಿಯನ್ನು ವಿರೋಧಿಸಿದ್ದವರೇ ಇವರು. ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಪತ್ರ ಬರೆದಿದ್ದಾರೆ, ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಮನುವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
*ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾಯ್ದೆ ಜಾರಿ – ಕರ್ನಾಟಕ ಮೊದಲು*:
ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತಂದ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಮೊದಲು ಅದರಲ್ಲೂ ನಮ್ಮ ಕಾಂಗ್ರೇಸ್ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ಹೊರತುಪಡಿಸಿ ಈ ಕಾಯ್ದೆ ಬೇರೆ ಯಾವುದೇ ರಾಜ್ಯದಲ್ಲಿ ಜಾರಿ ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಯವ್ಯಯದ ಗಾತ್ರ ಹೆಚ್ಚಾದಂತೆಲ್ಲ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯ ಅನುದಾನವು ಹೆಚ್ಚಾಗಬೇಕು. ಕಳೆದ ವರ್ಷ ನಮ್ಮ ಸರ್ಕಾರ ಆಯವ್ಯಯದಲ್ಲಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ರೂ 32 ಸಾವಿರ ಕೋಟಿಗಳನ್ನು ಮೀಲಿಟ್ಟಿತ್ತು. ಈ ವರ್ಷ ಆಯವ್ಯಯದಲ್ಲಿ ರೂ 42 ಸಾವಿರದ 18 ಕೋಟಿಗಳನ್ನು ಮೀಸಲಿಟ್ಟಿದ್ದೇವೆ. ಆದರೆ ವಿರೋಧ ಪಕ್ಷದವರ ಆಡಳಿತಾವಧಿಯಲ್ಲಿ ಕೇವಲ 8 ಸಾವಿರದ 300 ಕೋಟಿಗಳನ್ನು ಮೀಸಲಿಟ್ಟಿತ್ತು ಎಂದು ತಿಳಿಸಿದರು.
*ಬಡ್ತಿಯಲ್ಲಿ ಮೀಸಲಾತಿ*:
ಈ ಹಿಂದೆ ನಮ್ಮ ಕಾಂಗ್ರೇಸ್ ಸರ್ಕಾರದ ಆಡಳಿತಾವಧಿಯಲ್ಲಿ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರತ್ನಪ್ರಭ, ಮುಖ್ಯಕಾರ್ಯದರ್ಶಿಗಳು ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಈ ಸಂಬಂಧ ಸುಪ್ರಿಂಕೋರ್ಟ್‍ನಲ್ಲಿಯೂ ಸಹ ಹೋರಾಟ ಮಾಡಿ ಅಲ್ಲಿಯೂ ಜಯ ಸಾಧಿಸಲಾಯಿತು. ಅದೇ ರೀತಿ ಕಾಮಗಾರಿ ಗುತ್ತಿಗೆ ನೀಡುವಲ್ಲಿಯೂ ಸಹ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ನುಡಿದರು.
ಸಮಾಜದಲ್ಲಿ ಸಮಾನತೆಯ ಶಕ್ತಿ ಇಲ್ಲದಂತವರಿಗೆ ಶಕ್ತಿ ತುಂಬಿ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಅವಕಾಶ ವಂಚಿತರಿಗೆ, ನ್ಯಾಯ ಸಿಗದವರಿಗೆ ನ್ಯಾಯವನ್ನು ಒದಗಿಸುವುದೇ ನಮ್ಮ ಸರ್ಕಾರದ ಗುರಿ. ಅಂಬೇಡ್ಕರ್ ಅವರ ಆಶಯಗಳ ಜಾರಿಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಚೇತರಿಕೆಯಾಗಿದೆ ಎಂದು ತಿಳಿಸಿದರು.
ವಿದ್ಯಾವಂತರೇ ಹೆಚ್ಚು ಜಾತಿವಾದಿಗಳಾಗುತ್ತಿರುವುದು ಸರಿಯಲ್ಲ. ಶಿಕ್ಷಣದ ಉದ್ದೇಶ ಜಾತಿವಾದಿಗಳಾಗುವುದಲ್ಲ. ಅವಕಾಶ ವಂಚಿತರ ವಿರುದ್ದ ಹೋರಾಟ ಮಾಡಿ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಸಾಮಾಜಿಕವಾಗಿ ಅವರಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕು. “ಎಲ್ಲರೂ ವಿದ್ಯಾವಂತರಾಗಿ, ಎಲ್ಲರೂ ಸಂಘಟನೆ ಮಾಡಿ, ಎಲ್ಲಾರೂ ಹೋರಾಟ ಮಾಡಿ” ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಅವರ ಆಶಯದಂತೆ ಎಲ್ಲಾರೂ ಸಾಗಬೇಕು ಎಂದು ಕರೆ ನೀಡಿದರು.
ನೆಲ್ಸನ್ ಮಂಡೇಲ ಅವರು ನಾನು ಸಂವಿಧಾನ ಬರೆಯಲು ಸ್ಪೂರ್ತಿ ಭಾರತದ ಸಂವಿಧಾನ (Indian Constitution) ಎಂದು ಹೇಳಿದ್ದಾರೆ. ಅಂತಹ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಟ್ಟ ಮಹಾನ್ ಚೇತನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಆಶಯದಂತೆ ನಾವು ಅವರು ರೂಪಿಸಿ ಕೊಟ್ಟಿರುವ ಸಂವಿಧಾನದಂತೆ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ತಿಳಿಸಿದರು.
ಸಾರಾಯಿ ಬೇಡ, ಶಾಲೆ ಬೇಕು ಎನ್ನುವುದು ದಲಿತ ಸಂಘರ್ಷ ಸಮಿತಿ ಹೋರಾಟದ ಘೋಷಣೆಯಾಗಿತ್ತು. ನಾನು ಉಪಮುಖ್ಯಮಂತ್ರಿ ಆದ ತಕ್ಷಣ ತಾಲ್ಲೂಕು ಮಟ್ಟದಲ್ಲಿ ವಸತಿ ಶಾಲೆ ಆರಂಭಿಸಿದೆ. ಮುಂದಿನ ಆರ್ಥಿಕ ವರ್ಷದ ಕೊನೆಯ ವೇಳೆಗೆ ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ತೆರೆಯಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
*ಎಲ್ಲಾ ಜಿಲ್ಲೆಗಳಲ್ಲೂ ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳ ಸ್ಥಾಪನೆ*:
ಎಲ್ಲರಿಗೂ ಸಮಾನ ರೀತಿಯಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾಗರೀಕ ಹಕ್ಕು ಜಾರಿ ನಿರ್ದೇಶನ ಪೊಲೀಸ್ ಠಾಣೆಗಳನ್ನು (ಡಿ.ಸಿ.ಆರ್.ಇ) ಉದ್ಘಾಟನೆ ಮಾಡಲಾಗಿದೆ. ಇಂದಿನಿಂದ 32 ಜಿಲ್ಲೆಗಳಲ್ಲಿ ಒಟ್ಟು 33 ಡಿ.ಸಿ.ಆರ್.ಇ ಪೆÇಲೀಸ್ ಠಾಣೆಗಳು ಕಾರ್ಯಾರಂಭ ಮಾಡಲಿವೆ. ಸಾಂಕೇತಿಕವಾಗಿ ಒಂದು ಕೇಂದ್ರ ಡಿ.ಸಿ.ಆರ್.ಇ ಠಾಣೆಯನ್ನು ಉದ್ಘಾಟಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಸಂವಿಧಾನವೇ ನಮ್ಮ ತಂದೆ-ತಾಯಿ:ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:*
ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ ಎಂದು ತಿಳಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆತ್ಮ ನೀಡಿದ ಪರಮಾತ್ಮನಿಗೆ ಇಂದು ಗೌರವ ಸಲ್ಲಿಸುವ ಭಾಗ್ಯ ನಮ್ಮದು. ನಾವು ಅಂಬೇಡ್ಕರ್ ಅವರ ಪ್ರತಿಮೆಗೆ ಪೂಜೆ ಮಾಡುತ್ತಿಲ್ಲ, ಅವರ ಪ್ರತಿಭೆಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಯಾವುದೇ ಒಂದು ಸಮಾಜಕ್ಕೆ, ಒಂದು ಧರ್ಮ- ಜಾತಿಯ ಜನಕ್ಕಾಗಿ ಅಲ್ಲ, ಭಾರತದ ಪ್ರತಿಯೊಬ್ಬ ಪ್ರಜೆಯ ಆಚಾರ- ವಿಚಾರಗಳಿಗೆ ರಕ್ಷಣೆ ಕೊಟ್ಟು ಅವರ ಬದುಕು ರೂಪಿಸಿದವರು ಅಂಬೇಡ್ಕರ್. ಜೀವ ಇದ್ದರೆ ಜೀವನ, ಆ ಜೀವಕ್ಕೆ ಸಂವಿಧಾನವೆಂಬ ಉಸಿರು ನೀಡಿದವರು ಅಂಬೇಡ್ಕರ್ ಎಂದರು.
ಮುಂದಿನ ಜನಾಂಗಕ್ಕೆ ಏನು ಕೊಡುಗೆ ನೀಡಿ ಹೋಗುತ್ತೇವೋ ಗೊತ್ತಿಲ್ಲ, ಆದರೆ ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಷ್ಟು ಜ್ಞಾನವನ್ನು ಜನರಿಗೆ ಕೊಟ್ಟು ಹೋದರೆ ಅದೇ ನಮ್ಮ ಸಾರ್ಥಕತೆ ಎಂದರು.
ಇಡೀ ನಮ್ಮ ಸರ್ಕಾರ ಅಂಬೇಡ್ಕರರ ವಿಚಾರಧಾರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದೆ. ದೇಶದ ಉದ್ದಗಲಕ್ಕೂ ಯಾರದ್ದಾದರೂ ಪುತ್ಥಳಿ ಇದ್ದರೆ ಅದು ಅಂಬೇಡ್ಕರ್ ಅವರದ್ದು ಮಾತ್ರ. ಅವರು ನೀಡಿದ ಸಂವಿಧಾನ ರಕ್ಷಣೆಗೆ ಬದ್ಧರಾಗೋಣ, ಅದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ತಿಳಿಸಿದರು.
ಸಂವಿಧಾನ ಜಾರಿಯಾಗಿ 75 ವರ್ಷಗಳು ಪೂರ್ಣಗೊಂಡಿದ್ದರೂ ಸಹ ಸಮಾಜದಲ್ಲಿ ಜಾತೀಯತೆ ಕಡಿಮೆಯಾಗಿಲ್ಲ – ಸಚಿವ ಹೆಚ್.ಸಿ. ಮಹದೇವಪ್ಪ
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಹೆಚ್.ಸಿ.ಮಹದೇವಪ್ಪ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಸರ್ಕಾರದ ಉದ್ದೇಶವಾಗಿದೆ. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಬೆಳಗಾವಿಯಲ್ಲಿ ಜೈಬಾಪು, ಜೈಭೀಮ್ ಹಾಗೂ ಜೈಸಂವಿಧಾನ ಘೋಷಣೆಗಳನ್ನು ಕೂಗುವ ಮೂಲಕ ಮತ್ತೊಮ್ಮೆ ಸ್ವಾತಂತ್ರ್ಯದ ಉದ್ದೇಶವನ್ನು ಸಾರಲಾಗಿದೆ. ಪರಿಶ್ರಮ, ಹೋರಾಟ, ಆಳ ಅಧ್ಯಯನದ ಮೂಲಕ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಟ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳು ಪೂರ್ಣಗೊಂಡಿದ್ದರೂ ಸಹ ಸಮಾಜದಲ್ಲಿ ಜಾತೀಯತೆ, ಧರ್ಮ ಆಧಾರಿತ ಹೋರಾಟಗಳು, ದ್ವೇಷಪೂರಿತ ನಡವಳಿಕೆಗಳು ಸಾರ್ವಭೌಮತ್ವವನ್ನು ಅಪಾಯಕ್ಕೆ ಸಿಲುಕಿಸಿದೆ. ಪ್ರಜಾಪ್ರಭುತ್ವವನ್ನು ಅರ್ಥೈಸದೇ ಹೋದರೆ ಸಮಾಜದ ಬದಲಾವಣೆ ಸಾಧ್ಯವಿಲ್ಲ ಎಂದರು.
ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಓದಲು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ನಿರರ್ಗಳವಾಗಿ ಓದುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು 25 ಲಕ್ಷ ಜನರು ಸೇರಿ 2500 ಕಿಲೋಮೀಟರ್ ಮಾನವ ಸರಪಳಿ ನಿರ್ಮಿಸುವ ಮೂಲಕ ವಿಶ್ವದಾಖಲೆ ಮಾಡಲಾಗಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಸಫಲ ಮಾಡುವಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾನತೆಯ ಸಮಸಮಾಜ ನಿರ್ಮಾಣಕ್ಕೆ ಕಂಠಕಪ್ರಾಯವಾಗಿದ್ದನ್ನು ಮನಗಂಡ ಮುಖ್ಯಮಂತ್ರಿಗಳು 5 ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದಾರೆ. ಯುವ ಜನರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಗ್ಯಾರೆಂಟಿ ಯೋಜನೆಗಳ ಮೂಲಕ ಪೂರಕ ವಾತಾವರಣ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಧರ್ಮಾಧಾರಿತ ನಡವಳಿಕೆಗಳು, ಜನರ ವೈವಿಧ್ಯತೆ, ಸಾಂಸ್ಕøತಿಕ ನಡವಳಿಕೆಗಳನ್ನು ನಾಶ ಮಾಡುವ ಪ್ರವೃತ್ತಿಗಳು ಇಂದಿಗೂ ನಡೆಯುತ್ತಿವೆ. ಹಾಗಾಗಿ ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ಮುಂಚೂಣಿಯಲ್ಲಿರಬೇಕು. ಸಮುದಾಯಗಳು ಜಾಗೃತರಾಗಬೇಕು. ದಲಿತರು, ಅಸ್ಪøಶ್ಯರು ದಬ್ಬಾಳಿಕೆಗೆ ಒಳಗಾಗುವುದನ್ನು ರಕ್ಷಿಸಲು ನಾಗರಿಕ ಹಕ್ಕು ಪಡೆಯನ್ನು ಸ್ಥಾಪಿಸಿದ್ದು, ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಸಮೃದ್ಧ ಭಾರತ ಕನಸನ್ನು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
*ಕಟ್ಟಕಡೆಯ ವ್ಯಕ್ತಿಯ ರಕ್ಷಣೆಗಾಗಿ ಸಂವಿಧಾನ – ಸಚಿವ ಕೆ.ಹೆಚ್. ಮುನಿಯಪ್ಪ*
ಸಂವಿಧಾನ ಒಂದು ಜಾತಿ, ಒಂದು ವರ್ಗಕ್ಕೆ ಸಂಬಂಧಿಸಿದ್ದಲ್ಲ. 140 ಕೋಟಿ ಜನತೆಯ, ಕಟ್ಟಕಡೆಯ ವ್ಯಕ್ತಿಯ ರಕ್ಷಣೆಗಾಗಿ ಸಂವಿಧಾನವನ್ನು ರೂಪಿಸಲಾಗಿದ್ದು, ಅಂತಹ ಸಂವಿಧಾನವನ್ನು ದೇಶಕ್ಕೆ ಕೊಟ್ಟಂತಹ ಮಹಾನ್ ಚೇತನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಿಆರ್.ಅಂಬೇಡ್ಕರ್ ರವರ ಜಯಂತಿಯನ್ನು ಅದ್ದೂರಿಯಾಗಿ ಅಚರಣೆ ಮಾಡಿದ್ದು ಅಧಿಕಾರಿಗಳು ಅತ್ಯುತ್ತಮವಾಗಿ ಶ್ರಮವಹಿಸಿ ಮಾಡಿದ್ದಾರೆ.
ಜವಹಾರ್ ಲಾಲ್ ನೆಹರು ಅವರು ಮಹಾತ್ಮ ಗಾಂಧೀಜಿ ಅವರೊಡನೆ ಚರ್ಚಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ಅಂಬೇಡ್ಕರ್ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಸಂವಿಧಾನವನ್ನು ರಚನೆ ಮಾಡಿ ಈ ದೇಶಕ್ಕೆ ಅದ್ಬುತವಾದ ಸಂವಿಧಾನ ನೀಡಿದ್ದಾರೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದರು.
ನಮ್ಮ ದೇಶದ ಈ ಸಂವಿಧಾನ ಇತರೆ ದೇಶಗಳಿಗಿಂತ ವಿಶೇಷ ಹಾಗೂ ವಿಭಿನ್ನವಾಗಿದೆ. ಅಂಬೇಡ್ಕರ್ ರವರ ಜಯಂತೋತ್ಸವವನ್ನು ದೇಶವಲ್ಲದೆ ಪ್ರಪಂಚದಾದ್ಯಂತ ಆಚರಣೆ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಸಮುದಾಯಕ್ಕೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅಡಿ ಸುಮಾರು 42 ಸಾವಿರ ಕೋಟಿರೂಗಳನ್ನು ಮೀಸಲಿಟ್ಟಿದ್ದು ಈ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ನಿಗಮಗಳ ವತಿಯಿಂದ ವಿವಿಧ ಯೋಜನೆಗಳ ಮತ್ತು ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರ ಅಭಿವೃದ್ಧಿ ಇನ್ನೂ ಸಾಲದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ನಿಗಮದ ಯೋಜನೆಗಳಲ್ಲಿ ಬದಲಾವಣೆ ಮಾಡಬೇಕು ಮತ್ತು ಇನ್ನೂ ವಿಶೇಷವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ಈ ಸಮುದಾಯದ ಅಭಿವೃದ್ಧಿಗೆ ಸಚಿವರು ಅಧಿಕಾರಿಗಳ ಮೂಲಕ ಇನ್ನಷ್ಟು ಹೆಚ್ಚು ಒತ್ತು ನೀಡಬೇಕು ಎಂದರು.
ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಆಶ್ರಮ ಶಾಲೆಗಳು ಮತ್ತು ಮೊರಾರ್ಜಿ ವಸತಿ ಶಾಲೆಗಳನ್ನು ನಡೆಸುತ್ತಿದ್ದು ಇದು ಹೋಬಳಿ ಮಟ್ಟದಲ್ಲಿ ನಡೆಯುತ್ತಿವೆ. ಆದರೆ ಈ ವಸತಿ ಶಾಲೆಗಳನ್ನು ಪಂಚಾಯತಿ ಮಟ್ಟಕ್ಕೆ ವಿಸ್ತರಿಸಿದಾಗ ಮಕ್ಕಳ ಕಲಿಕೆಗೆ ಇನ್ನಷ್ಟು ಒತ್ತನ್ನು ನೀಡಲು ಸಾಧ್ಯವಾಗುತ್ತದೆ ಇದನ್ನು ಸಚಿವರು ಮಾಡುವುದಕ್ಕೆ ಕ್ರಮ ವಹಿಸಬೇಕು ಎಂದರು.
ಈ ಸಮುದಾಯದ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಗುತ್ತಿಗೆಯಲ್ಲಿ ಒಂದು ಕೋಟಿ ರೂಗಳವರೆಗೂ ಯಾವುದೇ ಟಂಡರ್ ರಹಿತವಾಗಿ ಮೀಸಲಿಟ್ಟಿದ್ದಾರೆ ಇದು ಈ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಲಿದೆ. ನಮ್ಮ ಸರ್ಕಾರ ಬಡವರ, ರೈತರ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಪರವಾದ ಆಡಳಿತ ನೀಡುತ್ತಿದ್ದು ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದರು.
*ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭವ್ಯ ಭಾರತದ ಬೆಳಕು : ಶಾಸಕ ರಿಜ್ವಾನ್ ಅರ್ಷದ್*
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು, ಅಂಬೇಡ್ಕರ್ ರವರು ಕೇವಲ ಹೆಸರು ಮಾತ್ರವಲ್ಲ, ಅವರು ಭವ್ಯ ಭಾರತದ ಬೆಳಕು ಎಂದು ಬಣ್ಣಿಸಿದರು. ವಿವಿಧ ರೀತಿಯಲ್ಲಿ ಶೋಷಣೆಗೆ ಒಳಗಾದವವರಿಗೆ ನ್ಯಾಯ ಮತ್ತು ಸಮಾನತೆಯನ್ನು ಒದಗಿಸಿದ ಮಹಾನಾಯಕ. ಶೇಕಡ 80 ರಷ್ಟು ಸಮುದಾಯದವರಿಗೆ ಸಾಮಾಜಿಕವಾಗಿ ನ್ಯಾಯ ಮತ್ತು ಸಮಾನತೆ ಗೌರವ ದೊರೆತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಎಂದು ಹೇಳಿದರು.
ಅಲ್ಪಸಂಖ್ಯಾತರ ಏಳಿಗೆಗಾಗಿ 4000 ಸಾವಿರ ಕೋಟಿ ರೂಪಾಯಿಯನ್ನು 2025-26 ನೇ ಸಾಲಿನಲ್ಲಿ ಅನುದಾನವನ್ನು ನೀಡಲಾಗಿದೆ. ಈ ಸರ್ಕಾರ ಎಲ್ಲಾ ವರ್ಗದವರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಈ ದಿನವನ್ನು ಸ್ವಾಭಿಮಾನ ದಿನವೆಂದು ಆಚರಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕøತರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
*ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು*:
ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ 2023ನೇ ಸಾಲಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಮೈಸೂರಿನ ಹರಿಹರಾ ನಂದ ಸ್ವಾಮಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಂಗಳೂರಿನ ಇಂದೂಧರ ಹೊನ್ನಾಪುರ, ಆಡಳಿತ ಕ್ಷೇತ್ರದಲ್ಲಿ ದಾವಣಗೆರೆಯ ರುದ್ರಪ್ಪ ಹನಗವಾಡಿ, ದೇವದಾಸಿ ವಿಮೋಚನೆ ಕ್ಷೇತ್ರದಲ್ಲಿ ಬೆಳಗಾವಿಯ ಸೀತವ್ವ ಜೋಡಟ್ಟಿ ಹಾಗೂ ಸಮಾಜ ಸೇವೆ, ರಾಜಕೀಯ ಕ್ಷೇತ್ರದಿಂದ ಬೀದರ್‍ನ ಕೆ.ಪುಂಡಲೀಕರಾವ್ ಶೆಟ್ಟಿಬಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
2024ನೇ ಸಾಲಿಗೆ ಹೋರಾಟ ಕ್ಷೇತ್ರದಿಂದ ಬೆಂಗಳೂರಿನ ಶ್ರೀಧರ ಕಲಿವೀರ, ಸಮಾಜ ಸೇವೆ, ರಾಜಕೀಯ ಕ್ಷೇತ್ರದಿಂದ ಮಂಡ್ಯದ ಮಲ್ಲಾಜಮ್ಮ, ಪತ್ರಿಕೋದ್ಯಮ ಕ್ಷೇತ್ರದಿಂದ ಬೆಂಗಳೂರಿನ ರಾಮದೇವರ ರಾಕೆ, ಸಾಹಿತ್ಯ/ಸಮಾಜ ಕ್ಷೇತ್ರದಿಂದ ಬೆಳಗಾವಿಯ ವೈ.ಬಿ.ಹಿಮ್ಮಡಿ ಹಾಗೂ ಸಾಹತ್ಯ/ಸಂಘಟನೆ ಕ್ಷೇತ್ರದಿಂದ ಕೋಲಾರದ ಲಕ್ಷ್ಮೀಪತಿ ಕೋಲಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
2025ನೇ ಸಾಲಿಗೆ ಪ್ರಕಾಶನ ಕ್ಷೇತ್ರದಿಂದ ಕಲಬುರುಗಿಯ ದತ್ತಾತ್ರೇಯ ಇಕ್ಕಳಗಿ, ಹೋರಾಟ ಕ್ಷೇತ್ರದಿಂದ ಬೆಂಗಳೂರಿನ ಮಾವಳ್ಳಿ ಶಂಕರ್ ಹಾಗೂ ಧಾರವಾಡದ ಎಫ್.ಹೆಚ್.ಜಕ್ಕಪ್ಪನವರ್, ಜನಪದ ಕಲೆ ಕ್ಷೇತ್ರದಿಂದ ಚಾಮರಾಜನಗರದ ಹೊನ್ನೂರು ಗೌರಮ್ಮ ಹಾಗೂ ದಲಿತ ಹೋರಾಟ ಕ್ಷೇತ್ರÀದಿಂದ ಈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ರಾಧಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹಮ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಡಾ. ಕೆ. ಗೋವಿಂದರಾಜು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಬಂಡಾರಿ, ಮಾಜಿ ಸಚಿವರಾದ ಹೆಚ್. ಆಂಜನೇಯ, ಚಿತ್ರದುರ್ಗ ಲೋಕಸಭಾ ಮಾಜಿ ಸಂಸದ ಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಆರ್. ಸಂಪತ್ ರಾಜ್, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಸ್. ಮಂಜುನಾಥ್, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್. ಎಸ್., ಕರ್ನಾಟಕ ಅಲೆಮಾರಿ / ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ. ರಾಕೇಶ್ ಕುಮಾರ್ ಕೆ ಸೇರಿದಂತೆ ಶಾಸಕರು, ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.