ಇತ್ತೀಚಿನ ಸುದ್ದಿ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
19/02/2026, 21:49
ಬೆಂಗಳೂರು(reporterkarnataka.com): ಬಿಜೆಪಿ ಆಡಳಿತದಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದ್ದರಿಂದ ಬಿಜೆಪಿಯನ್ನು ಹೊಸಕಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಇದ್ಯಾವುದೂ ಫಲಿಸುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜ ಸಚಿವ ಪ್ರಲ್ಹಾದ ಜೋಶಿ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ನಡೆದ ರಾಜ್ಯ ಕಾರ್ಯಕಾರಣಿ ಸಭೆಯ ಸಮಾರೋಪ ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ವಿಶ್ವದಲ್ಲಿ ಅತಿ ದೊಡ್ಡ ಪಕ್ಷವಾಗಿದೆ. ಶ್ರೀಸಾಮಾನ್ಯ ಕಾರ್ಯಕರ್ತರಿಂದಾಗಿ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರನ್ನೂ ಗುರುತಿಸಿ, ಮನ್ನಣೆ ನೀಡಲಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ಐದನೇ ಬಾರಿ ಆಯ್ಕೆಯಾದ ನನ್ನ ಗೆಲುವಿಗೆ ಈ ಹಿಂದಿನ ಹಿರಿಯರು ಹಾಗೂ ಕಾರ್ಯಕರ್ತರು ಹಾಕಿದ ಅಡಿಪಾಯವೇ ಕಾರಣ ಎಂದು ಸ್ಮರಿಸಿದರು.
*ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ನಿಶ್ಚಿತ:* ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕುತ್ತೇವೆ ಎಂದ ಜೋಶಿ, ದೇಶದ ಭವಿಷ್ಯದ ದೃಷ್ಟಿಯಿಂದ 2047ರ ವಿಕಸಿತ ಭಾರತದ ನಿರ್ಮಾಣದತ್ತ ಹೆಜ್ಜೆ ಹಾಕೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
*ಈ ಸರ್ಕಾರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್:* ರಾಜ್ಯದಲ್ಲಿ ದುರಾಡಳಿತದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಸುಳ್ಳು ಕೇಸ್ ಗಳನ್ನು ಹಾಕಿ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.
ನನ್ನ ಮೇಲು ಸುಳ್ಳು ಕೇಸ್ ಗಳಿತ್ತು. ಕೋರ್ಟ್ ಗಳಿಗೆ ಅಲೆದಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ಈ ಎಲ್ಲಾ ಸುಳ್ಳು ಕೇಸ್, ಎಫ್ಐಆರ್ ಗಲನ್ನು ತೆಗೆಯುತ್ತೇವೆ. ಕಾಂಗ್ರೆಸ್ ಸರ್ಕಾರದ ಈ ಬೆದರಿಕೆ ಬಗ್ಗೆ ಕಾರ್ಯಕರ್ತರು ಆತಂಕ, ಭಯಪಡುವ ಅಗತ್ಯವಿಲ್ಲ ಎಂದು ಸ್ಥೈರ್ಯ ಹೇಳಿದರು ಜೋಶಿ.
ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್, ಜೋಧಪುರ್, ಮಾಜಿ ಸಿಎಂ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಮೋಹನ್, ಸಹ-ಉಸ್ತುವಾರಿಗಳಾದ ಸುಧಾಕರ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಿಎಂ ಮತ್ತು ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಮಾಜಿ ಸಚಿವ ವಿ.ಶ್ರೀರಾಮುಲು ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಶಾಸಕ, ಸಂಸದರು ಉಪಸ್ಥಿತರಿದ್ದರು.












