ಇತ್ತೀಚಿನ ಸುದ್ದಿ
ಚಂದ್ರನಿಗೆ ಅಪ್ಪಳಿಸಲಿದೆ ಸ್ಪೇಸ್‍ಎಕ್ಸ್ ರಾಕೆಟ್: ಖಗೋಳ ಶಾಸ್ತ್ರಜ್ಞರು ಹೇಳುವುದೇನು?
27/01/2022, 23:10
ವಾಷಿಂಗ್ಟನ್(reporterkarnataka.com): ಏಳು ವರ್ಷಗಳ ಹಿಂದೆ ಉಡಾವಣೆಯಾದ ಸ್ಪೇಸ್‍ಎಕ್ಸ್ ರಾಕೆಟ್ ಮಾರ್ಚ್ ತಿಂಗಳಿನಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಫೆಬ್ರವರಿ 2015 ರಲ್ಲಿ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿ ಉಡಾವಣೆಯಾದ ಫಾಲ್ಕನ್ 9 ಬೂಸ್ಟರ್ ರಾಕೆಟ್ ಇಂಧನ ಖಾಲಿಯಾಗಿ ಕಕ್ಷೆಯಲ್ಲಿ ಅಸ್ತವ್ಯಸ್ತವಾಗಿ ಸುತ್ತುತ್ತಿದೆ.
ಈಗ ನಾಲ್ಕು ಟನ್ ತೂಕದ ಸೆಕೆಂಡ್‍ಗೆ 2.58 ಕಿ.ಮೀ ವೇಗದಲ್ಲಿ ಸಂಚರಿಸುವ ರಾಕೆಟ್ ಚಂದ್ರನನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಖಗೋಳವಿಜ್ಞಾನಿ ಬಿಲ್ ಗ್ರೇ ಈ ರಾಕೆಟ್ ಪಥವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ರಾಕೆಟ್ ವೀಕ್ಷಿಸುತ್ತಿರುವ ಖಗೋಳಶಾಸ್ತ್ರಜ್ಞರು ಡೇಟಾವನ್ನು ಸಂಗ್ರಹಿಸುತ್ತಿದ್ದು, ಯಾವಾಗ ರಾಕೆಟ್ ಚಂದ್ರನಿಗೆ ಅಪ್ಪಳಿಸಬಹುದೆಂದು ಲೆಕ್ಕಾಚಾರ ಮಾಡುತ್ತಿದ್ದಾರೆ.
ಮಾರ್ಚ್ 4 ರಂದು ಈ ರಾಕೆಟ್ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದ್ದರೂ ಚಂದ್ರನ ಯಾವ ಭಾಗಕ್ಕೆ ಅಪ್ಪಳಿಸಬಹುದು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ಬಹಳ ಕಠಿಣ ವಿಚಾರ ಎಂದು ತಜ್ಞರು ತಿಳಿಸಿದ್ದಾರೆ.
ಯಾವುದೇ ಉದ್ದೇಶವಿಲ್ಲದೇ ಬಾಹ್ಯಾಕಾಶದ ಕಸವೊಂದು ಚಂದ್ರನ ಮೇಲೆ ಅಪ್ಪಳಿಸುತ್ತಿರುವುದು ಇದೇ ಮೊದಲು. ಅಪ್ಪಳಿಸಿದ ನಂತರ ಸೃಷ್ಟಿಯಾಗುವ ಕುಳಿಯ ಬಗ್ಗೆ ತಿಳಿಯುವ ವೈಜ್ಞಾನಿಕ ಕುತೂಹಲ ಹೆಚ್ಚಾಗಿದೆ ಎಂದು ಬಿಲ್ ಗ್ರೇ ಹೇಳಿದ್ದಾರೆ.