ಇತ್ತೀಚಿನ ಸುದ್ದಿ
ಭ್ರಷ್ಟಾಚಾರ, ದುಂದು ವೆಚ್ಚ ಕಡಿಮೆ ಮಾಡಿ; ಹಾಲು ಬೆಲೆ 1 ರೂ. ಕಡಿತ ಆದೇಶ ವಾಪಸ್ ಪಡೆಯಿರಿ: ರೈತ ಸಂಘ ಆಗ್ರಹ
06/07/2021, 09:12
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಒಕ್ಕೂಟದಲ್ಲಿ ದುಂದು ವೆಚ್ಚ ಹಾಗೂ ಬಿಎಂಸಿಗಳಲ್ಲಿನ ಭ್ರಷ್ಟಾಚಾರತೆಗೆ ಕಡಿವಾಣ ಹಾಕಿ ಒಂದೂವರೆ ರೂಪಾಯಿ ಹಾಲು ಬೆಲೆ ಕಡಿತದ ಆದೇಶವನ್ನು ವಾಪಸ್ಸು ಪಡೆದು ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ತಿಪ್ಪಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು .
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ , ಕೊರೊನಾ 1 ನೇ ಹಾಗೂ 2 ನೇ ಅಲೆ ಸೃಷ್ಟಿಸಿರುವ ಅವಾಂತರಗಳಿಗೆ ಲಕ್ಷಾಂತರ ದುಡಿಯುವ ಕೈಗೆ ಕೆಲಸವಿಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆಯಿಲ್ಲದೆ ಕುಟುಂಬದ ನಿರ್ವಹಣೆ ಕಷ್ಟವಾಗಿರುವ ಸಮಯದಲ್ಲಿ ಸಂಜೀವಿನಿಯಂತೆ ಹೈನೋದ್ಯಮವು ಲಕ್ಷಾಂತರ ಕುಟುಂಬಗಳ ಕೈ ಹಿಡಿದಿದೆ ಎಂದು ಹೇಳಿದರು . ಆದರೆ ಇಂದು ಮುಂಗಾರು ಮಳೆ ಚುರುಕುಗೊಂಡು ಮೇವು ಸಮರ್ಪಕವಾಗಿ ದೊರೆಯುವ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು , ಅದರಂತೆ ಹಾಲು ಉತ್ಪನ್ನಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಮಾರಾಟವಾಗದ ಹಿನ್ನೆಲೆ ಗೋದಾಮುಗಳಲ್ಲಿ ಹಾಲು ಉತ್ಪನ್ನಗಳು ಕೊಳೆಯುತ್ತಿವೆ . ಹೀಗಾಗಿ ಸರ್ಕಾರ ಮಾತುಕತೆ ನಡೆಸಿ ಹಾಲು ಉತ್ಪನ್ನಗಳನ್ನು ಹಾಗೂ ಹಾಲನ್ನು ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಗರ್ಭಿಣಿಯರ ಪೌಷ್ಟಿಕತೆ ಕಾಪಾಡಲು ಉಚಿತವಾಗಿ ನೀಡುವ ಮುಖಾಂತರ ಕೊರೊನಾ 3 ನೇ ಅಲೆಯಿಂದ ಬಡವರನ್ನು ರಕ್ಷಣೆ ಮಾಡುವ ಜೊತೆಗೆ ನಷ್ಟದಲ್ಲಿರುವ ಒಕ್ಕೂಟದ ನೆರವಿಗೆ ಸರ್ಕಾರ ನಿಲ್ಲುವ ಮುಖಾಂತರ ನಷ್ಟದಲ್ಲಿರುವ ಒಕ್ಕೂಟದ ಪರ ನಿಲ್ಲಬೇಕು ಎಂದು ಆಗ್ರಹಿಸಿದರು . ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ . ಒಕ್ಕೂಟದ ನಷ್ಟ ತಪ್ಪಿಸಲು ಪ್ರತಿ ಲೀಟರ್‌ಗೆ 1.50 ರೂ ಕಡಿತ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ . ಒಕ್ಕೂಟದಲ್ಲಿನ ಆಡಳಿತ ಮಂಡಳಿ ಲಂಗು ಲಗಾಮಿಲ್ಲದೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಜೊತೆಗೆ ಒಂದು ವರ್ಷಗಳ ಕಾಲ ಯಾವುದೇ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು . ಜೊತೆಗೆ ಜಿಲ್ಲಾದ್ಯಂತ ನಿರ್ಮಿಸಿರುವ ಬಿಎಂಸಿಗಳಲ್ಲಿನ ಭ್ರಷ್ಟಾಚಾರತೆಗೆ ಕಡಿವಾಣ ಹಾಕಲು ಪ್ರತಿ ಬಿಎಂಸಿಗಳಲ್ಲಿ ಸಿಸಿಕ್ಯಾಮೆರಾ ದಿನದ 24 ಗಂಟೆ ನಿರ್ವಹಿಸುವ ಹಾಗೆ ಅಳವಡಿಸಬೇಕು ಹಾಗೂ ಬಿಎಂಸಿಗಳಲ್ಲಿ ಹಾಲು ಕೊಂಡೊಯ್ಯುವ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವ ಮುಖಾಂತರ ಗುಣಮಟ್ಟದ ಹಾಲಿಗೆ ನೀರು ಬೆರೆಸುವ ದಂಧೆ ಕೋರರ ಮೇಲೆ ನಿಗಾ ಇಡಬೇಕೆಂದು ಆಗ್ರಹಿಸಿದರು . ಅಲ್ಲದೆ ಈಗಾಗಲೇ ಕಡಿತ ಮಾಡಿರುವ ಹಾಲಿನ ಧರದ ಆದೇಶವನ್ನು ವಾಪಸ್ಸು ಪಡೆದು ಪ್ರತಿ ಲೀಟರ್‌ಗೆ 40 ರೂಪಾಯಿ ಬೆಲೆ ನಿಗಧಿ ಮಾಡಿ ಪಶು ಆಹಾರವನ್ನು ಉಚಿತವಾಗಿ ನೀಡುವ ಮುಖಾಂತರ ಸಂಕಷ್ಟದಲ್ಲಿರುವ ಹೈನೋದ್ಯಮ ನಂಬಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆಗೆ ಒಕ್ಕೂಟ ನಿಲ್ಲಬೇಕೆಂದು ಒತ್ತಾಯಿಸಿದರು . ಮನವಿ ಸ್ವೀಕರಿಸಿ ಮಾತನಾಡಿದ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ತಿಪ್ಪಾರೆಡ್ಡಿ , ಹಾಲು ಉತ್ಪನ್ನಗಳು ಗೋದಾಮುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಳೆಯುತ್ತಿರುವ ಕಾರಣ ಬೆಲೆ ಕಡಿತ ಮಾಡಿದ್ದು , ಈ ಬಗ್ಗೆ ಆಡಳಿತ ಮಂಡಳಿ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು . ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ , ಮಂಗಸಂದ್ರ ನಾಗೇಶ್ , ತಿಮ್ಮಣ್ಣ , ಯಲ್ಲಪ್ಪ , ದೊಂಬರಹಳ್ಳಿ ನವೀನ್ , ವೇಣು , ಸುಪ್ರೀಂ ಚಲ , ಚಂದ್ರಪ್ಪ , ಆನಂದರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು .