ಇತ್ತೀಚಿನ ಸುದ್ದಿ
ಬುದ್ಧ ಪೂರ್ಣಿಮೆ: ದಕ್ಷಿಣ ಕಾಶಿ ನಂಜನಗೂಡು ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ; ಕಪಿಲಾ ನದಿಯಲ್ಲಿ ಪುಣ್ಯಸ್ನಾನ
23/05/2024, 19:57
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.ಕಂ
ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಇಂದು ಗುರುವಾರ ಬೆಳಗಿನ ಜಾವ 5 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸರತಿ ಸಾಲಿನಲ್ಲಿ ದೇವಾಲಯ ಪ್ರವೇಶಿಸಿದರು. ಹರಕೆ ಹೊತ್ತ ಭಕ್ತಾಧಿಗಳು ಉರುಳು ಸೇವೆ, ಮುಡಿ ಸೇವೆ ಹಾಗೂ ತುಲಾಭಾರ ಸೇವೆಗಳನ್ನು ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಇನ್ನು ಬುದ್ಧ ಹುಣ್ಣಿಮೆ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಧಾರ್ಮಿಕ ಪೂಜೆ ನೆರವೇರಿಸಲಾಯಿತು. ಬೆಳಿಗ್ಗೆ 8ರ ನಂತರ ದೇವಾಲಯಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗಿತ್ತು , ಹೀಗಾಗಿ ನೂರು ರೂಪಾಯಿ ವಿಶೇಷ ಟಿಕೇಟ್ ಮೂಲಕ ದೇವಾಲಯದ ಪ್ರವೇಶ ಪಡೆದುಕೊಳ್ಳುವವರು ಸುಮಾರು ಎರಡು ಗಂಟೆ ಸರತಿ ಸಾಲಿನಲ್ಲಿ ನಿಂತು ದೇವಾಲಯ ಪ್ರವೇಶ ಪಡೆದುಕೊಳ್ಳಬೇಕಾಯಿತು.
ನೂರಾರು ಸಂಖ್ಯೆಯಲ್ಲಿ ಧರ್ಮದರ್ಶನ ಸಾಲಿನಲ್ಲಿ ನಿಂತಿದ್ದರಿಂದ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಒಳಪ್ರವೇಶಿಸಿದರು. ದಾಸೋಹ ಭವನದಲ್ಲಿ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಕಂಡುಬಂದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.